ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ನಮ್ಮ ದೃಷ್ಟಿಕೋನ ಬದಲಿಸದ ಹೊರತು ಸಾಧನೆ ಅಸಾಧ್ಯ. ನಮ್ಮಲ್ಲಿ ಬದುಕಿನ ಬಗೆಗೆ ಅದಮ್ಯ ಛಲವನ್ನು ರೂಢಿಸಿಕೊಳ್ಳಬೇಕು. ನಮ್ಮ ವರ್ತಮಾನ, ಭವಿಷ್ಯವನ್ನು ನಾವೇ ನಿರ್ಧರಿಸುವ ನಿರೂಪಿಸುವ ಸಾಮರ್ಥ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ನಮ್ಮ ಹಾಗೂ ದೇಶದ ಹಣೆಬರಹವನ್ನು ಸುಧಾರಿಸಲು ಸಾಧ್ಯ ಎಂದು ಪ್ರಾಚಾರ್ಯ ಡಾ. ರವೀಂದ್ರ ಕೆಸಿ ಹೇಳಿದರು.
ಶಿಕಾರಿಪುರ ಪಟ್ಟಣದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ “ದೇಶ ಇಂದು ಜ್ಞಾನಾಧಾರಿತ, ಕೌಶಲ್ಯಾಧಾರಿತವಾಗಿ ಬೆಳೆಯುತ್ತಿದೆ. ಅದಕ್ಕೆ ಪೂರಕವಾದ ಬದಲಾವಣೆ ನಮ್ಮಲ್ಲಿ ಬರಬೇಕಿದೆ ಆಗ ಮಾತ್ರ ಸಮಾಜದ ಏಳಿಗೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಲು ಸಾಧ್ಯ” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಾಪಕ ಕೋಟೋಜಿರಾವ್ ಆರ್ “ಇಂದಿನ ಯುವ ಜನಾಂಗ ಸಮಾಜದ ಆಶಾಕಿರಣವಾಗಿದ್ದು, ತಮ್ಮಲ್ಲಿ ಸಮರ್ಪಣಾ ಮನೋಭಾವ ಹಾಗೂ ದಿವ್ಯತೆಯನ್ನು ಪಡೆದುಕೊಂಡಲ್ಲಿ ಯಶಸ್ಸು ಸಾಧ್ಯ” ಎಂದು ಕಿವಿ ಮಾತು ಹೇಳಿದರು.
ಅಧ್ಯಾಪಕರಾದ ಪ್ರಕಾಶ್ ಉಪಾಧ್ಯಾಯ ಮಾತನಾಡಿ “ಸಾಧನೆಯ ಹೊರತಾಗಿಯೂ ಮಾನವ ಸಹಜವಾದ ಒಳ್ಳೆಯ ಗುಣಗಳನ್ನು ಬೆಳಸಿಕೊಂಡು ಇತರರಿಗೆ ಮಾದರಿ ವ್ಯಕ್ತಿಯಾಗಬೇಕು. ಕೆಲವರು ತಮ್ಮ ವ್ಯಕ್ತಿತ್ವದಿಂದಲೇ ಬಹುವಾಗಿ ಕಾಡುತ್ತಾರೆ ನೆನಪಾಗುತ್ತಾರೆ. ಗಾಂಧೀಜಿ, ವಿವೇಕಾನಂದರಂತ ವ್ಯಕ್ತಿತ್ವ ನಿಮ್ಮದಾಗಲಿ” ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಅಧ್ಯಾಪಕರಾದ ಬಾಲಾಜಿ, ಹಂಸ, ಪ್ರೀಯಾಂಕಾ, ಸಿಂಧೂ, ಶ್ವೇತಾ ಉಪಸ್ಥಿತರಿದ್ದು, ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಆಭಿಪ್ರಾಯಗಳನ್ನು ಹಂಚಿಕೊಂಡರು. ವಿದ್ಯಾರ್ಥಿನಿ ಸ್ವಾತಿ ಮತ್ತು ಸಂಗಡಿಗರು ಪ್ರಾರ್ಥಿಸಿ, ಚೈತ್ರಾ ಪಿ.ಟಿ ಸ್ವಾಗತಿಸಿ, ಆಶಾ ಎಸ್ ವಂದಿಸಿ, ಅಂಕಿತಾ ಸಿ.ಕೆ ನಿರೂಪಿಸಿದರು. ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















