ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವ ನೈಋತ್ಯ ರೈಲ್ವೆ #SouthWesternRailway ಇದೇ ನವೆಂಬರ್ ತಿಂಗಳಿನಲ್ಲಿ ಸರಕು ಸಾಗಾಣೆ ಆದಾಯದಲ್ಲಿಯೂ ಸಹ ಹೊಸ ದಾಖಲೆ ಬರೆಯುವ ಮೂಲಕ ಸಾಧನೆ ಮಾಡಿದೆ.
ಈವರೆಗಿನ ಅತ್ಯುತ್ತಮ 4.47 ಮಿಲಿಯನ್ ಟನ್ ಸರಕು ಸಾಗಣೆ ದಾಖಲಿಸಿದ್ದು, ಸರಕು ಸಾಗಣೆ ಆದಾಯ ನವೆಂಬರ್ 2025ರಲ್ಲಿ 451 ಕೋಟಿಗೆ ಏರಿಕೆಯಾಗಿ, ಶೇಕಡಾ 11ರಷ್ಟು ಬಲವಾದ ಬೆಳವಣಿಗೆ ಸಾಧಿಸಿದೆ.
ಪ್ರಯಾಣಿಕರ ಆದಾಯ 297 ಕೋಟಿಗೆ ತಲುಪಿದ್ದು, ಈ ತಿಂಗಳಲ್ಲಿ 14.8 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಲಾಗಿದ್ದು, ವಲಯವು ನವೆಂಬರ್ ತಿಂಗಳಿಗೆ ಒಟ್ಟು 790.75 ಕೋಟಿ ಆದಾಯ ಗಳಿಸಿದೆ.
ನೈಋತ್ಯ ರೈಲ್ವೆ #SWR ನವೆಂಬರ್ 2025ರಲ್ಲಿ ಸರಕು ಸಾಗಣೆ ಮತ್ತು ಆದಾಯದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಸಾಧಿಸಿದ್ದು, ಪ್ರಮುಖ ಕಾರ್ಯಾಚರಣಾ ಕ್ಷೇತ್ರಗಳಲ್ಲಿ ತನ್ನ ಸಕಾರಾತ್ಮಕ ಸಾಧನೆಯ ವೇಗವನ್ನು ಮುಂದುವರೆಸಿದೆ. ಈ ತಿಂಗಳು ವಲಯವು 4.469 ಮಿಲಿಯನ್ ಟನ್ ಮೂಲ ಸರಕು ಸಾಗಣೆಯನ್ನು ನಿರ್ವಹಿಸಿದ್ದು, ಕಳೆದ ವರ್ಷ ಇದೇ ತಿಂಗಳಲ್ಲಿ ಸಾಧಿಸಿದ 3.941 ಮಿಲಿಯನ್ ಟನ್’ಗಿಂತ ಶೇ 13.4 ಹೆಚ್ಚಾಗಿದೆ. ಕಚ್ಚಾ ಸಾಮಗ್ರಿ ಸ್ಟೀಲ್ ಕಾರ್ಖಾನೆಗೆ, #SteelFactory ಪಿಗ್ ಐರನ್ ಮತ್ತು ಉಕ್ಕು, ಕಬ್ಬಿಣದ ಅದಿರು, ರಸಗೊಬ್ಬರ, ಕಂಟೇನರ್’ಗಳು ಮತ್ತು ಇತರ ಸರಕುಗಳ ಹೆಚ್ಚು ಲೋಡಿಂಗ್ ಈ ಸಾಧನೆಗೆ ಕಾರಣವಾಗಿದೆ.

ಇನ್ನು, ರಸಗೊಬ್ಬರ ಲೋಡಿಂಗ್ 0.129 ಮಿಲಿಯನ್ ಟನ್ ಆಗಿ ಶೇ. 40.2 ಬೆಳವಣಿಗೆ ಪಡೆದುಕೊಂಡಿದೆ. ಕಂಟೇನರ್ ಸಂಚಾರ ಶೇ. 15.3 ಮತ್ತು ಇತರ ಸರಕುಗಳು ಶೇ 29.6ರಷ್ಟು ಏರಿಕೆಯನ್ನು ಕಂಡು, ನೈಋತ್ಯ ರೈಲ್ವೆಯ ಬಲವಾದ ಸರಕು ನಿರ್ವಹಣಾ ಸಾಮರ್ಥ್ಯ ಮತ್ತು ಕೈಗಾರಿಕಾ ಕ್ಷೇತ್ರದ ನಿರಂತರ ಬೇಡಿಕೆಯನ್ನು ಮತ್ತಷ್ಟು ಸ್ಪಷ್ಟಪಡಿಸಿದೆ.
ನವೆಂಬರ್ 2025ರವರೆಗೂ ಒಟ್ಟು ಸರಕು ಸಾಗಣೆ 33.292 ಮಿಲಿಯನ್ ಟನ್ ಆಗಿದ್ದು, ಕಳೆದ ವರ್ಷದ ಇದೇ ಅವಧಿಯ 28.34 ಮಿಲಿಯನ್ ಟನ್’ಗಿಂತ ಶೇ 17.5 ಹೆಚ್ಚಾಗಿದೆ. ಪಿಗ್ ಐರನ್ ಮತ್ತು ಸ್ಟೀಲ್, ಕಬ್ಬಿಣದ ಅದಿರು, ರಸಗೊಬ್ಬರ ಹಾಗೂ ಕಂಟೇನರ್ ಸರಕುಗಳಲ್ಲಿ ಕಂಡುಬಂದ ಸುಧಾರಣೆಗಳು ನೈಋತ್ಯ ರೈಲ್ವೆಯು ಹೆಚ್ಚುವರಿ ಸರಕುಗಳನ್ನು ಆಕರ್ಷಿಸುವಲ್ಲಿ ಮತ್ತು ಪಾಲುದಾರರೊಂದಿಗೆ ಸಮನ್ವಯ ಸುಧಾರಿಸುವಲ್ಲಿ ಸಾಧಿಸಿರುವ ಯಶಸ್ಸನ್ನು ತೋರಿಸುತ್ತವೆ.
ನವೆಂಬರ್ 2025ರವರೆಗೆ ಒಟ್ಟಾರೆ ಆದಾಯದಲ್ಲಿ ಕೂಡಾ ಗಣನೀಯ ಸುಧಾರಣೆ ಕಂಡುಬಂದಿದೆ. ಪ್ರಯಾಣಿಕರ ಆದಾಯ 2247 ಕೋಟಿಗೆ ತಲುಪಿದ್ದು, ಇದು ಶೇ 6.67 ಹೆಚ್ಚಳ ಕಂಡಿದೆ. ಸರಕು ಆದಾಯ 3458 ಕೋಟಿಗೆ ಏರಿಕೆಗೊಂಡಿದ್ದು, ಇದು ಶೇ 22.79 ಬೆಳವಣಿಗೆ ತಂದಿದೆ. ಇತರ ಕೋಚಿಂಗ್ ಆದಾಯ 221.96 ಕೋಟಿಯಾಗಿದ್ದು, ಇತರ ಆದಾಯ 144.54 ಕೋಟಿ ಆಗಿದೆ. ಈ ಅವಧಿಯ ಒಟ್ಟು ಆದಾಯ 6072.31 ಕೋಟಿಗೆ ತಲುಪಿದ್ದು, ಇದು ಹಿಂದಿನ ವರ್ಷಗಿಂತ ಶೇ15.12 ಹೆಚ್ಚಾಗಿದೆ.
ಸರಕು ಸಾಗಣೆ ಮತ್ತು ಆದಾಯದಲ್ಲಿ ಕಂಡುಬಂದ ಈ ನಿರಂತರ ಬೆಳವಣಿಗೆ ನೈಋತ್ಯ ರೈಲ್ವೆಯ ಕಾರ್ಯಾಚರಣೆ ದಕ್ಷತೆ, ಗ್ರಾಹಕರೊಂದಿಗೆ ಬಲವಾದ ಸಂಬಂಧ ನಿರ್ಮಾಣ ಮತ್ತು ಟರ್ಮಿನಲ್ ಹಾಗೂ ಲೋಡಿಂಗ್ ಮೂಲಸೌಕರ್ಯ ಸುಧಾರಣೆಯಲ್ಲಿ ಕೈಗೊಂಡಿರುವ ಪ್ರಯತ್ನಗಳ ಪರಿಣಾಮವಾಗಿದೆ. ವಲಯವು ಮುಂದುವರಿದು ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿ, ಪ್ರಾದೇಶಿಕ ಸಾರಿಗೆ ಅಗತ್ಯಗಳಿಗೆ ಪರಿಣಾಮಕಾರಿಯಾಗಿ ಸೇವೆ ನೀಡಲು ಬದ್ಧವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post