ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಸುಗಮ ಸಂಚಾರಕ್ಕೆ ಸಂಚಾರಿ ಪೊಲೀಸ್ ವತಿಯಿಂದ ವ್ಯಾಪಕ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಇತ್ತೀಚೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಅಡ್ಡಾದಿಡ್ಡಿ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ನಿಲುಗಡೆಯಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಹಿನ್ನಲೆಯಲ್ಲಿ ಖುದ್ಧಾಗಿ ಜಿಲ್ಲಾ ರಕ್ಷಣಾಧಿಕಾರಿಗಳು ವರ್ತಕರ ಸಭೆ ಕರೆದು ಕುಂದು-ಕೊರತೆಗಳನ್ನು ಆಲಿಸಿ, ಅವರಿಂದ ಸಲಹೆ ಪಡೆದಿದ್ದರು.

ಇತ್ತೀಚೆಗೆ ಆರ್‍ಟಿಓ, ಜಿಲ್ಲಾ ಪೊಲೀಸ್, ಸಂಚಾರಿ ಪೊಲೀಸ್, ಕಾನೂನು ಸೇವಾ ಪ್ರಾಧಿಕಾರದ ಸಭೆಯಲ್ಲಿ ನ್ಯಾಯಾಧೀಶರಾದ ಸಂತೋಷ್‍ಕುಮಾರ್, ಸಾರ್ವಜನಿಕರಿಗೆ ಮನವಿ ಮಾಡಿದ್ದರು. ಡಿ.12ರ ವರೆಗೆ ಸಂಚಾರಿ ನಿಯಮಗಳ ಉಲ್ಲಂಘನೆಯ ದಂಡದಲ್ಲಿ ಸರ್ಕಾರದ ಆದೇಶದಂತೆ ಶೇ.50ರ ರಿಯಾಯಿತಿ ಇದ್ದು ಸಾರ್ವಜನಿಕರು ಇದರ ಲಾಭ ಪಡೆಯುವಂತೆ ಮನವಿ ಮಾಡಿದ್ದರು. ಈ ದೇಶದ ಪ್ರಜ್ಞಾವಂತ ನಾಗರೀಕರಾಗಿ ಸಾರ್ವಜನಿಕರ ಕರ್ತವ್ಯವೂ ಇದೆ. ಕಾನೂನು ಪಾಲನೆ ಮಾಡುವುದು ನಿಯಮಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯವಾಗಿದ್ದು, ದಂಡವನ್ನು ತಪ್ಪಿಸಲು ಹಾಗೂ ಅಪಘಾತ ತಡೆಯಲು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಅತೀ ಅವಶ್ಯಕವಾಗಿದ್ದು ಸಂಚಾರಿ ಪೊಲೀಸರ ಜೊತೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಸಂಚಾರಿ ನಿರೀಕ್ಷಕ ದೇವರಾಜ್ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ಪ್ರಥಮವಾಗಿ ಕಳೆದ ಕೆಲವು ವರ್ಷಗಳಿಂದ ಗಾಂಧಿಬಜಾರ್’ನಲ್ಲಿ ಬೀದಿಬದಿ ವ್ಯಾಪಾರಸ್ಥರು ಮತ್ತು ತಳ್ಳುವ ಗಾಡಿಗಳಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಅವರ ಸಭೆ ಕರೆದು ಅವರಿಗೆ ತಿಳಿಹೇಳಿ ಒಂದಿಷ್ಟು ನಿರ್ಧಿಷ್ಟ ಸ್ಥಳಗಳಲ್ಲಿ ಅವಕಾಶಕೊಟ್ಟು ಗಾಂಧಿಬಜಾರ್‍ನ ಎರಡನೇ ಕ್ರಾಸ್‍ನಲ್ಲಿ ಸ್ವತಃ ಪೊಲೀಸರೇ ಬಿಳಿಲೈನನ್ನು ಹಾಕಿ, ವ್ಯಾಪಾರಸ್ಥರು ಆ ಲೈನಿನ ಹೊರಗೆ ಬರದಹಾಗೆ ಕಠಿಣ ಎಚ್ಚರಿಕೆ ನೀಡಿದ ಬಳಿಕ ಅಲ್ಲೊಂದಿಷ್ಟು ಸುಧಾರಣೆಯಾಗಿದೆ. ನಂತರ ಉಷಾ ಸರ್ಕಲ್ (ಅಕ್ಕ ಮಹಾದೇವಿ ವೃತ್ತ)ನಲ್ಲಿ ಸಿಗ್ನಲ್ ಇಲ್ಲದೆ ಬಹಳಷ್ಟು ಅವಾಂತರಗಳಿಗೆ ಕಾರಣವಾಗಿತ್ತು. ಈಗ ಅಲ್ಲಿ ಸಂಚಾರಿ ಸೋಲಾರ್ ಸಿಗ್ನಲ್ ಅಳವಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಕೆಎಸ್‍ಆರ್‍ಟಿಸಿ ಬಸ್ಸುಗಳು ಅನಗತ್ಯವಾಗಿ ನಗರ ಮಧ್ಯದಲ್ಲಿ ಓಡಾಡುತ್ತಿರುವುದನ್ನು ಡೈವರ್ಟ್‍ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ. ರೈಲ್ವೆನಿಲ್ದಾಣದಲ್ಲಿ ಸಾರ್ವಜನಿಕರಿಗೆ ಆಟೋಚಾಲಕರ ಹಾವಳಿ ತಡೆಯಲಾಗುತ್ತಿರಲಿಲ್ಲ. ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದರು. ಈಗ ಫ್ರೀಪೇಯ್ಡ್ ಆಟೋ ನಿಲ್ದಾಣ ಮಾಡಿದ ಬಳಿಕ ಅದು ಕೂಡ ಯಶಸ್ವಿಯಾಗಿ ನಡೆಯುತ್ತಿದೆ.

ಎಲ್ಲಾ ವರ್ತಕರು ಮತ್ತು ಆಸ್ಪತ್ರೆಯ ಮಾಲೀಕರು ತಮ್ಮ ಸಿಬ್ಬಂದಿಗಳ ವಾಹನಗಳನ್ನಾದರೂ ಕನ್ಸರ್‍ವೆನ್ಸಿಯಲ್ಲಿ ನಿಲ್ಲಿಸಿದರೆ ಸಾವಿರಕ್ಕೂ ಹೆಚ್ಚು ದ್ವಿಚಕ್ರವಾಹನಗಳು ಈ ಐದು ರಸ್ತೆಗಳಲ್ಲಿ ನಿಲುಗಡೆ ಸಮಸ್ಯೆಯಿಂದ ಮುಕ್ತಿ ಸಿಗಲಿದೆ. ಕೆಲವು ಸಂಸ್ಥೆಗಳು ತಮ್ಮದೇ ವೆಚ್ಚದಲ್ಲಿ ಇದರ ನಿರ್ವಹಣೆಗೂ ಒಪ್ಪಿದ್ದಾರೆ. ಒಟ್ಟಿನಲ್ಲಿ ಕನ್ಸರ್‍ವೆನ್ಸಿಯಲ್ಲಿ ವಾಹನ ನಿಲುಗಡೆ ಮಾಡುವುದರಿಂದ ನಗರದ ವಾಹನ ನಿಲುಗಡೆ ದಟ್ಟಣೆಯನ್ನು ಕಡಿಮೆಮಾಡಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.
ಈಗಾಗಲೇ ಪೊಲೀಸ್ ಇಲಾಖೆ, ಮೆಸ್ಕಾಂ ಹಾಗೂ ಪಾಲಿಕೆ ನೆರವಿನೊಂದಿಗೆ ಅನಾವಶ್ಯಕ ಕಂಬಗಳನ್ನು ತೆರವುಗೊಳಿಸುವ ಕಾರ್ಯ ಮಾಡುತ್ತಿದೆ. ಸಂಚಾರಿ ಪೊಲೀಸ್ ನಿರೀಕ್ಷಕರಂತೂ ತಮ್ಮ ಶಕ್ತಿಮೀರಿ ತಮ್ಮ ತಂಡದೊಂದಿಗೆ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post