ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೃಷಿ ವಿವಿ ವತಿಯಿಂದ ಕಲ್ಮನೆ ಗ್ರಾಮದ ಮಹಿಳೆಯರಿಗೆ ಆಯೋಜಿಸಲಾಗಿದ್ದ ಸಿರಿಧಾನ್ಯ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಸ್ಪರ್ಧೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಗ್ರಾಮದ ಗ್ರಾಮ ಪಂಚಾಯಿತಿ ಬಳಿ ನಡೆಸಲಾಯಿತು. ಮಹಿಳೆಯರ ಅಡುಗೆ ಕೌಶಲ್ಯಕ್ಕೆ ವೇದಿಕೆ ಒದಗಿಸುವುದರ ಜೊತೆಗೆ, ಸಿರಿಧಾನ್ಯಗಳ ಪೋಷಕ ಮೌಲ್ಯ ಹಾಗೂ ಅವುಗಳಿಂದ ಆದಾಯ ಮಾಡುವ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಗ್ರಾಮದ ಅನೇಕ ಮಹಿಳೆಯರು ಸ್ಪರ್ಧೆಯಲ್ಲಿ ಉತ್ಸಾಹಭರಿತವಾಗಿ ಪಾಲ್ಗೊಂಡು ವಿವಿಧ ರುಚಿಕರ ಹಾಗೂ ಆರೋಗ್ಯಕರ ಸಿರಿಧಾನ್ಯ ಆಧಾರಿತ ತಿಂಡಿಗಳನ್ನು ತಯಾರಿಸಿ ಪ್ರದರ್ಶಿಸಿದರು. ಮಿಲ್ಲೆಟ್ಸ್ ಕಿಲ್ಸಾ, ಸಂಡಿಗೆ ಪಾಯಸ, ನವಣೆ ದೋಸೆ, ನವಣೆ ರೊಟ್ಟಿ, ಜೋಳ ಸೂಪ್, ನವಣೆ ಪಲಾವ್ ಸೇರಿದಂತೆ ಬಹು ವಿಧದ ಸಿಹಿ ಮತ್ತು ಖಾರದ ತಿಂಡಿಗಳು ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿದವು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ಶಿಕ್ಷಣ ವಿಭಾಗದ ಡಾ. ಸಹನಾ ಎಸ್, ಕಲ್ಮನೆ ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ಉಮೇಶ್, ಪಿಡಿಒ ಸಯ್ಯದ್, ಹಾಗೂ ಸ್ವಸಹಾಯ ಸಂಘದ ನಾಗರತ್ನ ಉಪಸ್ಥಿತರಿದ್ದರು.
ಡಾ. ಸಹನಾ ಮಾತನಾಡಿ, ಸಿರಿಧಾನ್ಯಗಳನ್ನು ಬಳಸಿಕೊಂಡು ತಯಾರಿಸುವ ಮೌಲ್ಯವರ್ಧಿತ ಉತ್ಪನ್ನಗಳು ಪೌಷ್ಠಿಕತೆಯ ಜೊತೆಗೆ ಮಹಿಳೆಯರಿಗೆ ಉತ್ತಮ ಆದಾಯದ ಮಾರ್ಗ ಕೂಡಾ ಆಗಬಹುದು. ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಿ ಸ್ಥಳೀಯ ಮಾರುಕಟ್ಟೆಗೆ, ಅಂಗಡಿಗಳಿಗೆ ಒದಗಿಸುವ ಮೂಲಕ ಮಹಿಳೆಯರು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು ಎಂದರು.
ಗ್ರಾಮೀಣ ಮಹಿಳೆಯರು ಈ ಕ್ಷೇತ್ರದಲ್ಲಿ ಆಸಕ್ತಿ ತೋರಿದರೆ, ಉತ್ತಮ ಗುಣಮಟ್ಟದ ಉತ್ಪನ್ನಗಳ ಮೂಲಕ ತಮ್ಮ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು ಎಂದು ಡಾ. ಸಹನಾ ಹಿತವಚನ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಸುಧಾ ಉಮೇಶ್ ಅವರು ಮಹಿಳೆಯರು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದಲ್ಲದೆ, ಸ್ವಾವಲಂಬನೆಯತ್ತ ಮುನ್ನಡೆಯಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಪಿಡಿಒ ಸಯ್ಯದ್ ಮತ್ತು ನಾಗರತ್ನ ಅವರು ಸಹ ಮಹಿಳೆಯರ ಪ್ರದರ್ಶನಗಳನ್ನು ಪ್ರಶಂಸಿಸಿ, ಗ್ರಾಮ ಪಂಚಾಯಿತಿಯಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯಮಪ್ರೇರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಸ್ಪರ್ಧೆಯಲ್ಲಿ ಪಾಲ್ಗೊಂಡ ಮಹಿಳೆಯರ ಕೌಶಲ್ಯ ಮತ್ತು ಕ್ರಿಯಾಶೀಲತೆಯನ್ನು ಪರಿಗಣಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಲ್ಮನೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ.ಎಸ್ಸಿ (ಹಾನರ್ಸ್) ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಸ್ಪರ್ಧೆ ಆಯೋಜಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















