ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದರೆಯ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ #Alva’sEducationFoundation ನಡೆಯುವ ಆಳ್ವಾಸ್ ನುಡಿಸಿರಿ ವಿರಾಸತ್ ಸಾಂಸ್ಕೃತಿಕ ವೈಭವ ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಕಡೆ ಪ್ರದರ್ಶನಗೊಳ್ಳಲಿದೆ.
ದೇಶದ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸುವ ಈ ಅಪರೂಪದ ಅದ್ದೂರಿ ಕಾರ್ಯಕ್ರಮ ಡಿ.14ರ ಭಾನುವಾರ ಭದ್ರಾವತಿ ಹಾಗೂ ಡಿ.15ರ ಸೋಮವಾರ ಶಿವಮೊಗ್ಗದಲ್ಲಿ ನಡೆಯಲಿದೆ.
ಡಿ.14ರ ಭಾನುವಾರ ಭದ್ರಾವತಿಯ #Bhadravathi ಕನಕ ಮಂಟಪ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಅದೇ ರೀತಿಯಲ್ಲಿ ಶಿವಮೊಗ್ಗದ #Shivamogga ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್)ನಲ್ಲಿ ನಡೆಯಲಿದೆ.
ಎರಡೂ ಕಡೆಗಳಲ್ಲಿ ಸಂಜೆ 5.45ಕ್ಕೆ ಆರಂಭಗೊಂಡು 45 ನಿಮಿಷದ ಸಭಾ ಕಾರ್ಯಕ್ರಮದ ನಂತರ ಸರಿಯಾಗಿ 6.30ಕ್ಕೆ ಆರಂಭಗೊಳ್ಳುವ ಸಾಂಸ್ಕೃತಿಕ ಪ್ರದರ್ಶನ 3 ಗಂಟೆಗಳ ಕಾಲ ನಡೆಯಲಿದೆ.
ಕಾರ್ಯಕ್ರಮ ನಿಗದಿತ ಸಮಯಕ್ಕೆ ಸರಿಯಾಗಿ ನಡೆಯಲಿದ್ದು, ಸಾರ್ವಜನಿಕರು 10 ನಿಮಿಷ ಮುಂಚಿತವಾಗಿಯೇ ಆಸೀನರಾಗಬೇಕು. ದೇಶದ ವಿವಿಧ ರಾಜ್ಯಗಳ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸುವ ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷರಾದ ಡಾ.ಎಂ. ಮೋಹನ್ ಆಳ್ವ #DrMohanAlva ಕೋರಿದ್ದಾರೆ.
ಏನಿದು ಆಳ್ವಾಸ್ ಸಾಂಸ್ಕೃತಿಕ ವೈಭವ?
ಆಳ್ವಾಸ್ ಸಾಂಸ್ಕೃತಿಕ ವೈಭವ ಎನ್ನುವುದು ನಮ್ಮ ದೇಶದ ಸಾಂಸ್ಕೃತಿಕ ಸೊಗಡನ್ನು ಬಿಂಬಿಸುವ ಹಾಗೂ ಈ ಮೂಲಕ ಕಲೆ, ಸಂಗೀತ, ನೃತ್ಯ, ಯಕ್ಷಗಾನ ಸಂಸ್ಕೃತಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮವಾಗಿದೆ. ಸುಮಾರು 500 ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸತತ ಮೂರು ಗಂಟೆಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ನಮ್ಮ ಪರಂಪರೆಯ ಶ್ರೇಷ್ಟ ಕಲಾ ಪ್ರಕಾರಗಳಾದ ಯೋಗ ದೀಪಿಕ, ಶಾಸ್ತ್ರೀಯ ನೃತ್ಯ, ಬಡಗುತಿಟ್ಟು ಯಕ್ಷಗಾನ-ಶ್ರೀರಾಮ ಪಟ್ಟಾಭಿಷೇಕ, ಗುಜರಾತಿನ ಗಾರ್ಭಮತ್ತು ದಾಂಡಿಯಾ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಲ್ಲಕಂಬ ಹಾಗೂ ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ನೃತ್ಯ-ವರ್ಷಧಾರೆ, ಪುರುಲಿಯಾ ತೆಂಕು ತಿಟ್ಟು ಯಕ್ಷಗಾನ-ಅಗ್ರಪೂಜೆ, ಬೊಂಬೆ ವಿನೋದಾವಳಿಗಳು ಅನಾವರಣಗೊಳ್ಳಲಿವೆ.
ಇನ್ನು, ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು 10 ನಿಮಿಷ ಮುಂಚಿತವಾಗಿಯೇ ಬಂದು ಆಸೀನರಾಗುವಂತೆ ವಿನಂತಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ತಿಂಡಿ-ತಿನಿಸುಗಳ ಸ್ಪಾಲ್’ಗಳನ್ನು ತೆರೆಯಲಾಗಿದೆ. ಈಗಾಗಲೇ ಹಲವು ಬಾರಿ ಶಿವಮೊಗ್ಗ ನಗರದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳು ನಡೆದಿವೆ. ಆದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದು ಇದೇ ಮೊದಲು.
ಶಿವಮೊಗ್ಗದ ಮಟ್ಟಿಗೆ ಇದೊಂದು ಅಪರೂಪದ ಹಾಗೂ ಮಾಗಿಯ ಛಳಿಯಲ್ಲಿ ಬೆಚ್ಚಗಿನ ಕಾರ್ಯಕ್ರಮ. ವಿಶೇಷವೆಂದರೆ, ಈ ಕಾರ್ಯಕ್ರಮಕ್ಕೆ ನಗರದ ಮೂವತ್ತಕ್ಕೂ ಹೆಚ್ಚು ಸಮಾನ ಮನಸ್ಕ ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ಈಗಾಗಲೇ ನಗರದ ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಸಂಘ ಸಂಸ್ಥೆಗಳು, ವ್ಯಾಪಾರಸ್ಥರುಗಳಿಗೆ ವೈಯಕ್ತಿಕವಾಗಿ ಆಹ್ವಾನ ನೀಡಲಾಗಿದೆ. ಸರಿ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸೇರುವ ನಿರೀಕ್ಷೆಯಿದ್ದು ಆಹ್ವಾನಿತ ಗಣ್ಯರಿಗೆ, ಸಾರ್ವಜನಿಕರಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















