ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಜೈವಿಕ ಇಂಧನದ ಮಹತ್ವದ ಬಗ್ಗೆ ಗುಂಪು ಚರ್ಚೆಯನ್ನು ಚಿಕ್ಕಜೋಗಿಹಳ್ಳಿಯ ಬಸವೇಶ್ವರ ದೇವಸ್ಥಾನ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇಂಧನ ಬೇಡಿಕೆ ದಿನೇ ದಿನೇ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪೆಟ್ರೋಲಿಯಂ ಇಂಧನಗಳ ಮಿತವಾದ ಲಭ್ಯತೆ ಹಾಗೂ ಇವುಗಳಿಂದ ಉಂಟಾಗುವ ಪರಿಸರ ಮಾಲಿನ್ಯವು ಗಂಭೀರ ಸಮಸ್ಯೆಯಾಗಿ ಪರಿಗಣಿಸಿದೆ. ಈ ಸಂದರ್ಭದಲ್ಲಿ ಜೈವಿಕ ಇಂಧನವು ಒಂದು ಪರಿಸರ ಸ್ನೇಹಿ ಹಾಗೂ ನವೀಕರಿಸಬಹುದಾದ ಪರ್ಯಾಯ ಇಂಧನವಾಗಿ ಮಹತ್ವ ಪಡೆಯುತ್ತಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಹೊಂಗೆ, ಜೆಟ್ರೋಪ, ಬೇವು, ಸಿಮಾರೂಬ ಮುಂತಾದ ಮರಗಳ ಬೀಜಗಳನ್ನು ಬೆಳೆಸಿಕೊಂಡು ಜೈವಿಕ ಇಂಧನವನ್ನು ತಯಾರಿಸಲಾಗುತ್ತದೆ. ಇಂತಹ ಮರಗಳನ್ನು ರೈತರು ತಮ್ಮ ಹೊಲದ ಬದುಗಳಲ್ಲಿ ಬೆಳೆಸಿ ಅವುಗಳ ಬೀಜಗಳನ್ನು ಮಾರಿ ಹೆಚ್ಚಿನ ಆದಾಯವನ್ನು ಪಡೆಯಬಹುದು. ಈ ಮರಗಳನ್ನು ಬರಡಾದ ಕಡಿಮೆ ಫಲವತ್ತತೆ ಭೂಮಿಯಲ್ಲಿ ಬೆಳೆಯಬಹುದು. ಬೀಜಗಳಿಂದ ಎಣ್ಣೆ ತೆಗೆದು ಜೈವಿಕ ಇಂಧನ ತಯಾರಿಸಲಾಗುತ್ತದೆ ಹಾಗೂ ನಂತರ ಉಳಿದ ಪದಾರ್ಥಗಳಿಂದ ಸೋಪ್, ಫಿನಾಯಿಲ್, ಹಿಂಡಿ ಮುಂತಾದ ಪದಾರ್ಥಗಳನ್ನು ತಯಾರಿಸಬಹುದೆಂದು ತಿಳಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ನೆರೆದಿದ್ದ ರೈತರಿಗೆ ಸಸಿಗಳನ್ನು ನೀಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
