ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಳೆದ 12 ವರ್ಷಗಳಿಂದ ಸಂಸ್ಕೃತಿ, ಸಂಸ್ಕಾರ, ಸಾಮಾಜಿಕ, ಮೌಲ್ಯಧಾರಿತ ಬ್ರಾತೃತ್ವದ ಭಾವನೆಗಳನ್ನು ಬೆಳೆಸುವ ಶಿಸ್ತು ಹೊಂದಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಈಗ ಅಂತಹುದ್ದೇ ಒಂದು ಮಾದರಿ ಸೇವಾ ಕಾರ್ಯ ಮಾಡಿದ್ದಾರೆ.
ಹೌದು… ಜೈನ್ ಪಬ್ಲಿಕ್ ಶಾಲೆಯ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಘಟಕದ ಟಾಡ್ಲರ್, ಟ್ವಿಂಕಲ್ ಬನ್ನಿ ಹಾಗೂ ಟಮಟೋಲ್ ವಿದ್ಯಾರ್ಥಿಗಳು ತರಂಗ ಕಿವುಡ ಮತ್ತು ಅಂಧರ ಶಾಲೆಗೆ ಭೇಟಿ ನೀಡಿ ಮಾನವೀಯತೆ ಮೌಲ್ಯಗಳನ್ನು ಪ್ರತಿಬಿಂಬಿಸುವ ಸೇವಾ ಚಟುವಟಿಕೆಯನ್ನು ನೆರವೇರಿಸಿದರು.
ವಿದ್ಯಾರ್ಥಿಗಳು ತರಂಗ ಶಾಲೆಯ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕಗಳು, ಅಧ್ಯಯನ ಸಾಮಗ್ರಿಗಳು ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಅಗತ್ಯವಾದ ವಸ್ತುಗಳನ್ನು ವಿತರಿಸಿದರು. ಈ ಕಾರ್ಯದ ಮೂಲಕ ಅವರು ಸಮಾಜಸೇವೆಯ ಮಹತ್ವ, ಸ್ಪಂದನೆ ಮತ್ತು ಹಂಚಿಕೊಳ್ಳುವ ಗುಣಗಳ ಬಗ್ಗೆ ನೈಜ ಅನುಭವವನ್ನು ಪಡೆದರು.
ಶಾಲೆಯ ಶಿಕ್ಷಕರು ಹಾಗೂ ಸ್ಕೌಟ್ಸ್-ಗೈಡ್ಸ್ ನಾಯಕರ ಮಾರ್ಗದರ್ಶನದಲ್ಲಿ ನಡೆದ ಈ ಸೇವಾ ಕಾರ್ಯಕ್ರಮವು ತರಂಗ ಶಾಲೆಯ ಮಕ್ಕಳಲ್ಲಿ ಅಪಾರ ಸಂತೋಷ ಉಂಟುಮಾಡಿತು. ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು, ಸೇವೆಯೇ ಧರ್ಮ ಎಂಬ ಉದ್ದೇಶವನ್ನು ಶ್ರದ್ಧೆಯಿಂದ ಪೂರ್ಣಗೊಳಿಸಿದರು.
ಕಾರ್ಯಕ್ರಮವು ಸಾರ್ಥಕತೆ, ಸೇವಾ ಮನೋಭಾವ ಮತ್ತು ಮಾನವೀಯತೆಯ ಸಂದೇಶವನ್ನು ಸಾರುತ್ತ ಯಶಸ್ವಿಯಾಗಿ ಪೂರ್ಣಗೊಂಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















