ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಳಂದ ಚೆಸ್ ಅಕಾಡೆಮಿ ವತಿಯಿಂದ ಶಿವಮೊಗ್ಗದಲ್ಲಿ ಡಿ.21ರಿಂದ 25ರವರೆಗೆ ಎರಡು ಫಿಡೆ ರೇಟೆಡ್ ಚೆಸ್ ಪಂದ್ಯಾವಳಿಯನ್ನು #chess tournament ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಶ್ರೀಕೃಷ್ಣ ಉಡುಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಳಂದ ಚೆಸ್ ಅಕಾಡೆಮಿ ಕಳೆದ 25 ವರ್ಷಗಳಿಂದ ಚೆಸ್ ತರಬೇತಿ, ಶಿಬಿರಗಳು ಹಾಗೂ ಪಂದ್ಯಾವಳಿಗಳ ಮೂಲಕ ಚೆಸ್ ಆಟವನ್ನು ಜಗತ್ತಿಗೇ ಪರಿಚಯಿಸುತ್ತಾ ಬಂದಿದೆ. ನಮ್ಮಲ್ಲಿ ತರಬೇತಿ ಪಡೆದ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಫಿಡೆ ರೇಟಿಂಗ್ ಪಡೆದಿದ್ದು, 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ, ಮೂರು ವಿದ್ಯಾರ್ಥಿಗಳ ಏಕಲವ್ಯ ಪ್ರಶಸ್ತಿಯನ್ನು ಪಡೆದಿರುವುದು ನಮ್ಮ ಹೆಗ್ಗಳಿಕೆಯಾಗಿದೆ ಎಂದರು.
ಚೆಸ್ ಆಟಗಾರ ಅಂತರ ರಾಷ್ಟ್ರೀಯ ಮಾಸ್ಟರ್ ಅಥವಾ ಗ್ರ್ಯಾಂಡ್ ಮಾಸ್ಟರ್ ಆಗಬೇಕಾದರೆ ಫಿಡೆ ಕ್ಲಾಸಿಕಲ್ ರೇಟಿಂಗ್ ತುಂಬಾ ಅವಶ್ಯಕ. ಈ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿಯೇ ಎರಡು ಪ್ರತ್ಯೇಕ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ವಿಶೇಷವೆಂದರೆ ದೃಷ್ಟಿಹೀನ ಆಟಗಾರರು ಇದರಲ್ಲಿ ಭಾಗವಹಿಸುತ್ತಾರೆ. ಅವರು ದೃಷ್ಟಿ ಇರುವ ಆಟಗಾರರೊಂದಿಗೆ ಆಟವಾಡುವುದು ಮತ್ತೊಂದು ವಿಶೇಷ. ಈ ಪಂದ್ಯಾವಳಿಯಲ್ಲೂ ಕೂಡ ಸುಮಾರು 12ಕ್ಕೂ ಹೆಚ್ಚು ದೃಷ್ಟಿಹೀನರು ಭಾಗವಹಿಸುತ್ತಿದ್ದಾರೆ. ಇದೊಂದು ಹೊಸ ಅನುಭವಗಳಿಸುವ ಅವಕಾಶ ಕಲ್ಪಿಸಿಕೊಡುವ ಉದ್ದೇಶ ನಮ್ಮದಾಗಿದೆ ಎಂದರು.
ಮೊದಲ ಪಂದ್ಯಾವಳಿಯು ಡಿ.21ರಿಂದ 25ರವರೆಗೆ ಹೊಸಮನೆ ಬಡಾವಣೆಯಲ್ಲಿರುವ ನಳಂದ ಚೆಸ್ ಅಕಾಡೆಮಿಯ ಮುಖ್ಯ ಕಛೇರಿಯಲ್ಲಿ ನಡೆಯುತ್ತದೆ. ಒಟ್ಟು 30 ವಿಭಾಗಗಳಲ್ಲಿ ವಿಂಗಡಣೆ ಮಾಡಲಾಗುವುದು. 7 ರಿಂದ 15 ವರ್ಷ ವರ್ಗದ ವಿದ್ಯಾರ್ಥಿಗಳಿಗೆ ಟ್ರೋಫಿ ಹಾಗೂ ನಗರ ಬಹುಮಾನ ನೀಡಲಾಗುವುದು. ಸುಮಾರು 1.5 ಲಕ್ಷ ರೂ. ನಗದು ಬಹುಮಾನವಿರುತ್ತದೆ. ಹಾಗೆಯೇ 2ನೇ ಪಂದ್ಯಾವಳಿಯು ಜನವರಿ 23ರಿಂದ 25ರ ವರೆಗೆ ಬಿ.ಹೆಚ್. ರಸ್ತೆಯಲ್ಲಿರುವ ಸೇಕ್ರೆಡ್ ಹಾರ್ಟ್ ಚರ್ಚಿನ ಸ್ನೇಹಮಿಲನ ಹಾಲ್‍ನಲ್ಲಿ ನಡೆಯಲಿದೆ. ವಿವಿಧ ರಾಜ್ಯಗಳಿಂದ 1800 ರೇಟಿಂಗ್‍ಗಿಂತ ಒಳಗಿರುವ ಆಟಗಾರರು 60 ನಿಮಿಷ 30 ಸೆಕೆಂಡುಗಳ ಸಮಯ ನಿಯಂತ್ರಣದಲ್ಲಿ ಆಟ ನಡೆಯುತ್ತದೆ. ಇದೊಂದು ಮುಕ್ತ ವಿಭಾಗವಾಗಿದೆ ಸುಮಾರು 1.40 ಲಕ್ಷ ರೂ. ಮೌಲ್ಯದ ನಗದು ಬಹುಮಾನವಿರುತ್ತದೆ. ವಿವಿಧ ವಯೋವರ್ಗದ ಮಕ್ಕಳಿಗೆ ಟ್ರೋಫಿಗಳನ್ನು ನೀಡಲಾಗುವುದು. ಅಂತರ್ ರಾಷ್ಟ್ರೀಯ ತೀರ್ಪುಗಾರರಾದ ಮಂಜುನಾಥ್ ಎಂ., ಪ್ರಾಣೇಶ್ ಯಾದವ್ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಪ್ರವೇಶ ಶುಲ್ಕ 750 ರೂ.ಗಳಾಗಿದ್ದು ಆಸಕ್ತ ಆಟಗಾರರು ಹೆಚ್ಚಿನ ವಿವರ ಮತ್ತು ನೊಂದಣಿಗಾಗಿ ನಳಂದ ಚೆಸ್ ಅಕಾಡೆಮಿ ಅಥವಾ ಮೊ.ನಂ.98444-36276, 9945809662ನ್ನು ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಷಾದೇವಿ, ಸಚ್ಚಿನ್ ಪಿ.ಎಸ್., ಕೃಷ್ಣ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















