ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರವರ #Kerala CM Pinarayee Vijayan ಸರ್ಕಾರ ಕಾಸರಗೋಡು ಜಿಲ್ಲೆಯಲ್ಲಿನ ಕನ್ನಡ ಶಾಲೆಗಳಲ್ಲಿನ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಲೆಯಾಳಿ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಲಿಯಬೇಕೆಂಬ ಮಸೂದೆಯನ್ನು ತರಲು ಹೊರಟಿರುವುದು ಅಲ್ಲಿನ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ವಾತಂತ್ರ್ಯದ ಮೇಲೆ ಗಧಾಪ್ರಹಾರವಾಗಿದ್ದು, ಈ ಏಕಪಕ್ಷೀಯ ಹಾಗೂ ಸರ್ವಾಧಿಕಾರಿ ನಿರ್ಧಾರವನ್ನು ಖಂಡಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಮುಖಂಡರು ನಗರದ ಮಹಾವೀರ ವೃತ್ತದಲ್ಲಿ ಇಂದು ಕಪ್ಪುಬಟ್ಟೆ ಪ್ರದರ್ಶಿಸಿ ಟೈರ್‌ಗೆ ಬೆಂಕಿಹಚ್ಚುವ ಮೂಲಕ ಕೇರಳ ಸಿಎಂ ಪಿಣರಾಯಿ ವಿಜಯನ್‌ರವರ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ 210 ಕನ್ನಡ ಶಾಲೆಗಳಿದ್ದು, 7.5ಲಕ್ಷಕ್ಕೂ ಹೆಚ್ಚು ಕನ್ನಡಿಗರು ಕಾಸರಗೋಡು ಜಿಲ್ಲೆಯಲ್ಲಿದ್ದಾರೆ. ವಿಧಾನಸಭೆಯಲ್ಲಿ ಮಲೆಯಾಳಂ ಭಾಷಾ ಮಸೂದೆ 2025ರ ಬಗ್ಗೆ ಯಾವುದೇ ಚರ್ಚೆಮಾಡದೆ ಕೇರಳ ಸಿಎಂರವರ ಕಮ್ಯುನಿಷ್ಟ್ ಸರ್ಕಾರ ಏಕಪಕ್ಷೀಯವಾಗಿ ನಿರಂಕುಶವಾದದಂತಹ ತೀರ್ಮಾನವನ್ನು ಕೈಗೊಳ್ಳುವುದರ ಜೊತೆಗೆ ಕನ್ನಡ ಶಾಲೆಗಳನ್ನು ಮುಚ್ಚುವ ಹುನ್ನಾರವನ್ನು ನಡೆಸುತ್ತಿದ್ದು, ಕೇರಳದ ಗಡಿಭಾಗಗಳಲ್ಲಿ ಹಲವು ಕನ್ನಡ ಅಂಗನವಾಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಹಾಗೂ ಹಲವಾರು ಕನ್ನಡ ಗ್ರಾಮಗಳ ಹೆಸರನ್ನು ಮಲೆಯಾಳಿಕರಿಸಲಾಗಿದೆ. ಈ ನಿರ್ಧಾರ ಉತ್ತರ ಪ್ರದೇಶದ ಬೋಲ್ಡೋಜರ್ ಸಂಸ್ಕೃತಿಯನ್ನು ನೆನಪಿಸುತ್ತಿದೆ ಎಂದು ಮಂಜೇಶ್ವರ ಶಾಸಕ ಅಶ್ರಫ್ ಖಂಡಿಸಿದ್ದು, ಕೇರಳ ಸರ್ಕಾರಕ್ಕೆ ಕಪಾಳಮೋಕ್ಷ ಆಗಿದೆ. ಹಿಂದೆ ಇದೇ ರೀತಿಯ ವಿಧೇಯಕವನ್ನು ಅಂದಿನ ರಾಷ್ಟ್ರಪತಿಗಳು ತಿರಸ್ಕರಿಸಿದ್ದರು.
ಸಂವಿಧಾನ 350 ಜಿ ಅನ್ವಯ ಭಾಷಾ ಕಲಿಕೆಯ ಸ್ವಾತಂತ್ರ್ಯ ಎಲ್ಲಾ ವ್ಯಕ್ತಿಗಳು ಹಾಗೂ ವಿದ್ಯಾರ್ಥಿಗಳಿಗೂ ಇದ್ದು ಕನ್ನಡದ ಖ್ಯಾತ ಕವಿಗಳಾಗಿದ್ದ ಕೈಯ್ಯಾರ ಕಿನ್ಯಣ್ಣರೈ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆ ಕರ್ನಾಟಕ ರಾಜ್ಯಕ್ಕೆ ಸೇರಬೇಕೆಂಬ ಹೋರಾಟವು ನಡೆದಿತ್ತು. ಅಂದಿನ ಕೇಂದ್ರ ಸರ್ಕಾರ 1966 ಅಕ್ಟೋಬರ್ 25ರಂದು ನಿವೃತ್ತ ನ್ಯಾಯಮೂರ್ತಿ ನೆಹರ್‌ಚಂದ್ ಮಹಾಜನ್‌ರವರ ನೇತೃತ್ವದಲ್ಲಿ ಕಾಸರಗೋಡು ಹಾಗೂ ಬೆಳಗಾವಿ ಗಡಿಸಮಸ್ಯೆ ವಿಚಾರವಾಗಿ ವರದಿ ಸಲ್ಲಿಸಲು ಏಕಸದಸ್ಯ ಆಯೋಗ ಪೀಠವನ್ನು ರಚಿಸಿತ್ತು. ಈ ಆಯೋಗದ ವರದಿಯಲ್ಲಿ ಕಾಸರಗೋಡು ಜಿಲ್ಲೆ ಭಾಷಾವಾರು ಹಾಗೂ ಭಾವನಾತ್ಮಕವಾಗಿ ಕರ್ನಾಟಕ ರಾಜ್ಯಕ್ಕೆ ಸೇರಬೇಕೆಂದು ಸ್ಪಷ್ಟ ವರದಿಯನ್ನು ನೀಡಿದೆ. ಕೇರಳ ಸರ್ಕಾರದ ಈ ಭಾಷಾ ನಿಲುವನ್ನು ಖಂಡಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ದೂರ ನೀಡಬೇಕೆಂದು ಟ್ರಸ್ಟ್ ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ಪ್ರಮುಖರಾದ ಕಲ್ಲೂರು ಮೇಘರಾಜ್, ಶಂಕ್ರಾನಾಯ್ಕ, ಎಸ್.ಬಿ. ಶಿವಣ್ಣ, ರಘನಾಥ್ ಅರಸಾಳು, ಅಲೀಂಖಾನ್, ಟಿ.ಹೆಚ್. ಬಾಬು, ಜಗದೀಶ್ ಕೆ.ಜಿ., ಈಶ್ವರ್, ಹಯಾತ್‌ಸಾಬ್, ರೋಷನ್‌ಬೇಗ್, ಜನಮೇಜಿರಾವ್ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















