ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿ ನಿಧಿಗಳಿಲ್ಲದೆ 2 ವರ್ಷ ಕಳೆದಿದ್ದು, ಕೂಡಲೇ ಪಾಲಿಕೆಗೆ ಚುನಾವಣೆ ನಡೆಸಬೇಕು. ಇಲ್ಲದಿದ್ದರೆ ರಾಷ್ಟ್ರ ಭಕ್ತ ಬಳಗದಿಂದ ಪ್ರಕರಣ ದಾಖಲಿಸಲಾಗವುದು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯ ಚುನಾವಣೆ ಆಯುಕ್ತರಾದ ಜಿ. ಎಸ್. ಸಂಗ್ರೇಶಿ ಅವರು 2025 ಮೇ ನಲ್ಲಿ ಶಿವಮೊಗ್ಗಕ್ಕೆ ಬಂದಿದ್ದ ವೇಳೆ ರಾಷ್ಟ್ರ ಭಕ್ತರ ಬಳಗ ನಿಯೋಗ ಭೇಟಿ ಮಾಡಿ ಪಾಲಿಕೆಗೆ ಚುನಾವಣೆ ನಡೆಸುವಂತೆ ಮನವಿ ನೀಡಿತ್ತು. ಈ ವೇಳೆ ಮನವಿ ಸ್ವೀಕರಿಸಿದ ಚುನಾವಣಾ ಆಯುಕ್ತರು, ಶಿವಮೊಗ್ಗ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಂಡಿದ್ದು, ಸರ್ಕಾರದ ವತಿಯಿಂದ ವಾರ್ಡ್ ಮೀಸಲಾತಿಯ ಪರಿಷ್ಕೃತ ಪಟ್ಟಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದರು. ಆದರೆ ಇದುವರೆಗೆ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿಲ್ಲ ಎಂದರು.
ಅವರ ಹೇಳಿಕೆಯಂತೆ ಅವಧಿ ಮುಗಿದ ಪಾಲಿಕೆಗಳ ಪರಿಷ್ಕೃತ ಕ್ಷೇತ್ರ ಹಾಗೂ ವಾರ್ಡ್ ಮೀಸಲಾತಿ ಅಧಿಸೂಚನೆ ಹೊರಡಿಸದೆ ಇದ್ದಾಗ ಸುಪ್ರೀಂ ಕೋರ್ಟ್ ಆದೇಶದಂತೆ ಹಿಂದಿನ ಮೀಸಲಾತಿಗೆ ಅನುಗುಣವಾಗಿ ಚುನಾವಣೆ ನಡೆಸಲು ಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ತಿಳಿಸಿದ್ದರು. ಆದರೆ ಇದುವರೆಗೂ ರಾಜ್ಯ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿಲ್ಲ, ಅಲ್ಲದೆ ರಾಜ್ಯ ಚುನಾವಣಾ ಆಯೋಗವು ಕೂಡ ಈ ಸಂಬಂಧ ಯಾವುದೇ ಕ್ರಮಕೈಗೊಂಡಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಮತ್ತು ಕಗ್ಗೊಲೆ. ಅಲ್ಲದೆ ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ ಆಗಿದೆ. ಆದ್ದರಿಂದ ರಾಜ್ಯ ಸರ್ಕಾರ ಶೀಘ್ರವಾಗಿ ಪಾಲಿಕೆಯ ಪರಿಷ್ಕೃತ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತನೆ. ಕಾಲಮಿತಿಯೊಳಗೆ ಬಿಡುಗಡೆ ಮಾಡದಿದ್ದಲ್ಲಿ ಚುನಾವಣಾ ಆಯೋಗವು ನ್ಯಾಯಾಲಯದ ನಿರ್ದೇಶನದಂತೆ ಮಹಾನಗರ ಪಾಲಿಕೆಗಳ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಬೇಕೆಂದು ಒತ್ತಾಯಿಸಿದರು.
ನಿಗದಿತ ಸಮಯದಲ್ಲಿ ಬೇಡಿಕೆ ಈಡೇರದಿದ್ದಲ್ಲಿ ರಾಷ್ಟ್ರ ಭಕ್ತರ ಬಳಗವು ಬಳಗದ ಮುಖಂಡರಾದ ಕೆ.ಈ. ಕಾಂತೇಶ್ ನೇತೃತ್ವದಲ್ಲಿ ಪಾಲಿಕೆಗೆ ತಕ್ಷಣ ಚುನಾವಣೆ ನಡೆಸುವಂತೆ ನ್ಯಾಯಾಲಯದ ಮೊರೆ ಹೋಗಿ ಶಿವಮೊಗ್ಗದ ಜನತೆಗೆ ನ್ಯಾಯ ಕೊಡಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು.
ಜನಪ್ರತಿನಿಧಿಗಳಿಲ್ಲದೆ ಶಿವಮೊಗ್ಗ ನಗರ ಆಡಳಿತ ಅಭಿವೃದ್ಧಿ ಶೂನ್ಯವಾಗಿದ್ದು, ಭ್ರಷ್ಟಾಚಾರ ತುಂಬಿ ತುಳುಕುತ್ತದೆ. ಚುನಾವಣಾ ಆಯುಕ್ತರ ಮಾತಿಗೆ ಬೆಲೆ ಇಲ್ಲವೇ? ಅವರು ಕೂಡ ಪೇಪರ್ ಭೂತವೇ? ಸರ್ಕಾರಕ್ಕೆ ಇದು ನಾಚಿಕೆಗೇಡಿನ ವಿಷಯ. ರಾಜ್ಯದಲ್ಲಿ ಚುನಾವಣಾ ಆಯೋಗವು ಮಲಗಿದೆ. ವಿಧಿಯಲ್ಲದೆ, ಈ ಮಾತು ಹೇಳಬೇಕಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯ ಭಯವಿದೆ. ಹಾಗಾಗಿ ಚುನಾವಣೆ ಮಾಡಿಸುತ್ತಿಲ್ಲ, ಸಚಿವ ಭೈರತಿ ಸುರೇಶ್ ಅವರು ಪಾಲಿಕೆಗಳಿಗೆ 200 ಕೋಟಿ ಬಿಡುಗಡೆ ಮಾಡುತ್ತೇವೆ ಎಂದಿದ್ದರು. ಆದರೆ ಇದುವರೆಗೂ ನಯಾ ಪೈಸೆ ಬಂದಿಲ್ಲ ಎಂದರು.
ಆಶ್ರಯ ಬಡಾವಣೆಯ ಮೂಲಭೂತ ಸೌಲಭ್ಯಕ್ಕೆ 12 ಕೋಟಿ ರೂ. ಮಾಡುತ್ತೇನೆ ಎಂದು ಹೇಳಿ ಹೋದ ಸಚಿವ ಜಮೀರ್ ಈ ಕಡೆ ತಲೆ ಹಾಕಿಲ್ಲ. ಸರ್ಕಾರಿ ಕೆಲಸಗಳು ಆಗುತ್ತಿಲ್ಲ. ಚುನಾವಣಾ ಆಯೋಗ ಮತ್ತು ಲೋಕಾಯುಕ್ತವನ್ನು ನಂಬದ ಪರಿಸ್ಥಿಯಲ್ಲಿ ಜನರಿದ್ದಾರೆ. ಯಾಕೆಂದರೆ ಲೋಕಾಯುಕ್ತ ಪೊಲೀಸರು ಹಲವಾರು ಪರಿಶೀಲನೆ ನೆಪದಲ್ಲಿ ಪಾಲಿಕೆಗೆ ಬಂದು ಟೀ ಕುಡಿದು ಹೋಗಿದ್ದು ಬಿಟ್ಟರೆ ಪಾಲಿಕೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ದೂರಿದರು.
ಗೋಷ್ಠಿಯಲ್ಲಿ ಪ್ರಮುಖರಾದ ಕೆ.ಈ. ಕಾಂತೇಶ್, ಈ ವಿಶ್ವಾಸ್, ಮೋಹನ್ ಜಾದವ್, ಕುಬೇರಪ್ಪ, ಗೋವಿಂದ, ಶಂಕರ ನಾಯ್ಕ್, ಲೋಕೇಶ್ ಮತ್ತಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















