ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾಣ್ಯಗಳು ಮೌನವಾಗಿಯೇ ಗತಕಾಲದ ಇತಿಹಾಸವನ್ನು ತಿಳಿಸುತ್ತವೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಹೇಳಿದರು.
ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಟ್ರಸ್ಟ್ ವತಿಯಿಂದ ಇಂದಿನಿಂದ ಮೂರು ದಿನಗಳ ಕಾಲ ಶುಭಮಂಗಳ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ನಾಣ್ಯ-ನೋಟುಗಳು, ಅಂಚೆ ಚೀಟಿಗಳು ಹಾಗೂ ಅಪರೂಪದ ವಸ್ತುಗಳ ಪ್ರದರ್ಶನ #Exhibition of national level coins, notes, postage stamps and rare items ಉದ್ಘಾಟಿಸಿ ಅವರು ಮಾತನಾಡಿದರು.
ಈ ನಾಣ್ಯ ಪ್ರದರ್ಶನದಲ್ಲಿ ಅಪರೂಪದ ದೇಶ, ವಿದೇಶಗಳ, ಅರಸರ ಕಾಲದ ವೈವಿಧ್ಯಮಯ ನಾಣ್ಯ ಹಾಗೂ ನೋಟುಗಳಿದ್ದು, ಇವು ನಮ್ಮ ಇತಿಹಾಸದ ಹೆಜ್ಜೆಗಳನ್ನು ತಿಳಿಸುತ್ತದೆ. ಆಯಾ ಕಾಲದ ಅರಸರ ಆರ್ಥಿಕ, ಧಾರ್ಮಿಕ ಸ್ಥಿತಿಗತಿಗಳನ್ನು ಅನಾವರಣ ಮಾಡತ್ತದೆ ಎಂದರು.
ವಿಜಯನಗರ ಅರಸರ ಕಾಲದ ಬಂಗಾರದ ನಾಣ್ಯ, ಮಲೆನಾಡಿನ ಕೆಳದಿ ಅರಸರ ನಾಣ್ಯಗಳು ಎಲ್ಲರನ್ನು ಆಕರ್ಷಿಸುತ್ತಿದೆ. ಈ ಪ್ರದರ್ಶನ ವೀಕ್ಷಿಸಲು ಅರ್ಧ ದಿವಾದರೂ ಬೇಕು, ಅಷ್ಟೊಂದು ನಾಣ್ಯ ನೋಟುಗಳ ಸಂಗ್ರಹ ಇಲ್ಲಿದೆ ಎಂದರು.
ಸಂಗ್ರಹಕಾರರ ಶ್ರಮ ಈ ಪ್ರದರ್ಶನದಲ್ಲಿ ಕಂಡು ಬರುತ್ತದೆ. ಈ ರೀತಿ ನಾಣ್ಯ ನೋಟುಗಳ ಸಂಗ್ರಹದ ಹವ್ಯಾಸವನ್ನು ಇಂದಿನ ಪೀಳಿಗೆ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ನಾವು ಮಕ್ಕಳಿದ್ದಾಗ ಹಳೆಯ ಕಾಲದ ನಾಣ್ಯಗಳನ್ನು ಡಬ್ಬಗಳಲ್ಲಿ ಸಂಗ್ರಹಿಸುತ್ತಿದ್ದೇವು. ಅವುಗಳ ಮೇಲೆ ನಮಗಿರುವ ಭಾವನೆಗಳು ಮುಖ್ಯವಾಗುತ್ತವೆ ಎಂದರು.
ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಇಂದಿನ ಮಕ್ಕಳಲ್ಲಿ ಹಳೆಯ ನಾಣ್ಯ ನೋಟುಗಳ ಸಂಗ್ರಹದ ಹವ್ಯಾಸ ಬೆಳೆಸಬೇಕು ಎಂದ ಅವರು, ಇಂತಹ ಪ್ರದರ್ಶನವು ನಮ್ಮ ಗತಕಾಲದ ಇತಿಹಾಸ, ಸಂಸ್ಕೃತಿಯ ಪ್ರತಿಬಿಂಬವಾಗಿದೆ. ನಮ್ಮ ಚರಿತ್ರೆಯ ಮೆಲಕು ಹಾಕಲು ಸಾಧ್ಯವಾಗುತ್ತದೆ ಎಂದರು.
ನಮ್ಮ ದೇಶದ ಶ್ರೀಮಂತಿಕೆಯು ಹಳೆಯ ನಾಣ್ಯಗಳಿಂದ ತಿಳಿಯುತ್ತದೆ. ಇತ್ತೀಚೆಗೆ ಲಕ್ಕುಂಡಿಯ ಮನೆಯ ಅಡಿಪಾಯದಲ್ಲಿ ಬಂಗಾರದ ಆಭರಣ, ನಾಣ್ಯಗಳು ಸಿಕ್ಕಿವೆ. ಇದರಿಂದ ನಮ್ಮಲ್ಲಿದ್ದ ಬಂಗಾರದ ವೈಭವ ತಿಳಿದು ಬರುತ್ತದೆ ಎಂದರು.
ಸೂಡ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ಭಾರತವನ್ನು ಅನೇಕ ಅರಸರು, ವಿದೇಶಿ ಅಕ್ರಮಣಕಾರರು ಆಳಿದ್ದಾರೆ. ಅವರ ಕಾಲದ ಆಡಳಿತವನ್ನು ತಿಳಿಯಲು ಆಗಿನ ನಾಣ್ಯ ಮತ್ತು ನೋಟುಗಳು ಸಹಕಾರಿ. ಇಂತಹ ಅಮೂಲ್ಯವಾದ ನಾಣ್ಯ ನೋಟುಗಳ ಪ್ರದರ್ಶನವನ್ನು 3 ದಿನಗಳ ಕಾಲ ಹಮ್ಮಿಕೊಂಡಿರುವುದು ಅತ್ಯುತ್ತಮ ಕೆಲಸ ಎಂದು ಶ್ಲಾಘಸಿದರು.
ಮಾಜಿ ಸೂಡ ಅಧ್ಯಕ್ಷ ಜ್ಯೋತಿ ಪ್ರಕಾಶ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ದೇವದಾಸ್ ಎನ್ ನಾಯಕ್ ವಹಿಸಿದ್ದರು. ಕಾರ್ಯದರ್ಶಿ ಎಸ್. ಚಂದ್ರಕಾಂತ್, ಜಂಟಿ ಕಾರ್ಯದರ್ಶಿ ಎಲ್., ಸುಬ್ರಹ್ಮಣ್ಯ, ಕೋಶಾಧ್ಯಕ್ಷ ವಿನೋದ್ ಕುಮಾರ್ ಜೈನ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















