ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತೀಯ ಆಹಾರ ನಿಗಮವು #Food Corporation of India ಕಳೆದ 9 ತಿಂಗಳಲ್ಲಿ 38,00,660 ಮೆಟ್ರಿಕ್‍ಟನ್ ಆಹಾರ ಧಾನ್ಯಗಳನ್ನು ವಿವಿಧ ಯೋಜನೆಗಳಲ್ಲಿ ಪೂರೈಸಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಎಸ್.ಎಲ್.ಸಿ.ಸಿ. ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿನೀಡಿ, ಕರ್ನಾಟಕವು ಪ್ರತಿವರ್ಷ 50ಲಕ್ಷ ಮೆಟ್ರಿಕ್‍ಟನ್ ಆಹಾರಧಾನ್ಯಗಳನ್ನು ಪೂರೈಸುತ್ತದೆ. ಒಟ್ಟಾಗಿ ಸದರಿವರ್ಷದಲ್ಲಿ ಏಪ್ರಿಲ್ 2025ರಿಂದ ಡಿಸೆಂಬರ್ 25ರ ವರೆಗೆ 38,00,660 ಆಹಾರಧಾನ್ಯಗಳನ್ನು ಪೂರೈಸಿದೆ. ಜೊತೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಕಾರ್ಡುದಾರರಿಗೆ ಉಚಿತವಾಗಿ 5 ಕೆ.ಜಿ.ಯಂತೆ 13.50,309 ಮೆಟ್ರಿಕ್‍ಟನ್ ಅಕ್ಕಿ ಹಾಗೂ 1,89,288 ಮೆಟ್ರಿಕ್‍ಟನ್ ಜೋಳ, 3,45,930 ಮೆಟ್ರಿಕ್‍ಟನ್ ರಾಗಿಯನ್ನು ವಿತರಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತೀ ತಿಂಗಳು ಸುಮಾರು 2,42,000 ಮೆಟ್ರಿಕ್‍ಟನ್ ಅಕ್ಕಿಯನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಇದನ್ನು 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ಬಿಸಿಯೂಟದ ವ್ಯವಸ್ಥೆಗೆ ಭಾರತ ಆಹಾರ ನಿಗಮದಿಂದ ಮುಕ್ತ ಮಾರಾಟ ಯೋಜನೆಯಡಿಯಲ್ಲಿ ಖರೀದಿಸಲಾಗುತ್ತಿದೆ ಎಂದರು.

ರಿಯಾಯಿತಿ ದರದಲ್ಲಿ ಅಕ್ಕಿ ಮಾರಾಟ
ಭಾರತೀಯ ಆಹಾರ ನಿಗಮವು ಪ್ರತಿ ಕೆ.ಜಿ. ಅಕ್ಕಿಗೆ 28.90ಪೈಸೆಯಂತೆ, ಸುಧಾರಿಸಿದ ಅಕ್ಕಿಗೆ 30.90 ಪೈಸೆಯಂತೆ ಮಾರಾಟ ಮಾಡುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯೂ ಪಾನ್‍ಕಾರ್ಡ್, ಆಧಾರ್‍ಕಾರ್ಡ್ ನೀಡಿ ಪ್ರತಿವಾರಕ್ಕೆ 50 ಕೆ.ಜಿ.ಯಂತೆ ಖರೀದಿಸಬಹುದಾಗಿದೆ. ಹಾಗಾಗಿ ವ್ಯಾಪಾರಿಗಳು ಜಿ.ಎಸ್.ಟಿ. ಪ್ರಮಾಣಪತ್ರವನ್ನು ಸಲ್ಲಿಸಿ 9,000 ಕೆ.ಜಿ.ವರೆಗೆ ಖರೀದಿಸಬಹುದಾಗಿದೆ. ಶಿವಮೊಗ್ಗದಲ್ಲಿರುವ ಭಾರತ ಆಹಾರ ನಿಗಮ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
-ಬಿ.ಒ. ಮಹೇಶ್ವರಪ್ಪ, ಪ್ರಧಾನ ವ್ಯವಸ್ಥಾಪಕ, ಎಫ್‍ಸಿಐ
ಹಾಗೆಯೇ ಭಾರತ ಆಹಾರ ನಿಗಮವು ಸಾಗಾಣಿಕೆ, ಸಂಗ್ರಹಣೆ, ಗುಣಮಟ್ಟ, ಆಹಾರಧಾನ್ಯ ಖರೀದಿಯಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಿಸುತ್ತಿದೆ. ಸಾಮಥ್ರ್ಯದ ಗೋದಾಮುಗಳನ್ನು ನಿರ್ಮಿಸುತ್ತಿದೆ. ಗುಣಮಟ್ಟದ ವಿಷಯದಲ್ಲಿ ಎಚ್ಚರಿಕೆ ವಹಿಸುತ್ತಿದೆ. ಭತ್ತ ಖರೀದಿಗೆ ರೈತರಿಂದ ನಿರೀಕ್ಷಿತ ಪ್ರಮಾಣದಲ್ಲಿ ಪ್ರತಿಕ್ರಿಯೆ ದೊರಕುತ್ತಿಲ್ಲವಾದ್ದರಿಂದ ಕನಿಷ್ಟ ಬೆಂಬಲಬೆಲೆಯಲ್ಲಿ ಭತ್ತ ಮಾರಾಟ ಮಾಡಲು ರೈತರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಅದರಲ್ಲೂ ರಾಜ್ಯದಲ್ಲಿ ಸುಮಾರು 53.8ಲಕ್ಷ ಮೆಟ್ರಿಕ್‍ಟನ್ ಮೆಕ್ಕೆಜೋಳ ಉತ್ಪಾದನೆಯಾಗುತ್ತಿದ್ದು, ಇದು ದೇಶದಲ್ಲಿಯೇ ಹೆಚ್ಚು ಉತ್ಪಾದನೆಯಾಗಿದೆ. ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ರೈತರು ಮಾರಾಟ ಮಾಡುತ್ತಿರುವುದು ವರದಿಯಾಗಿದೆ. ಕನಿಷ್ಠ ಬೆಂಬಲಬೆಲೆ 2400 ರೂ. ನಿರ್ಧಾರಿತವಾಗಿದ್ದು, ರಾಜ್ಯ ಸರ್ಕಾರ 2150ರಲ್ಲಿ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಲ್ಲಿ ಖರೀದಿಸುತ್ತಿದೆ. ಗರಿಷ್ಠ ರೂ. 250 ರಾಜ್ಯಸರ್ಕಾರ ನೀಡುತ್ತದೆಯಾದರೂ ರೈತರು ಕನಿಷ್ಠ ಬೆಂಬಲ ಬೆಲೆಯಿಂದ ವಂಚಿತರಾಗುತ್ತಿದ್ದಾರೆ. ತಕ್ಷಣವೇ ರಾಜ್ಯ ಸರ್ಕಾರ ಇದನ್ನು ಸರಿಪಡಿಸಬೇಕು ಎಂದರು.
ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಚುನಾವಣಾ ಪ್ರನಾಳಿಕೆಯಲ್ಲಿ ಅನ್ಯಭಾಗ್ಯ ಯೋಜನೆಯಡಿಯಲ್ಲಿ ತಲಾ 10 ಕೆ.ಜಿ. ಅಕ್ಕಿಯನ್ನು ವಿತರಿಸುವುದಾಗಿ ಹೇಳಲಾಗಿತ್ತು. ಆದರೆ ಫೆಬ್ರವರಿ 2025ರಿಂದ ಅನ್ಯಭಾಗ್ಯ ಯೋಜನೆಯ ಅನುಷ್ಠಾನಕ್ಕೆ ಆಹಾರ ನಿಗಮದಿಂದ ಖರೀದಿಸಲಾಗುತ್ತಿತ್ತು. ಪ್ರಸಕ್ತ ವರ್ಷದಿಂದ ಅನ್ನಭಾಗ್ಯ ಯೋಜನೆಯನ್ನು ಸ್ಥಗಿತಗೊಳಿಸಿ ಇಂದಿರಾ ಕಿಟ್ ವಿತರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಅಲ್ಲದೆ ಅನ್ಯಭಾಗ್ಯ ಯೋಜನೆಯ ಮೂಲಕ 10 ಕೆ.ಜಿ. ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಆದರೆ ಈ 10 ಕೆ.ಜಿ. ಅಕ್ಕಿಯಲ್ಲಿ ಕೇಂದ್ರ ಸರ್ಕಾರದ 5 ಕೆ.ಜಿ. ಅಕ್ಕಿ ಸೇರಿಕೊಂಡಿದ್ದನ್ನು ಅದು ಎಲ್ಲಿಯೂ ಹೇಳಲಿಲ್ಲ. ತನ್ನ 30 ತಿಂಗಳ ಅಧಿಕಾರಾವಧಿಯಲ್ಲಿ ಕೇವಲ 11 ತಿಂಗಳು ಮಾತ್ರ ಅಕ್ಕಿ ನೀಡಲಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಜಿ ರಾಮ್-ಜಿ ಯೋಜನೆ ಬಗ್ಗೆ ಹೋರಾಟ ಮಾಡುತ್ತಿರುವುದು ವೋಟ್‍ಬ್ಯಾಂಕ್‍ಗೇ ಹೊರತು ಬೇರೆನೂ ಅಲ್ಲ, ರಾಮ್ ಎಂಬ ಹೆಸರು ಇರುವುದಕ್ಕೆ ಇವರು ಈ ರೀತಿ ಟೀಕಿಸುತ್ತಿದ್ದಾರೆ. ಸ್ವತಃ ನಕಲಿ ಗಾಂಧಿಗಳ ಹೆಸರಿನಲ್ಲಿ ಯೋಜನೆಯನ್ನು ಹೊರಡಿಸುತ್ತಿದ್ದಾರೆ. ಇವರಿಗೆ ಮಹಾತ್ಮಗಾಂಧೀಜಿ ಬಗ್ಗೆ ಯಾವುದೇ ಅಭಿಮಾನ ಇಲ್ಲ. ಈಗಾಗಲೇ ನೆಹರೂ ಮನೆತನದವರ ಹೆಸರುಗಳನ್ನೇ ಇಟ್ಟಿರುವುದನ್ನು ನಾವು ನೋಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಧಿಕಾರಿಗಳಾದ ಎ.ಕೃಷ್ಣಾರೆಡ್ಡಿ, ತಮ್ಮಣ್ಣ ಗಿರ್ಜಾ, ಸುನಿತಾ ಜಗದೀಶ್, ರಮೇಶ್, ಶ್ರೀಕಾಂತ್, ಅನಿಲ್‍ಕುಮಾರ್, ಸುನೀಲ್ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















