ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎಲ್ಲರೂ ಸರಳ ಬದುಕಿಗೆ ಮರಳಬೇಕಾದ ಅನಿವಾರ್ಯತೆ ಆಂದೋಲನ ಸ್ವರೂಪದಲ್ಲಿ ನಡೆಯಬೇಕಾಗಿದೆ ಎಂದು ಜನ ಶಿಕ್ಷಣ ಸಂಸ್ಥೆ ನಿರ್ದೇಶಕಿ ಎಸ್.ವೈ.ಅರುಣಾದೇವಿ #S Y Arunadevi ಪ್ರತಿಪಾದಿಸಿದರು.
ನಗರದ ಕರ್ನಾಟಕ ಸಂಘ ದಲ್ಲಿ ಸಾಗರದ ಹೆಗ್ಗೋಡು-ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘವು ಹಮ್ಮಿಕೊಂಡಿರುವ ಮೂರು ದಿನಗಳ ನೈಸರ್ಗಿಕ ಬಣ್ಣದ ಅಪ್ಪಟ ಹತ್ತಿ ಕೈಮಗ್ಗದ ಹಾಗೂ ಕೈಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಹವಮಾನ ಬದಲಾವಣೆಯಿಂದ ನಾವು ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸಬೇಕಾಗಿದೆ. ಸರಳ ಬದುಕಿಗೆ, ಪ್ರಕೃತಿಗೆ ನಾವು ಮರಳದಿದ್ದರೆ ನಮಗೆ ಉಳಿಗಾಲ ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ ಎಂದರು.
ನೈಸರ್ಗಿಕ ಬಟ್ಟೆ ಮತ್ತು ಬಣ್ಣ ಭವಿಷ್ಯದ ಉದ್ಯಮವಾಗಿದ್ದು, ಇದು ಪ್ರಕೃತಿ ಉಳಿಸುವ ನಮ್ಮೆದುರುವ ದೊಡ್ಡ ಅಸ್ತ್ರವೂ ಹೌದು ಎಂದು ವಿಶ್ಲೇಷಿಸಿದರು. ಶುದ್ಧ ಹತ್ತಿ ಬಟ್ಟೆ ಎಂಬುದು ಈಗ ಮಾರುಕಟ್ಟೆಯಲ್ಲಿ ಕಾಣದಾಗಿದೆ. ಚರಕ ಉತ್ಪಾದಿಸುವ ಬಟ್ಟೆ ಶುದ್ಧ, ಶುಭ್ರವಾಗಿದ್ದು ಮುಂದೆ ಚಿನ್ನದ ಬೆಲೆ ಸಿಗಲಿದೆ ಎಂದು ಆಶಾಭವನೆ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಸಂಸ್ಕೃತಿ ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಮಾತನಾಡಿ, ಚರಕ ಕೇವಲ ವಸ್ತು ಅಲ್ಲ. ಭಾರತೀಯ ಇತಿಹಾಸದಲ್ಲಿ ಅದಕ್ಕೆ ದೊಡ್ಡ ಪಾತ್ರವಿದೆ. ಗಾಂಧೀಜಿ ಅವರು ಚರಕ ಕೊಡಿ- ಸ್ವರಾಜ್ಯ ಕೊಡುವೆ ಎಂದು ಹೇಳಿ ಜನರನ್ನು ಸಂಘಟಿಸಿದ್ದರು ಎಂದರು.
ಅಂದು ಗಾಂಧೀಜಿ ಚರಕದಿಂದ ಮಾಡಿದ ಆಂದೋಲನ ಈಗಲೂ ವಿಶ್ವದಲ್ಲಿ ಒಂದು ದೊಡ್ಡ ಮಾದರಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಶಿವಲಿಂಗಪ್ಪ ಎನ್.ಕುಂಬಾರ, ಸಂಘಟಕಿ ಟಿ.ಗಾಯತ್ರಿ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರಕ ಸಂಘದ ಅಧ್ಯಕ್ಷೆ ಮಹಾಲಕ್ಷ್ಮಿ ವಹಿಸಿದ್ದರು. ಗಿರಿಜಾ ನಿರೂಪಿಸಿದರು.
ನೈಸರ್ಗಿಕ ಬಟ್ಟೆ-ಬಣ್ಣ
ಮೇಳದಲ್ಲಿ ಒಟ್ಟು 8 ಮಳಿಗೆಗಳು ಇದ್ದವು. ಚರಕದ ನೈಸರ್ಗಿಕ ಬಣ್ಣದ ಕೈಮಗ್ಗದ ಬಟ್ಟೆಗಳು, ಸಿದ್ಧ ಉಡುಪುಗಳೊಂದಿಗೆ. ಗಜೇಂದ್ರಗಡದ ನೇಕಾರರ ಅಪರೂಪದ ಸೀರೆಗಳು, ಇತರೆ ಬಟ್ಟೆಗಳು, ಶಿರಸಿಯ ತೇಜಸ್ವಿನಿ ಅವರ ಸಿರಿಧಾನ್ಯದಿಂದ ತಯಾರಿಸಿದ ವೈವಿಧ್ಯಮಯ ಆಹಾರ ಉತ್ಪನ್ನಗಳು, ಧಾಮಿನಿ ನ್ಯಾಚುರಲ್ಸ್‍ಅವರ ಮಲೆನಾಡಿನ ವೈವಿಧ್ಯಮಯ ಉಪ್ಪಿನಕಾಯಿಗಳು, ಶಿರಸಿಯ ಚೇತನಾ ಸಂಸ್ಥೆಯ ಬಾಳೆನಾರಿನ ಉತ್ಪನ್ನಗಳು, ಚಿತ್ರಾ ಗಿರೀಶ್ ಅವರ ಟೆರಾಕೋಟಾ ಉತ್ಪನ್ನಗಳು, ಮಣ್ಣಿನ ಆಭರಣಗಳು, ಗೀತಾಂಜಲಿ ಬುಕ್‍ಸೆಂಟರ್‍ನ ಪುಸ್ತಕಗಳು ಇದ್ದವು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















