ಕಲ್ಪ ಮೀಡಿಯಾ ಹೌಸ್ | ಮಾಲ್ಡಾ |
ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿರುವ, ಕ್ರೂರ ಹಾಗೂ ಹೃದಯಹೀನ ತೃಣಮೂಲ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಪಶ್ಚಿಮ ಬಂಗಾಳದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಮಾಲ್ಡಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನೆರವು ಬಂಗಾಳದ ಜನರನ್ನು ತಲುಪದಂತೆ ಪಶ್ಚಿಮ ಬಂಗಾದ ಸರ್ಕಾರ ತಡೆಯುತ್ತಿದೆ. ಹೀಗಾಗಿ ಈ ಬಾರಿ ಸರ್ಕಾರ ಬದಲಾಯಿಸಬೇಕಿದೆ. ತೃಣಮೂಲವನ್ನು ಸೋಲಿಸಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಬಂಗಾಳ ಅಭಿವೃದ್ಧಿಯಾಗುತ್ತದೆ ಎಂದಿದ್ದಾರೆ.
ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ಅಭಿವೃದ್ಧಿಯ ವಿರೋಧಿ ಮಾತ್ರವಲ್ಲ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತರದ ಏಕೈಕ ರಾಜ್ಯವಾಗಿದೆ ಎಂದು ಟೀಕಿಸಿದರು.
ಟಿಎಂಸಿ ಸರ್ಕಾರವು ಬಂಗಾಳದಲ್ಲಿರುವ ನನ್ನ ಸಹೋದರ ಸಹೋದರಿಯರು ಆಯುಷ್ಮಾನ್ ಯೋಜನೆಯ ಪ್ರಯೋಜನಗಳನ್ನು ಪಡೆಯುವುದನ್ನು ತಡೆಯುತ್ತಿದೆ. ಬಂಗಾಳದಿಂದ ಇಂತಹ ಕ್ರೂರ ಸರ್ಕಾರಕ್ಕೆ ವಿದಾಯ ಹೇಳುವುದು ಅತ್ಯಗತ್ಯ ಎಂದರು.
ಜೆನ್ ಜಿ ಮೇಲೆ ಬಿಜೆಪಿ ನಂಬಿಕೆ
ಬಿಜೆಪಿ ಜೆನ್ ಜಿ ಮೇಲೆ ನಂಬಿಕೆ ಇಟ್ಟಿದೆ. ಯುವಕರಿಂದಲೇ ದೇಶ ನಿರ್ಮಾಣ ಎಂಬುದರಲ್ಲಿ ಬಲವಾಗಿ ನಂಬಿಕೆ ಇರಿಸಿದ್ದು, ಇದಕ್ಕೆ ಪೂರಕವಾಗಿ ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಗಳೇ ಸಾಕ್ಷಿಯಾಗಿದೆ ಎಂದರು.
ಮಹಾರಾಷ್ಟ್ರ ನಗರ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳು ನಿನ್ನೆ ಪ್ರಕಟವಾಗಿದ್ದು, ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ರಾಜಧಾನಿ ಮತ್ತು ವಿಶ್ವದ ಅತಿದೊಡ್ಡ ಪುರಸಭೆಗಳಲ್ಲಿ ಒಂದಾದ ಬಿಎಂಸಿಯಲ್ಲಿ ಬಿಜೆಪಿ ಮೊದಲ ಬಾರಿಗೆ ದಾಖಲೆಯ ಗೆಲುವು ಸಾಧಿಸಿದೆ. ಕೆಲವೇ ದಿನಗಳ ಹಿಂದೆ, ಕೇರಳದ ರಾಜಧಾನಿ ತಿರುವನಂತಪುರಂನಲ್ಲಿಯೂ ಬಿಜೆಪಿ ಅಭ್ಯರ್ಥಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇದರರ್ಥ ಒಂದು ಕಾಲದಲ್ಲಿ ಬಿಜೆಪಿ ಚುನಾವಣೆಗಳನ್ನು ಗೆಲ್ಲುವುದು ಅಸಾಧ್ಯವೆಂದು ಪರಿಗಣಿಸಲಾಗಿದ್ದ ಸ್ಥಳಗಳಲ್ಲಿಯೂ ಸಹ, ಬಿಜೆಪಿಗೆ ಈಗ ಅಭೂತಪೂರ್ವ ಬೆಂಬಲ ಸಿಗುತ್ತಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















