ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇತಿಹಾಸದ ಬಗ್ಗೆ ಅನುಮಾನ ಇರುವವರಿಗೆ ಹಳೆಯ ಕಾಲದ ನಾಣ್ಯಗಳೇ ನೈಜ ಸಾಕ್ಷಿಗಳಾಗಿವೆ ಎಂದು ಮೈಸೂರು ಸಂಸದ ಯದುವೀರ ಶ್ರೀಕಂಠದತ್ತ ಚಾಮರಾಜ ಒಡೆಯರ್ #MP Yaduveera Wodeyar ಹೇಳಿದರು.
ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಟ್ರಸ್ಟ್ ವತಿಯಿಂದ ಮೂರು ದಿನಗಳ ಕಾಲ ಶುಭಮಂಗಳ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ನಾಣ್ಯ-ನೋಟುಗಳು, ಅಂಚೆ ಚೀಟಿಗಳು ಹಾಗೂ ಅಪರೂಪದ ವಸ್ತುಗಳ ಪ್ರದರ್ಶನದ ಸಮಾರೋಪದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಿರುಪತಿಯಲ್ಲಿ ಯಾವ ಆಡಳಿತ ಇತ್ತು ಎನ್ನುವ ಬಗ್ಗೆ ಸಂದೇಹಗಳು ಕಾಡಿದಾಗ ಅಲ್ಲಿ ಸಿಕ್ಕಂತಹ ನಾಣ್ಯಗಳೇ ಅಲ್ಲಿನ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿದವು. ಎಲ್ಲಿಯೇ ಹಳೆಯ ನಾಣ್ಯಗಳು ಸಿಕ್ಕಿದರೂ ಅವುಗಳ ಅಧ್ಯಯನ ಆಗಬೇಕು. ಮೈಸೂರು ಸಂಸ್ಥಾನದಿಂದಲೂ ಸಾಕಷ್ಟು ನಾಣ್ಯಗಳನ್ನು ಆಗಿನ ಕಾಲದಲ್ಲಿ ಚಲಾವಣೆಗೆ ಬಿಟ್ಟಿದ್ದರು. ಅವುಗಳ ಸಂಖ್ಯೆ ಹೆಚ್ಚೆ ಇದೆ ಎಂದರು.
ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಮಾತನಾಡಿ, ಅಂಚೆ ಚೀಟಿ ಮತ್ತು ನಾಣ್ಯಗಳು ಇತಿಹಾಸವನ್ನು ಹೇಳುತ್ತವೆ. ಇದೊಂದು ಉತ್ತಮ ಹವ್ಯಾಸ. ಚರಿತ್ರೆಯನ್ನು ಗಮನಿಸಿದಾಗ ವಿವಿಧ ದೇಶಗಳ ಪ್ರಮುಖರು ಕೂಡ ಈ ಹವ್ಯಾಸ ಹೊಂದಿರುವುದು ಕಂಡು ಬರುತ್ತದೆ. ಇಂಗ್ಲೆಂಡ್ ರಾಜ ಜಾರ್ಜ್-5, ಅಮೆರಿಕಾ ಅಧ್ಯಕ್ಷ, ಜವಾಹರ್ ನೆಹರೂ ಕೂಡ ಈ ಹವ್ಯಾಸ ಹೊಂದಿದ್ದರು ಎಂದರು.
ಮಲೆನಾಡು ನಾಣ್ಯ ಮತ್ತು ಅಂಚೆ ಚೀಟಿ ಸಂಗ್ರಾಹಕರ ಟ್ರಸ್ಟ್ ಅಧ್ಯಕ್ಷ ದೇವದಾಸ ನಾಯಕ್, ಪ್ರಮುಖರಾದ ಎಸ್.ಚಂದ್ರಕಾಂತ್, ಆರ್.ಪ್ರಸನ್ನಕುಮಾರ್, ಅಣ್ಣಪ್ಪ ಸ್ವಾಮಿ, ಪ್ರಭಾಕರ ಕಾಮತ್, ವಿನೋದ್‍ಕುಮಾರ್ ಜೈನ್, ಸುಬ್ರಹ್ಮಣ್ಯ, ಬದರೀನಾಥ್ ಇನ್ನಿತರರು ಇದ್ದರು. ಇದೇ ಸಂದರ್ಭದಲ್ಲಿ ಭಾಷಣ ಮತ್ತು ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















