ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಶಿವಮೊಗ್ಗ ನಿಜವಾಗಿಯೂ ಸಾಂಸ್ಕೃತಿಕವಾಗಿ ಶ್ರೀಮಂತವಾದ ಊರು. ಅದು ಅನೇಕ ಕಲಾವಿದರನ್ನು ತನ್ನ ಮಡಿಲಲ್ಲಿ ಪೋಷಿಸುತ್ತಿದೆ. ಈ ಊರು ನೃತ್ಯ, ಸಂಗೀತ, ನಾಟಕ, ಯಕ್ಷಗಾನವೇ ಮೊದಲಾದ ಎಲ್ಲ ಪ್ರಕಾರಗಳಲ್ಲಿ ಶ್ರೇಷ್ಠವಾದ ಕಲಾವಿದರನ್ನು ಹೊಂದಿದೆ. ಇಲ್ಲಿ ಅನೇಕ ಸಂಗೀತ ವಿದ್ಯಾಲಯಗಳು ತಮ್ಮದೇ ಆದಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರ ಗಮನ ಸೆಳೆದು ಆಕರ್ಷಿಸಿರುವುದು ಒಂದೆಡೆಯಾದರೆ, ತಮ್ಮ ಸಂಗೀತ ಶಾಲೆಯ ರಜತ ಸಂಭ್ರಮಕ್ಕೆ “ವೀಣಾ ತ್ರಿಶತೋತ್ಸವ” ಆಚರಿಸಿ ಒಂದು ದಾಖಲೆಯನ್ನು ನಿರ್ಮಿಸಿದ್ದು ಶ್ರೀಸರಸ್ವತಿ ಸಂಗೀತ ವಿದ್ಯಾಲಯ. ಅದರ ಮುಖ್ಯಸ್ಥರಾದ ವಿll ಶ್ರೀಮತಿ ವಿಜಯಲಕ್ಷ್ಮಿರಾಘು ಅವರ ಶಿಷ್ಯವೃಂದದ ಜೊತೆಗೆ ಅನೇಕ ವಿದ್ಯಾಸಂಸ್ಥೆಗಳ ಸಹಕಾರದೊಂದಿಗೆ ನೀಡಿದ ವೀಣೆಯ ಅದ್ಭುತ ಕಾರ್ಯಕ್ರಮ ಐತಿಹಾಸಿಕ ದಾಖಲೆಯಾಯ್ತು. ಎರಡು ದಿನಗಳ ಕಾಲ ಅಲ್ಲಮಪ್ರಭು ಮೈದಾನದಲ್ಲಿ ಸುಂದರವಾದ ವೇದಿಕೆ ಹಾಗೂ ವೀಕ್ಷಕರಿಗೆ ಎಲ್ಲೂ ತೊಂದರೆಯಾಗದಿರುವಂತಹ ಆಸನದ ವ್ಯವಸ್ಥೆಯಿಂದ ಆಯೋಜಿತವಾದ ಈ ಕಾರ್ಯಕ್ರಮ ಪ್ರೇಕ್ಷಕರ ಮನಸ್ಸಿಗೆ ಮುದ ನೀಡಿತು.
ಮೊದಲ ದಿನ ವಿll ಇಂದು ನಾಗರಾಜ್ ಹಾಗು ಲಕ್ಷ್ಮೀನಾಗರಾಜ್ ಅವರ ಹಾಡುಗಾರಿಕೆ ಕರ್ಣಾನಂದವನ್ನು ನೀಡಿದರೆ, ಮರುದಿನದ ಉದ್ಘಾಟಕರಾಗಿ ಆಗಮಿಸಿದ ಮಹಾರಾಜರೂ, ಸಂಸದರೂ ಶ್ರೀಯದುವೀರ ಒಡೆಯರ್ ಅವರು, ಮುಖ್ಯ ಅತಿಥಿಗಳಾದ ವಿll ಶ್ರೀಮತಿ ರೇವತಿ ಕಾಮತ್ ಮೊದಲಾದವರಿಂದ ಕೂಡಿದ ಅಚ್ಚುಕಟ್ಟಾದ ಸಭಾ ಕಾರ್ಯಕ್ರಮವಾದರೆ ವೇದಿಕೆ ಕಾರ್ಯಕ್ರಮ ಮುಗಿದು ವೀಣಾ ತ್ರಿಶತಿಯ ಉದ್ಘಾಟನೆಯ ದೃಶ್ಯವೇ ನೋಡುಗರಿಗೆ ಆ ಕಲ್ಪನೆ ವಾವ್ ಎಂಬ ಅನುಭವ ನೀಡಿತು.
ಅಲ್ಲಿ ನುಡಿಸಿದ ಪ್ರತಿಯೊಂದು ಹಾಡುಗಳೂ ವಿಶೇಷವೇ ಅದರಲ್ಲೂ ಸಾಮಜವರಗಮನ, ಮಾಮವತು, ತಾಯಿ ಶಾರದೆ, ವಿಶ್ವವಿನೂತನ, ಅಯಿಗಿರಿ ನಂದಿನಿ ಹೀಗೆ ಒಂದಕ್ಕಿಂತ ಒಂದು ಅತ್ಯದ್ಭುತವಾದ ಪ್ರಸ್ತುತಿಯಾಗಿದ್ದವು. ಜೊತೆಗೆ ಮೈಸೂರ್ ಸಂಸ್ಥಾನದ ಪರಂಪರೆಯಲ್ಲಿ ಗೌರವಿಸುವ ವೀಣೆಯನ್ನು ಶ್ರೀ ಯದುವೀರ್ ಒಡೆಯರ್ ಅವರು ನುಡಿಸುವ ಪ್ರಯತ್ನಿಸಿದ್ದು ಒಂದು ವಿಶೇಷವೇ ಆಯಿತು. ಹಾಗೆಯೇ ಎಲ್ಲವುಗಳಲ್ಲೂ ಕಂಡು ಬಂದ ಏಕತಾನತೆ, ಪಕ್ಕ ವಾದ್ಯದವರ ವಿದ್ವತ್ ಪೂರ್ಣ ಸಾಥ್ ಈ ಕಾರ್ಯಕ್ರಮಕ್ಕೆ ಒಳ್ಳೆಯ ಮೆರುಗು ತಂದಿತ್ತು. ಆಗಮಿಸಿದ ಸಹೃದಯ ರಸಿಕರು ಈ ಎಲ್ಲ ಸೊಬಗನ್ನು ಕಣ್ತುಂಬಿಕೊಂಡು, ಮನಕಾನಂದದ ರಸಾನುಭೂತಿ ಅನುಭವಿಸಿದರು.
ಅಷ್ಟೇ ಅಲ್ಲದೆ ಈ ಕಾರ್ಯಕ್ರಮದಲ್ಲಿ ನಗರದ ಎಲ್ಲಾ ಸಂಗೀತ ಶಾಲೆಯ ನೃತ್ಯ ಶಾಲೆಯ ಹಾಗೂ ಇತರ ಪ್ರಮುಖರನ್ನು, ಗಣ್ಯರನ್ನು ಸನ್ಮಾನಿಸಿದ್ದು, ಗುರುವಂದನೆ, ಹಾಗೂ ಮಾತಾಪಿತೃಗಳ ಹೆಸರಿನಲ್ಲಿ ಒಬ್ಬ ಅಂಧ ವಿದ್ಯಾರ್ಥಿನಿಗೆ ವೀಣೆಯನ್ನೇ ನೀಡಿದ್ದು ಇವೆಲ್ಲವೂ ಅತ್ಯಂತ ಭಾವುಕ ಕ್ಷಣಗಳಾದವು. ಜೊತೆಗೆ ಸಾಧಕರ ಸನ್ಮಾನ, ಸಂಗೀತ ಶಾಲೆಗೆ ಹೆಮ್ಮೆ ತಂದ ವಿದ್ಯಾರ್ಥಿಗಳ ಹಾಗೂ ವಿಶೇಷ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿದ್ದು ಸಹ ಗಮನಾರ್ಹವಾಗಿತ್ತು. ಈ ಎಲ್ಲದಕ್ಕೂ ಕಳಶಪ್ರಾಯದಂತೆ ಮೆರುಗು ತಂದಿದ್ದು ನಿರೂಪಕರ ನಿರೂಪಣೆ, ನಿಜವಾಗಿಯೂ ಪ್ರೇಕ್ಷಕರನ್ನು ಚಳಿಯ ಹೊತ್ತಿನಲ್ಲೂ ಐತಿಹಾಸಿಕ ದಾಖಲೆಯಾದ ಆ ಸಂದರ್ಭವೆಲ್ಲವೂ ಮನದಲ್ಲಿ ಅಚ್ಚಳಿಯದೆ ಉಳಿಯುವಂತಾಗಲು ನಿರೂಪಕರ ಸಂದರ್ಭೋಚಿತ ಅರ್ಥಪೂರ್ಣ ಹಾಗೂ ಜೋಶ್ ನಿಂದ ಕೂಡಿದ ನಿರೂಪಣೆ ಗಮನ ಸೆಳೆಯಿತು.
ಇವುಗಳ ಜೊತೆಯಲ್ಲಿ ಸೌಂಡ್ ಸಿಸ್ಟಮ್ ನ ಚಿನ್ನು ರವರ ಅದ್ಭುತ ಕಲ್ಪನೆಯ ವೇದಿಕೆ, ಹಾಗೆಯೇ ಪರಂಪರಾದವರು ಆಯೋಜಿಸಿದ ದೇಸಿ ವಸ್ತುಗಳ ಮೇಳ. ನಗರದ ಜನತೆಗೆ ಚಿತ್ತಾಕರ್ಷಕವಾಗಿತ್ತು. ಆಹಾರ ಮೇಳದ ಕಡೆಯಂತೂ ಜನ ಒಳ್ಳೆಯ ಆಹಾರ ಸವಿಯುತ್ತಾ ಉದರಾನಂದ ಒಂದೆಡೆಯಾದರೆ, ವೀಣೆಯ ನಾದದ ಝೇಂಕಾರದ ಕರ್ಣಾನಂದ ಮತ್ತೊಂದೆಡೆ ಎಲ್ಲವೂ ಅಲ್ಲಿ ವೈಶಿಷ್ಟ್ಯಪೂರ್ಣವಾಗಿತ್ತು.
ಸರಸ್ವತಿಯ ವೀಣೆಯ ನಾದದ ಝೇಂಕಾರ ನಗರದೆಲ್ಲೆಡೆ ಒಂದು ಧನಾತ್ಮಕ ವೈಬ್ ಮೂಡಿಸಿದ್ದಂತು ಸತ್ಯ. ಅಚ್ಚುಕಟ್ಟಾದ ಒಟ್ಟು ಆಯೋಜನೆ ನಗರದ ಎಲ್ಲಾ ಪ್ರಮುಖ ಸಂಗೀತ ಶಾಲೆಗಳವರನ್ನು ಜೋಡಿಸಿಕೊಂಡು ಶಾಸ್ತ್ರೀಯ ಸಂಗೀತಕ್ಕಿರುವಂತಹ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಒಂದು ವೈವಿಧ್ಯತೆ ಮತ್ತು ಏಕತೆ ಮೂಡಿಸಿದ ಕಾರ್ಯಕ್ರಮ ಇದಾಗಿತ್ತು. ಒಟ್ಟಾರೆಯಾಗಿ ಓಂಕಾರದ ಶಂಖನಾದಕಿಂತ ಕಿಂಚಿದೂನಮ್ ಎಂಬ ಕವಿವಾಣಿಯು ಇಲ್ಲಿ ನೆನಪಾಗುವಂತಾಯ್ತು. ನಗರದ ಸಮಸ್ತ ಸಹೃದಯ ಪ್ರೇಕ್ಷಕರ ಪರವಾಗಿ ವಿದುಷಿ ಶ್ರೀಮತಿ ವಿಜಯಲಕ್ಷ್ಮಿ ರಾಘು ಹಾಗೂ ಅವರ ಬೆಂಬಲಕ್ಕೆ ನಿಂತ ಅವರ ಮನೆಯವರಾದ ಶ್ರೀ ಟಿ. ಎಸ್. ವೆಂಕಟರಾವ್, ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ಗೌರವ ಅಧ್ಯಕ್ಷರು, ಸುಶ್ರಾವ್ಯ ಸಂಗೀತ ವಿದ್ಯಾಲಯದ ಮುಖ್ಯಸ್ಥರಾದ ಶ್ರೀಮತಿ ವಿll ಜಯಶ್ರೀ ನಾಗರಾಜ್, ಸಾಯಿ ಶೃತಿ ಸಂಗೀತ ವಿದ್ಯಾಲಯದ ಮುಖ್ಯಸ್ಥರಾದ ಶ್ರೀ ಪದ್ಮಿನಿ ಸುಧೀರ್ ಇವರೆಲ್ಲರಿಗೂ ಅನಂತಾನಂತ ಧನ್ಯವಾದಗಳು. ವೀಣಾ ನಾದದ ಝೇಂಕಾರದ ಅನುರಣನ ಸ್ಮೃತಿಪಟಲದಲ್ಲಿ ಜೀವಿತಾವಧಿಯ ಮಹತ್ವದ ಕಾರ್ಯಕ್ರಮವಾಗಿ ಉಳಿಯುತ್ತದೆ ಎನ್ನುವುದಂತು ನಿಸ್ಸಂಶಯ.
ದಾಸ ಶ್ರೇಷ್ಠರ ಆರಾಧನೆಯ ಪುಣ್ಯ ಪರ್ವಕಾಲದಲ್ಲಿ, ತಮ್ಮ ಸಂಸ್ಥೆಯ ರಜತ ಮಹೋತ್ಸವದ ಸಂದರ್ಭದಲ್ಲಿನ ಈ ಕಾರ್ಯಕ್ರಮ ನಗರದ ಮಟ್ಟಿಗೆ ಒಂದು ಐತಿಹಾಸಿಕ ದಾಖಲೆಯೇ ಸರಿ. ಈ ಅದ್ಭುತ ಕಾರ್ಯಕ್ರಮಕ್ಕೆ ನಾವೆಲ್ಲ ಸಾಕ್ಷಿಯಾದೆವಲ್ಲ ಎಂಬ ಭಾವ ಮನದಲ್ಲಿ ಮತ್ತಷ್ಟು ಹೆಮ್ಮೆಯನ್ನು ತರಿಸುತ್ತದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಅದೆಷ್ಟು ಪದಗಳಿಂದ ಬಣ್ಣಿಸಿದರೂ ಕಡಿಮೆಯೇ ಎನಿಸುತ್ತಿದೆ ನನ್ನ ಪಾಲಿಗೆ. ನನಗಂತೂ ವೀಣೆ ವಿಜಯಲಕ್ಷೀ ಎಂದೇ ಕರೆಸಿಕೊಳ್ಳುವ ಅವರು ಬೃಹತ್ ವೇದಿಕೆಯಲ್ಲಿ ಪಕ್ಕ ವಾದ್ಯಗಳ ನಡುವೆ ಸಾಕ್ಷಾತ್ ಸರಸ್ವತಿಯ ಹಾಗೆ ಕಂಡುಬಂದರು. ಅನೇಕ ವಿದ್ಯಾ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿತವಾದ ಕಾರ್ಯಕ್ರಮ ಇದಾಗಿತ್ತು. ಈ ಹಿಂದೆ ಪಂಚವೀಣೆ, ನವವೀಣೆ, ದಶವೀಣೆ, 25 ವಿಧಗಳ ಸಮೂಹ ಅಲ್ಲದೇ ಅಷ್ಟೋತ್ತರ ಶತವೀಣಾ ವೈಭವ ಇವುಗಳನ್ನು ಕಂಡ ನಾವು ವೀಣಾ ತ್ರಿಶತೋತ್ಸವ ಅಂದರೆ 300 ವೀಣೆಗಳು ಏಕಕಾಲದಲ್ಲಿ, ಏಕಲಯದಲ್ಲಿ ನಾದವನ್ನು ಹೊಮ್ಮಿಸಿ ಈಗಲೂ ಅದನ್ನು ನೆನೆಸಿಕೊಂಡರೆ ರೋಮಾಂಚನವಾಗುವಂತೆ ಮಾಡಿದ ಕಾರ್ಯಕ್ರಮವಾಗಿತ್ತು. ಈ ಕಲ್ಪನೆಗೆ ಒಂದು ಹ್ಯಾಟ್ಸ್ ಆಫ್ ಹೇಳಲೇಬೇಕು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















