ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಂಬಿಗರ ಚೌಡಯ್ಯನವರು #Ambigara Chowdaiah ನೇರ, ನಿಷ್ಠೂರವಾದಿ ವಚನಕಾರರಾಗಿದ್ದರು ಮತ್ತು ನಿಜಶರಣ ಎಂದೇ ಪ್ರಸಿದ್ಧರಾಗಿದ್ದವರು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಗಂಗಮತ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಚನಕಾರರಲ್ಲಿ ಅಂಬಿಗರ ಚೌಡಯ್ಯ ವಿಭಿನ್ನ ವ್ಯಕ್ತಿತ್ವ ಹೊಂದಿದ ಶ್ರೇಷ್ಠ ವಚನಕಾರರಾಗಿದ್ದರು. ತತ್ವಜ್ಞಾನಿಯೂ ಆಗಿದ್ದ ಅವರು, ಕಂಡದ್ದನ್ನು ಕಂಡಂತೆ ಬಿಚ್ಚು ಮನಸ್ಸಿನಿಂದ ನಿಷ್ಠೂರವಾದರೂ ಇಷ್ಟವಾಗಿ ಹೇಳುವ ವಚನಕಾರರಾಗಿದ್ದರು. ಅವರ ಕಾಯಕ ದೋಣಿ ಹುಟ್ಟುಹಾಕಿ ದಡ ಸೇರಿಸುವುದೇ ಆಗಿದ್ದರೂ ನಿಜವಾಗಿಯೂ ಅವರು ಭವಸಾಗರವೆಂಬ ಸಂಸಾರದ ದೋಣಿಯನ್ನು ಅರಿವಿನ ಹುಟ್ಟು ಹಾಕುವ ಮೂಲಕ ಹೇಗೆ ದಾಟಿಸಬೇಕು ಎಂಬುದನ್ನು ತಮ್ಮ ವಚನಗಳ ಮೂಲಕವೇ ತಿಳಿಸಿದವರು.
ಅನೇಕ ಮಹಾಪುರುಷರು ಪ್ರಾಂತ ಸ್ಮರಣಿಯರೇ ಆಗಿದ್ದಾರೆ. ಅವರ ಆದರ್ಶಗಳನ್ನು ನಾವು ಪಾಲಿಸಬೇಕು. ಅದರಲ್ಲೂ ವಚನಕಾರರು ಸಮಸಮಾಜದತ್ತ ನಮ್ಮನ್ನು ತೆಗೆದುಕೊಂಡು ಹೋದವರು. ತಮ್ಮ ವಚನಗಳ ಮೂಲಕ ಬದುಕಿನ ಸಾರವನ್ನು ಹೇಳಿದವರು. ನಾವೆಲ್ಲರೂ ಅವರ ಆದರ್ಶಗಳನ್ನು ಪಾಲಿಸೋಣ ಆ ಮೂಲಕ ಅವರ ಜಯಂತಿ ಕಾರ್ಯಕ್ರಮಕ್ಕೆ ಅರ್ಥ ನೀಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಸ್.ಪಿ. ವಾಸುದೇವ್, ಅಂಬಿಗರ ಚೌಡಯ್ಯನವರು ಕಟುಮಾತುಗಳ ಮೂಲಕವೇ ಸಮಾಜವನ್ನು ಎಚ್ಚರಿಸಿದವರು. ಅವರ ವಚನಗಳು ನಿಷ್ಠೂರವಾಗಿದ್ದರೂ ಕೂಡ ಇಷ್ಟಪಡುವಂತೆ ಇದ್ದವು. ಅವರು ತಮ್ಮ ಹೆಸರನ್ನೇ ಅಂಕಿತನಾಮವನ್ನಾಗಿ ಇಟ್ಟುಕೊಂಡಿದ್ದರು. ಇವರ ವಚನಗಳು ನೇರ, ನಿರ್ಭೀತವಾಗಿದ್ದವು. 12ನೇ ಶತಮಾನದಲ್ಲಿ ಜನಿಸಿದ್ದ ಇವರು ರಾಣೆಬೆನ್ನೂರು, ತಾಲ್ಲೂಕಿನ ಚೌಡದಾನಪುರ ಎಂಬ ಗ್ರಾಮದಲ್ಲಿ ಜನಿಸಿದವರು. ಈ ಹೆಸರು ಬರಲು ಇವರು ದಾನಮಾಡಿದ್ದೇ ಕಾರಣವಾಗಿದೆ. ಅಂಬಿಗಾ ಎಂದರೆ ಭರವಸೆಯ ಬೆಳಕು. ಕೇವಲ ದೋಣಿಗೆ ಹುಟ್ಟುಹಾಕುವುದಲ್ಲ. ಸಾಂಸಾರಿಕ ಜೀವನಕ್ಕೂ ಹುಟ್ಟುಹಾಕುವುದನ್ನು ಅವರು ಹೇಳಿಕೊಟ್ಟವರು ಎಂದರು.
ಅವರ ವಚನಗಳಲ್ಲಿ ವೈಚಾರಿಕತೆ, ಕಾಲಜ್ಞಾನ, ಆಧ್ಯಾತ್ಮ, ಬೆಡಗು, ರೂಪಕಗಳು, ನೈತಿಕಮೌಲ್ಯ, ವಿಡಂಬನೆ, ನಿಷ್ಠೂರತೆ, ಟೀಕೆಗಳನ್ನು ಕಾಣಬಹುದಾಗಿದೆ. ಅದಕ್ಕೆ ಕಹಿಯಾದರೆ ಉದರಕ್ಕೆ ಸಿಹಿ ಎಂಬಂತೆ ಇವರ ವಿಚಾರಧಾರೆಗಳು ಇರುತ್ತಿದ್ದವು. ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಇವರ ವಚನಗಳು ಕಾರಣವಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗಂಗಾಮತ ಸಂಘದ ಅಧ್ಯಕ್ಷ ಡಿ.ಬಿ. ಕೆಂಚಪ್ಪ, ತಾಲ್ಲೂಕು ಅಧ್ಯಕ್ಷ ಎಸ್.ಬಿ. ಸತೀಶ್, ಜಿಲ್ಲಾ ಮೊಗವೀರ ಮಹಾಜನ ಸಂಘದ ಅಣ್ಣಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪನಿರ್ದೇಶಕ ಉಮೇಶ್ ಹೆಚ್., ಮಾಜಿ ಪಾಲಿಕೆ ಸದಸ್ಯ ಸುನೀತಾ ಅಣ್ಣಪ್ಪ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















