ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅರಣ್ಯ ಸಂರಕ್ಷಣೆಯನ್ನೇ ಗುರಿಯಾಗಿಟ್ಟುಕೊಂಡು ನಿರ್ಮಿಸಿದ `ಮಾವುತ’ ಕನ್ನಡ ಚಲನಚಿತ್ರ #Mavutha Kannada Movie ಜ.30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಆ ಚಿತ್ರದ ನಾಯಕನಟ ಲಕ್ಷ್ಮೀಪತಿ ಬಾಲಾಜಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆನೆ ಮತ್ತು ಮಾವುತರ ನಡುವಿನ ಭಾಂದವ್ಯ, ಅರಣ್ಯ ಸಂರಕ್ಷಣೆಯಲ್ಲಿ ಅವರ ಪ್ರಾಮುಖ್ಯತೆ, ಮೊದಲಾದವುಗಳನ್ನು ಮುಖ್ಯ ವಿಷಯವನ್ನಾಗಿ ಅಳವಡಿಸಿಕೊಂಡಿರುವ ಚಿತ್ರ ಇದಾಗಿದೆ. ಮೈಸೂರು ದಸರಾದಲ್ಲಿ 8ಬಾರಿ ಅಂಬಾರಿ ಹೊತ್ತಿರುವ ಅರ್ಜುನ ಆನೆಯನ್ನು ನೆನಪಿಗೆ ತರುವ ವಿಷಯ ಈ ಚಿತ್ರದಲ್ಲಿದ್ದು, ಯಾವುದೇ ಕೃತಕ ಬುದ್ಧಿಮತ್ತೆ(ಎಐ)ಯನ್ನು ಉಪಯೋಗಿಸದೆ ನೈಜವಾಗಿ ಚಿತ್ರೀಕರಣ ಮಾಡಲಾಗಿದೆ. ಅರ್ಜುನನ ಮಾವುತ ವಿನುನೇ ಈ ಚಿತ್ರ ನಿರ್ಮಾಣಕ್ಕೆ ಸ್ಫೂತಿಯಾಗಿದ್ದಾರೆ. ಯಾವುದೇ ಮಚ್ಚು, ಲಾಂಗು ಉಪಯೋಗ ಮಾಡದೆ ಕಾಡುನಾಶವನ್ನು ತಡೆಯುವುದನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ನಿರ್ಮಿಸಿದ ಚಿತ್ರವಾಗಿದೆ ಎಂದರು.
ಕಾಡನ್ನು ಉಳಿಸಿ-ಕಾಡನ್ನು ಬೆಳೆಸಿ ಎಂಬ ಸಂದೇಶ ನೀಡುವ ಅಂಶವೇ ಈ ಚಿತ್ರದ ಕಥಾವಸ್ತುವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ಅನುಮತಿ ಪಡೆದೇ ಶಿವಮೊಗ್ಗದ ಸಕ್ರೇಬೈಲಿನ ಪ್ರದೇಶದಲ್ಲಿ ಈ ಚಿತ್ರೀಕರಣ ಮಾಡಲಾಗಿದೆ ಎಂದರು.
ಸಕ್ರೆಬೈಲ್‍ನ ಆನೆ ಸಾಗರ್‍ನನ್ನು ಬಳಸಿಕೊಂಡು ಚಿತ್ರ ಮಾಡಲಾಗಿದೆ. ಚಿತ್ರದ ನಾಯಕಿಯಾಗಿ ಮಹಾಲಕ್ಷ್ಮೀ ಮತ್ತು ದಿವ್ಯಶ್ರೀ, ಹಿರಿಯ ನಟರಾದ ಥ್ರಿಲ್ಲರ್ ಮಂಜು, ಪದ್ಮಾವಾಸಂತಿ, ಲಯಕೋಕಿಲಾ, ಕೈಲಾಸ್ ಕುಟ್ಟಪ್ಪ, ಮಿಮಿಕ್ರಿ ಮಂಜು, ಬಾಲರಾಜ್ ವಾಡಿ ಇನ್ನಿತರರು ನಟಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ರವಿಶಂಕರ್ ನಾಗ್, ಕೈಲಾಸ್ ಕುಟ್ಟಪ್ಪ, ಶಿವಕುಮಾರ್ ಗೋಪಾಲಕೃಷ್ಣ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















