ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಮಕ ಕಲೆಯನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಬೆಳೆಸಬೇಕೆಂಬ ಉದ್ದೇಶದಿಂದ ಪದ್ಮಶ್ರೀ ಗಮಕ ಗಂಧರ್ವ ಹೆಚ್.ಆರ್.ಕೇಶವಮೂರ್ತಿರವರ ಶಿಷ್ಯರಾದ ಹೊಸಹಳ್ಳಿಯ ಪ್ರಸಾದ್ ಭಾರದ್ವಾಜ್ ಅವರು 24 ಗಂಟೆಗಳ ಕಾಲ ಗಮಕ ವಾಚನ ಮಾಡುವ ಮೂಲಕ ವಿಶ್ವ ದಾಖಲೆ ಮಾಡುವ ಹಿನ್ನಲೆಯಲ್ಲಿ ಜ.24 ಮತ್ತು 25ರಂದು ರವೀಂದ್ರನಗರದ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಗಮಕ ವಾಚನ ಮಾಡಲಿದ್ದಾರೆ ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ ವಿನಯ್ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಜ.24ರ ಸಂಜೆ 5ಗಂಟೆಗೆ ಗಮಕವಾಚನ ಆರಂಭಿಸಿ 25ರ ಸಂಜೆ 7ಗಂಟೆವರೆಗೆ ಗಮಕವಾಚನ ಮಾಡಿ ವಿಶ್ವದಾಖಲೆ ನಿರ್ಮಿಸಲಿದ್ದಾರೆ. ಅವರು ಕುಮಾರವ್ಯಾಸ ಭಾರತದ ಕಾವ್ಯದಿಂದ 10 ಪರ್ವಗಳ ಒಟ್ಟು 1300 ಪದ್ಯಗಳನ್ನು ವಾಚಿಸಲಿದ್ದಾರೆ. ಈ ಕಾರ್ಯಕ್ರಮದ ದಾಖಲೆಯು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ #Asia Book of Record ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ಗೆ #India Book of Record ಸೇರಲಿದೆ ಎಂದರು.
ಇದೂವರೆಗೂ ಇಂತಹ ವಿಶ್ವದಾಖಲೆ ಎಲ್ಲಿಯೂ ನಡೆದಿಲ್ಲ. ಪ್ರಸಾದ್ ಭಾರದ್ವಾಜ್ ಅವರೇ ಈ ಹಿಂದೆ 15 ಗಂಟೆಗಳ ಕಾಲ ವಾಚನ ಮಾಡಿದ್ದಾರೆ. ಹೊಸಹಳ್ಳಿಯಲ್ಲಿ ಅಹೋರಾತ್ರಿ ಗಮಕವಾಚನ ನಡೆದರೂ ಕೂಡ ಅದು ಏಕವ್ಯಕ್ತಿಯಿಂದ ನಡೆದಿಲ್ಲ. ಈ ಭಾರಿ ಪ್ರಸಾದ್ ಭಾರದ್ವಾಜ್ ಒಬ್ಬರೇ ಈ ಸಾಧನೆ ಮಾಡಲಿದ್ದಾರೆ. ನಿಯಮದ ಪ್ರಕಾರ 24 ಗಂಟೆಗಳಲ್ಲಿ ಎರಡು ಗಂಟೆಗಳನ್ನು ವಿರಾಮವಾಗಿ ಬಳಸಬಹುದಾಗಿದೆ. ಇದು 10 ಅಥವಾ 20 ನಿಮಿಷಕ್ಕೆ ಮಾತ್ರ ಸೀಮತವಾಗಿರುತ್ತದೆ. ಒಟ್ಟಾರೆಯಾಗಿ 24 ಗಂಟೆಗಳಲ್ಲಿ ಎರಡು ಗಂಟೆ ವಿರಾಮ ತೆಗೆದುಕೊಳ್ಳಲು ಅವಕಾಶವಿದೆ ಎಂದರು.
ಜ.24ರ ಮಧ್ಯಾಹ್ನ 3.30ಕ್ಕೆ ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಕುಮಾರವ್ಯಾಸ ಪ್ರಶಸ್ತಿ ಪುರಸ್ಕøತರಾದ ಬೆಂಗಳೂರಿನ ಗಂಗಮ್ಮ ಕೇಶವಮೂರ್ತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಹೊಸಹಳ್ಳಿಯ ಗಮಕಕಲಾ ಪರಿಷತ್‍ನ ಅಧ್ಯಕ್ಷ ಹೆಚ್.ಎಸ್.ಸತ್ಯನಾರಾಯಣ ವಹಿಸಲಿದ್ದಾರೆ ಎಂದರು.
ಜ.25ರ ಸಂಜೆ 7.30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಗಮಕಕಲಾ ಪರಿಷತ್ ಜಿಲ್ಲಾ ಶಾಖೆ ಅಧ್ಯಕ್ಷ ಸುಬ್ರಹ್ಮಣ್ಯ ಶಾಸ್ತ್ರಿ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಶಾಸಕ ಎಸ್.ಎನ್.ಚನ್ನಬಸಪ್ಪ, ಹಿರಿಯ ವ್ಯಾಖ್ಯಾನಗಾರರಾದ ಕಲಾಶ್ರೀ ಹೆಚ್.ಎಸ್.ಗೋಪಾಲ ಆಗಮಿಸಲಿದ್ದಾರೆ ಎಂದರು.
ಪ್ರಸಾದ್ ಭಾರದ್ವಾಜ್ ಮಾತನಾಡಿ, ಈ ವಿಶ್ವದಾಖಲೆಗಾಗಿ ಈಗಾಗಲೇ ಸಿದ್ಧತೆಯನ್ನು ನಡೆಸಿದ್ದೇನೆ. ಇದಕ್ಕಾಗಿ ತರಬೇತಿ ಕೂಡ ಮಾಡಿದ್ದೇನೆ. ಇದೊಂದು ನನ್ನ ಗಮಕ ಜೀವನದ ಅವಿಸ್ಮರಣೀಯ ಘಟನೆಯಾಗಲಿದೆ. ಗಮಕ ಕಲೆ ಈಗಾಗಲೇ ಚಾಲ್ತಿಯಲ್ಲಿದ್ದರೂ ಕೂಡ ಇದು ಮತ್ತಷ್ಟು ವಿಸ್ತಾರವಾಗಬೇಕು. ಅದನ್ನು ಜನಪ್ರಿಯಗೊಳಿಸಬೇಕು ಎಂಬುದು ನನ್ ಆಸೆ. ಈ ಕಲೆಯನ್ನು ದುಬೈನಲ್ಲೂ ಕೂಡ ವಿಸ್ತರಿಸಲಾಗುವುದು. ದುಬೈನ ಅನೇಕ ಕಡೆಗಳಲ್ಲಿ ಗಮಕ ವಾಚನಕ್ಕೆ ಕರೆ ಬಂದಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಎಂ.ಎನ್.ಸುಂದರ್‍ರಾಜ್, ಮಾನಸ ಶಿವರಾಮಕೃಷ್ಣ, ಕೇಶವಮೂರ್ತಿ, ಮಾಧವ ಭಾರದ್ವಾಜ್, ಹಾಲಸ್ವಾಮಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















