ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ #Shivamogga Airport ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಕೇಂದ್ರ ಸರ್ಕಾರದಿಂದ ಉದ್ಘೋಷಣೆ ಮಾಡಿಸಲು ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ #MP Raghavendra ಇಂದು ಭರವಸೆ ನೀಡಿದ್ದಾರೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‍ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಹೇಳಿದ್ದಾರೆ.
ಅವರು ಇಂದು ಸಂಸದರ ನಿವಾಸದಲ್ಲಿ ಈ ಸಂಬಂಧ ಭೇಟಿಮಾಡಿ, ಮನವಿಪತ್ರ ಸಲ್ಲಿಸಿದ ಸಂದರ್ಭದಲ್ಲಿ ಟ್ರಸ್ಟ್‍ನ ಮುಖಂಡರಿಗೆ ಈ ಭರವಸೆಯನ್ನು ನೀಡಿದ್ದಾರೆ.
1967ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಮೊಟ್ಟಮೊದಲ ಬಾರಿಗೆ ಪಡೆದ ಹೆಗ್ಗೆಳಿಕೆ ಕುವೆಂಪು ಅವರಿಗಿದೆ. 1968ರಲ್ಲಿ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಅವರಿಗೆ ಲಭಿಸಿದೆ. ಶ್ರೀಯುತರು ಶ್ರೀರಾಮಾಯಣ ದರ್ಶನಂ ಎಂಬ ಮಹಾಕಾವ್ಯ ರಚಿಸಿದ್ದಾರೆ. ಕಾನೂರು ಸುಬ್ಬಮ್ಮ ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಎಂಬ ಶ್ರೇಷ್ಠ ಕಾದಂಬರಿಗಳನ್ನು ರಚಿಸಿದ್ದಾರೆ. ಜಯ ಭಾರತ ಜನನಿಯ ತನುಜಾತೆ ಎಂಬ ನಾಡಗೀತೆಯನ್ನು ಕೂಡ ರಚಿಸಿದ್ದಾರೆ. ನಾಟಕ ಕೇತ್ರಗಳಲ್ಲಿಯೂ ಹಲವರು ಕೃತಿಗಳನ್ನು ಅವರು ರಚಿಸಿದ್ದು, ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದು, ಅವರ ಹೆಸರಿನಲ್ಲಿ ಕುವೆಂಪು ವಿಶ್ವ ವಿದ್ಯಾಲಯವನ್ನೂ ಸ್ಥಾಪಿಸಲಾಗಿದೆ. ಇವೆಲ್ಲವನ್ನು ಗಮನದಲ್ಲಿರಿಸಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಹಾಗೂ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ, ವಿಜಾಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವಣ್ಣ, ಹಾಗೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರುರಾಣಿ ಚೆನ್ನಮ್ಮ ಹೆಸರನ್ನು ಉದ್ಘೋಷಣೆ ಮಾಡುವುದು ಬಾಕಿ ಇದ್ದು 2ವರೆ ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ಈ ನಾಲ್ಕೂ ಹೆಸರುಗಳನ್ನು ಶಿಫಾರಸ್ಸು ಮಾಡಿದ್ದು, ಕೇಂದ್ರದಿಂದ ಉದ್ಘೋಷಣೆ ಮಾಡಿಸಲು ಕ್ರಮ ಕೈಗೊಳ್ಳುವಂತೆ ಟ್ರಸ್ಟ್ ಸದಸ್ಯರು ಮನವಿ ಮಾಡಿದರು.
ಮನವಿ ನೀಡುವ ಸಂದರ್ಭದಲ್ಲಿ ಟ್ರಸ್ಟ್‍ನ ಮುಖಂಡರಾದ ಕಲ್ಲೂರು ಮೇಘರಾಜ್, ಶಂಕ್ರಾನಾಯ್ಕ, ಅಲೀಂಖಾನ್, ಬಸವರಾಜ್, ಕೆ.ಆರ್. ಶಿವಣ್ಣ, ಭ್ರಮೇಶ್ವರ್ ಯುವರಾಜ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















