ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ವಸಹಾಯ ಗುಂಪುಗಳ ಮಹಿಳೆಯರು, ಕುಶಲಕರ್ಮಿಗಳು ತಯಾರಿಸಿದ ವಿವಿಧ ಉತ್ಪನ್ನಗಳನ್ನು ಖರೀದಿಸುವ ಮೂಲಕ ಕಲೆಗೆ ಉತ್ತೇಜನ ನೀಡಿ, ಬೆಳೆಸಬೇಕು ಹಾಗೂ ನಮ್ಮ ಈ ಕಲೆ-ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ .ಮಧು ಬಂಗಾರಪ್ಪ #Minister Madhu Bangarappa ತಿಳಿಸಿದರು.
ಗಣರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಉದ್ಯಾನ ಕಲಾ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಅಲ್ಲಮ ಪ್ರಭು ಮೈದಾನ(ಫ್ರೀಡಂ ಪಾರ್ಕ್)ದಲ್ಲಿ ಜ.24 ರಿಂದ 27ರವರೆಗೆ ಏರ್ಪಡಿಸಲಾಗಿರುವ ಮಲೆನಾಡು ಕರಕುಶಲ ಉತ್ಸವ, ಸಿರಿಧಾನ್ಯ ಮೇಳ ಹಾಗೂ ಪುಷ್ಪಸಿರಿ-63 ನೇ ಫಲ ಪುಷ್ಪ ಪ್ರದರ್ಶನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಹಲವಾರು ಉತ್ಪನ್ನಗಳನ್ನು, ಕಲಾತ್ಮಕ ವಸ್ತುಗಳನ್ನು ಈ ಪ್ರದರ್ಶನದಲ್ಲಿ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದ್ದು ಇಂತಹ ನಮ್ಮ ಹಳೆಯ ಕಲೆಗಳು ಉಳಿಯಬೇಕಾದರೆ ಅವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ಆದ್ದರಿಂದ ಶಾಲಾ ಹಂತದಲ್ಲೇ ಆಯಾ ಭಾಗದ ಕಲೆಯನ್ನು ಅಲ್ಲಿಯ ಶಾಲೆಗಳಲ್ಲಿ ಕಲಿಸುವ ಚಿಂತನೆ ಮಾಡಲಾಗುತ್ತಿದೆ ಎಂದರು.
ಪ್ರದರ್ಶನದಲ್ಲಿ ನಮ್ಮ ಜಿಲ್ಲೆಯ, ನಾಡಿನ ವಿವಿಧ ರೀತಿಯ ಕಲಾತ್ಮಕ ಉತ್ಪನ್ನಗಳು, ಸಿರಿಧಾನ್ಯಗಳು-ಖಾದ್ಯಗಳು, ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿಸಿರುವ ವಿವಿಧ ಉತ್ಪನ್ನಗಳು ಹಾಗೂ ಬೇರೆ ಬೇರೆ ಜಿಲ್ಲೆಗಳಿಂದ, ರಾಜ್ಯಗಳಿಂದ ಆಗಮಿಸಿರುವ ಹ್ಯಾಂಡ್ ಲೂಂ ಸೀರೆಗಳು, ಉತ್ಪನ್ನಗಳು ಮತ್ತು ರೈತರು ಬೆಳೆದ ಕೃಷಿ-ತೋಟಗಾರಿಕೆ ಉತ್ಪನ್ನಗಳು, ವಿವಿಧ ಜಾತಿಯ ಹಣ್ಣು, ತರಕಾರಿಗಳನ್ನು ಉತ್ತಮವಾಗಿ ಪ್ರದರ್ಶಿಸಲಾಗಿದೆ.
ಕ್ರಾಫ್ಟ್ಸ್ ಆಫ್ ಮಲ್ನಾಡ್ #Crafts of Malnad ಎಂಬ ಹೆಸರಿನಡಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಬ್ರಾಂಡಿಗ್ ಮಾಡಿದ್ದು, ಜಿಲ್ಲೆ ಹಾಗೂ ರಾಜ್ಯದ ವಿವಿಧ ಕರಕುಶಲ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ವೆಬ್‌ಸೈಟ್ ರಚನೆ ಮಾಡಿರುವುದು ಅತ್ಯುತ್ತಮ ಕೆಲಸವಾಗಿದ್ದು, ಇದರ ಹಿಂದಿನ ಶ್ರಮ ಕಾಣುತ್ತಿದೆ. ಈ ವೆಬ್‌ಸೈಟ್ ಕುರಿತು ಇನ್ನೂ ಹೆಚ್ಚಿನ ಪ್ರಚಾರ ಆಗಬೇಕು. ಈ ಕುರಿತು ಸಣ್ಣ ವಿಡಿಯೋ ತುಣುಕುಗಳು, ಕ್ಯುಆರ್ ಕೋಡ್‌ನ್ನು ವಿವಿಧ ಕಾರ್ಯಕ್ರಮಗಳಲ್ಲಿ ಪ್ರದರ್ಶಿಸಬೇಕು. ನಮ್ಮ ನಾಡಿನ ಕರಕುಶಲತೆಯನ್ನು ರಾಜ್ಯಾದ್ಯಂತ ತಿಳಿಸಲು ಕ್ರಾಫ್ಟ್ಸ್ ಆಫ್ ಮಲ್ನಾಡ್-ಕರಕುಶಲ ಉತ್ಪನ್ನಗಳ ಪ್ರದರ್ಶನವನ್ನು ರಾಜ್ಯ ಮಟ್ಟದಲ್ಲಿ ಮಾಡೋಣ ಎಂದರು.
ಮಲೆನಾಡು ಕರಕುಶಲ ಮತ್ತು ಫಲ ಪುಷ್ಪ ಪ್ರದರ್ಶನದಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕುಶಲಕರ್ಮಿಗಳು, ಮಹಿಳೆಯರು ಸಿದ್ದಪಡಿಸಿದ ಉತ್ಪನ್ನಗಳನ್ನು ಖರೀದಿಸಿ, ಅವರಿಗೆ ಆರ್ಥಿಕವಾಗಿ ಸಹಕಾರ ಹಾಗೂ ಕಲೆಗೆ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಸಚಿವರು ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಬ್ರಾಂಡ್ ‘ಕ್ರಾಫ್ಟ್÷ಆಫ್ ಮಲ್ನಾಡ್’ ವೆಬ್‌ಸೈಟ್ ಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಜವಳಿ ಮೂಲಸೌಲಭ್ಯ(ವಿದ್ಯುತ್ ಮಗ್ಗಗಳ)ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಚೇತನ್ ಕೆ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹಾದೇವಪ್ಪ, ಹಾಪ್ ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ಆಡಳಿತ ಮಂಡಳಿ ಸದಸ್ಯರಾದ ದೇವಿಕುಮಾರ್, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎ.ಬಿ.ಸಂಜಯ್, ಜಿ.ಪಂ ಯೋಜನಾ ನಿರ್ದೇಶಕಿ ನಂದಿನಿ, ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್, ಜಿಲ್ಲಾ ಉದ್ಯಾನ ಕಲಾ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಹರಳೆಣ್ಣೆಯವರ್, ಖಜಾಂಚಿ ಜಿ.ಎಂ.ರಘು, ಪದಾಧಿಕಾರಿಗಳು, ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















