ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ #Governor ನಡೆ ಕರ್ತವ್ಯಚ್ಯುತಿಯಾಗಿದ್ದು ಅದು ಖಂಡನೀಯ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ #Kimmane Rathnakar ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡುವುದು ಅವರ ಕರ್ತವ್ಯವಾಗಿದೆ. ಆದರೆ ಅವರು ಭಾಷಣವನ್ನು ಪೂರೈಸದೆ ರಾಷ್ಟ್ರಗೀತೆಯನ್ನೂ ಕೇಳಿಸಿಕೊಳ್ಳದೇ ಒಂದು ರೀತಿಯಲ್ಲಿ ಓಡಿ ಹೋಗಿದ್ದಾರೆ. ಇದು ಸರಿಯಲ್ಲ, ಅವರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಇಲ್ಲವೇ ರಾಜೀನಾಮೆ ಕೊಡಬೇಕು. ರಾಜ್ಯಪಾಲರು ಯಾವ ಪಕ್ಷಕ್ಕೂ ಸೀಮಿತವಾಗಬಾರದು. ನ್ಯಾಯಾಧೀಶರಂತೆ ನಡೆದುಕೊಳ್ಳಬೇಕು. ಆದರೆ ಅವರು ತನ್ನ ಪೂರ್ವಶ್ರಮವನ್ನು ನೆನಪು ಮಾಡಿಕೊಂಡವರಂತೆ ಕೇಂದ್ರದ ಕೈಗೊಂಬೆಯಂತೆ ವರ್ತಿಸಿ ಹೋಗಿರುವುದು ಅತ್ಯಂತ ಖಂಡನೀಯ. ಅವರು ಸಾಮಂತ ರಾಜರಲ್ಲ, ಬಿಜೆಪಿಯ ಪ್ರತಿನಿಧಿಯೂ ಅಲ್ಲ, ಅವರಿಂದ ಹಕ್ಕುಚ್ಯುತಿಯಾಗಿದೆ ಎಂದು ಟೀಕಿಸಿದರು.
ಕೇಂದ್ರದ ಬಿಜೆಪಿ ಸರ್ಕಾರ ಅತಿಯಾಗಿ ವರ್ತಿಸುತ್ತಿದೆ. ಮನರೇಗಾ ವಿಷಯದಲ್ಲಿ ಇದು ಸ್ಪಷ್ಟವಾಗಿ ಗೋಚರವಾಗಿದೆ. ಗಾಂಧೀಜಿಯವರ ಹೆಸರನ್ನು ತೆಗೆಯಲು ಕಾರಣ ಏನಿತ್ತು ? ಮನರೇಗಾ ವಿಶೇಷ ಅಧಿವೇಶನ ಕರೆದಿದ್ದು ವಿರೋಧಪಕ್ಷಗಳಿಗೆ ಚರ್ಚೆಮಾಡಲು ಅವಕಾಶ ಕೊಟ್ಟಿದ್ದಾರೆ. ಆದರೆ ಅವರು ಹಾಗೆ ಮಾಡಲೇ ಇಲ್ಲ. ಬಿಜೆಪಿಯವರಿಗೆ ಮನರೇಗಾ ಅರ್ಥವೇ ಆಗಿಲ್ಲ. ಈ ದೇಶದಲ್ಲಿ ೩೦ ಕೋಟಿ ಜನರಿಗೆ ಉದ್ಯೋಗ ಇಲ್ಲ. ಕೇಂದ್ರ ಸರ್ಕಾರದಿಂದ ಉದ್ಯೋಗ ಸೃಷ್ಟಿಯೂ ಇಲ್ಲ. ಸರ್ಕಾರಿ ಕೆಲಸ ನೀಡಲು ಸಾಧ್ಯವಿಲ್ಲ ನಿಜ. ಆದರೆ ಮನರೇಗಾದಂತಹ ಕಾರ್ಯಕ್ರಮದಲ್ಲಿ ನಿರುದ್ಯೋಗಿಗಳಿಗೆ ಅವಕಾಶ ಕೊಡಬಹುದು. ಇದು ಒಂದು ಸಾಮಾಜಿಕ ಕೆಲಸವೂ ಹೌದು. ದೇಶದಲ್ಲಿ ಸುಮಾರು ೨ ಲಕ್ಷ ಗ್ರಾಮ ಪಂಚಾಯ್ತಿಗಳಿವೆ. ಗ್ರಾ.ಪಂ.ಮಟ್ಟದಲ್ಲಿ ಯುವಕರ ಕೈಗೆ ಉದ್ಯೋಗವಿಲ್ಲ. ಈಗ ಈ ಉದ್ಯೋಗಕ್ಕೂ ಕೇಂದ್ರ ಸರ್ಕಾರದ ಹೊಸ ಕಾಯ್ದೆ ಕಡಿವಾಣ ಹಾಕುತ್ತಿದೆ ಎಂದರು.
ಮನರೇಗಾ ಎಂಬುದು ಗ್ರಾಮೀಣ ಭಾರತದ ಕನಸು. ಕೇಂದ್ರದ ಹೊಸ ನಿರ್ಧಾರದಿಂದ ಗ್ರಾ.ಪಂ.ಗಳಿಗೆ ಯಾವ ಹಕ್ಕೂ ಇಲ್ಲ, ಎಲ್ಲಾ ಅಧಿಕಾರವನ್ನು ಖಾಸಗಿಯವರಿಗೆ ನೀಡಲಾಗಿದೆ. ಕಳೆದ ೩ ವರ್ಷಗಳಿಂದ ಉದ್ಯೋಗಖಾತ್ರಿ ಯೋಜನೆಯಡಿ ಬರಬೇಕಾಗಿದ್ದ ಸುಮಾರು ೨೮೦೦ ಕೋಟಿ ರೂ. ಹಣ ಇನ್ನೂ ಬಿಡುಗಡೆಯಾಗಿಲ್ಲ. ಇದರ ಜೊತೆಗೆ ಹೊಸ ಕಾಯ್ದೆಯಲ್ಲಿ ರಾಜ್ಯ ಸರ್ಕಾರ ಶೇ.೪೦ರಷ್ಟು ಹಣ ನೀಡಬೇಕು ಎಂಬ ನಿಯಮವನ್ನು ಏಕೆ ಮಾಡಿದ್ದಾರೋ ಗೊತ್ತಿಲ್ಲ ಎಂದರು.
ಬಿಜೆಪಿ ಜಾತಿ, ಧರ್ಮದ ಆಧಾರದಲ್ಲಿ ಆಡಳಿತ ನಡೆಸಲು ಹೊರಟಿದೆ. ಅವರು ಹೇಳುವುದೇ ಒಂದು, ಮಾಡುವುದೇ ಮತ್ತೊಂದು ಒಂದು ರೀತಿಯಲ್ಲಿ ಸಕ್ಕರೆ ಲೇಪಿಸಿ ವಿಷ ಉಣಿಸುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯನ್ನೇ ವಿರೋಧಿಸುತ್ತಿದ್ದಾರೆ. ಬಿಜೆಪಿಯವರಿಗೆ ಪ್ರಿಯವಾದ `ಬಂಚ್ ಆಫ್ ಥಾಟ್ಸ್ ಎಂಬ ಪುಸ್ತಕದಲ್ಲಿ ಒಕ್ಕೂಟದ ವಿರುದ್ಧದ ಸ್ಪಷ್ಟ ನಿರ್ದೇಶನವಿದೆ. ಹಿಂದೂ ಧರ್ಮದ ಬಗ್ಗೆ ಮಾತನಾಡುವ ಬಿಜೆಪಿಯವರು ಇಲ್ಲಿನ ಜಾತಿ ವ್ಯವಸ್ಥೆಯ ಬಗ್ಗೆ ಏಕೆ ಮಾತನಾಡುವುದಿಲ್ಲ. ಜಾತಿಯ ವ್ಯವಸ್ಥೆ ಎಂಬುದು ಹೊಸ್ತಿಲ ಒಳಗೆ ಮತ್ತು ಹೊಸ್ತಿಲ ಹೊರಗೆ ಬೇರೆ ಬೇರೆ ಇರುತ್ತದೆಯೇ ಎಂದರು.
ಹೊಸ ಹೊಸ ಕಾರ್ಯಕ್ರಮಗಳನ್ನು ಹಿಂದೂ ಹೆಸರಿನಲ್ಲಿ ಮಾಡುವ ಮೂಲಕ ನಾವೆಲ್ಲಾ ಒಂದು ಎಂದು ಹೇಳುವ ಬಿಜೆಪಿಗರಲ್ಲಿ ನಾವೆಲ್ಲಾ ಒಂದೇ ಎಂಬ ಭಾವನೆ ಎಲ್ಲಿದೆ ? ಅವರ ಪುಸ್ತಕಗಳಲ್ಲಿ ಮೀಸಲಾತಿಗಳ ವಿರೋಧವಿದೆ. ಸಂಸ್ಕೃತ ಒಂದೇ ಭಾಷೆ ಇರಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಸಂಪ್ರದಾಯ ಉಳಿಸಬೇಕು ಎಂದು ಸಾರಿ ಸಾರಿ ಚಿಂತನಾಗಂಗಾ ಸೇರಿದಂತೆ ಅವರ ಅನೇಕ ಪುಸ್ತಕಗಳಲ್ಲಿ ಹೇಳಿದ್ದಾರೆ. ಇದನ್ನೂ ಇವರು ಒಪ್ಪುತ್ತಾರೆಯೇ ? ಧೈರ್ಯವಿದ್ದರೆ ಈ ಪುಸ್ತಕಗಳನ್ನು ವಿರೋಧಿಸಲಿ. ಒಂದು ಭಾಷೆ, ಒಂದು ದೇಶ ಎಂದರೆ ಸಮಗ್ರತೆ ಹೇಗೆ ಬರಲು ಸಾಧ್ಯ ? ಇದು ಒಕ್ಕೂಟದ ವ್ಯವಸ್ಥೆ. ಇಲ್ಲಿ ಎಲ್ಲಾ ಧರ್ಮಗಳು, ಭಾಷೆಗಳು ಇವೆ. ಇದೆಲ್ಲವನ್ನು ಬಿಟ್ಟು ಕೇವಲ ಧರ್ಮದ ಆಧಾರದಲ್ಲಿ ಒಗ್ಗೂಡುವುದು ಹೇಗೆ ಸಾಧ್ಯ. ಸಾಮಾಜಿಕ ಸಾಮರಸ್ಯದ ಬಗ್ಗೆ ಇವರ ಕಾರ್ಯಕ್ರಮಗಳಲ್ಲಿ ಏನಾದರೂ ಸ್ಪಷ್ಟತೆ ಇದೆಯಾ ? ಸ್ವದೇಶಪ್ರೇಮದ ಬಗ್ಗೆ ಮಾತನಾಡುವ ಇವರ ಮಕ್ಕಳುಗಳು ವಿದೇಶದಲ್ಲಿ ಸುಖವಾಗಿ ಇರುತ್ತಾರೆ. ಇವರ ನಡೆಗೂ-ನುಡಿಗೂ ಯಾವ ಸಂಬಂಧವೂ ಇಲ್ಲ. ರಾಷ್ಟ್ರಗೀತೆಗೆ ಗೌರವ ಕೊಡದೇ ಇರುವವರು ಒಂದೇ ಮಾತರಂ ಗೀತೆ ಹಿಡಿದುಕೊಂಡು ಒದ್ದಾಡುತ್ತಿದ್ದಾರೆ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಮಾಜಿ ಜಿ.ಪಂ. ಸದಸ್ಯ ಕಲಗೋಡು ರತ್ನಾಕರ್, ಪ್ರಮುಖರಾದ ರಾಘವೇಂದ್ರ, ಕೆಸ್ತೂರು ಮಂಜುನಾಥ್, ಪೂರ್ಣೇಶ್, ಅಮರನಾಥ್‌ಶೆಟ್ಟಿ, ಆದರ್ಶ, ಜಯಕರಶೆಟ್ಟಿ, ಶ್ರೇಯಸ್‌ರಾವ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















