ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ದಿನ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಒಂಭತ್ತು ಪ್ರಮುಖ ಬ್ಯಾಂಕ್ ಅಧಿಕಾರಿಗಳ ಮತ್ತು ನೌಕರರ ಸಂಘಟನೆಯ ಒಕ್ಕೂಟವಾದ ಯು.ಎಫ್.ಬಿ.ಯು. 5 ದಿನಗಳ ಕೆಲಸದ ವಾರ #5-day work week ಜಾರಿಗೆ ಒತ್ತಾಯಿಸಿ ನಗರದ ಬಿ.ಹೆಚ್. ರಸ್ತೆಯ ಎಸ್.ಬಿ.ಐ. ಕಛೇರಿಯಿಂದ ಸೀನಪ್ಪಶೆಟ್ಟಿ ವೃತ್ತದವರೆಗೆ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಇಂದಿನಿಂದ ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಬ್ಯಾಂಕ್ ನೌಕರರು ತಮ್ಮ ಕೆಲಸವನ್ನು ಬಹಿಷ್ಕರಿಸಿ ತಮ್ಮ ನ್ಯಾಯಸಮ್ಮತ ಬೇಡಿಕೆಯಾದ ವಾರದಲ್ಲಿ 5 ದಿನಗಳು ಮಾತ್ರ ಕೆಲಸದಲ್ಲಿ ತೊಡಗಿಸಿಕೊಂಡು ಉಳಿದ 2 ದಿನಗಳ ರಜೆ ಜಾರಿ ಮಾಡಬೇಕು ಎಂದು ಮುಷ್ಕರದಲ್ಲಿ ಭಾಗವಹಿಸಿದ ಬ್ಯಾಂಕ್ ನೌಕರರು ಒತ್ತಾಯಿಸಿದ್ದಾರೆ.
ಸರ್ಕಾರದ ಬ್ಯಾಂಕಿಂಗ್ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನಾ #Bank Employees Protest ಜಾಥಾದ ಮೂಲಕ ಸಾರ್ವಜನಿಕರಲ್ಲಿ ಮುಷ್ಕರದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಸಮನ್ವಯಕಾರ ನೆಲ್ಸನ್‌ರವರು ಬ್ಯಾಂಕ್ ನೌಕರರ ದೀರ್ಘಕಾಲದ ಪ್ರಮುಖ ಬೇಡಿಕೆಯಾದ 5 ದಿನಗಳ ಕೆಲಸದ ವಾರ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ಲಿಖಿತ ಒಪ್ಪಂದವಾಗಿದ್ದು, ಹಲವು ಸುತ್ತಿನ ಮಾತುಕಥೆಗಳು ನಡೆದಿದ್ದರೂ ಸಹ ಕೇಂದ್ರ ಸರ್ಕಾರದಿಂದ ಇನ್ನೂ ಅಂತಿಮ ಅನುಮೋದನೆ ದೊರೆತ್ತಿಲ್ಲ. ಈ ವಿಷಯವನ್ನು ಸೌಹಾರ್ಧಯುತವಾಗಿ ಬಗೆಹರಿಸುವ ಉದ್ದೇಶದಿಂದ ಯುಎಫ್‌ಬಿಯು ಹಲವಾರು ಭಾರಿ ರಾಜೀ ಸಂಧಾನ ಸಭೆಗಳಲ್ಲಿ ಭಾಗವಹಿಸಿ ಚರ್ಚೆ ನಡೆಸಿದ್ದರು. ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಷ್ಟ ಭರವಸೆ ಲಭ್ಯವಾಗದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಈ ಮುಷ್ಕರ ನಡೆಸುತ್ತಿದ್ದೇವೆ ಎಂದರು.
ಪ್ರಸ್ತುತ ಬ್ಯಾಂಕ್ ಸಿಬ್ಬಂದಿಗಳು ಸಿಬ್ಬಂದಿ ಕೊರತೆ ನಡುವೆಯೂ ಬಹುತೇಕ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹಣಕಟ್ಟಲು, ಹಿಂಪಡೆಯುವ ಸೌಲಭ್ಯಗಳನ್ನು ಎಟಿಎಂನಲ್ಲಿ ಕಲ್ಪಿಸಲಾಗಿದೆ. ಆನ್‌ಲೈನ್ ಬ್ಯಾಂಕಿಂಗ್ ಉಪಯೋಗಿಸಬಹುದಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ನೌಕರರು ಇನ್ಸುರೆನ್ಸ್, ಆರ್.ಬಿ.ಐ. ಸೇರಿದಂತೆ ಹಲವು ಸಂಸ್ಥೆಗಳಲ್ಲಿ ವಾರಕ್ಕೆ ೫ದಿನ ಮಾತ್ರ ಕೆಲಸವಿದೆ. ಆದರೆ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮತ್ತು ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಬ್ಯಾಂಕ್ ನೌಕರರಿಗೆ ಮಾತ್ರ ವಾರಪೂರ್ತಿ ಕೆಲಸ. ಒತ್ತಡಕ್ಕೆ ಕಾರಣವಾಗುತ್ತಿದೆ. ಬ್ಯಾಂಕುಗಳು 5 ದಿನ ಕೆಲಸ ನಿರ್ವಹಿಸಿದರೆ, ಗ್ರಾಹಕರಿಗೂ ಯಾವುದೇ ಸಮಸ್ಯೆ ಇರುವುದಿಲ್ಲ. ಇದು ಉತ್ತಮ ಬ್ಯಾಂಕಿಂಗ್ ವ್ಯವಸ್ಥೆಗೂ ಕಾರಣವಾಗುತ್ತದೆ. ಕೇವಲ ನೌಕರರಿಗ ಮಾತ್ರವಲ್ಲ ಆದ್ದರಿಂದ ಕೂಡಲೇ ಕೇಂದ್ರ ಸರ್ಕಾರ ಬ್ಯಾಂಕ್ ನೌಕರರ ಈ ಬೇಡಿಕೆಯನ್ನು ಈಡೇರಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಪುನೀತ್‌ಕುಮಾರ್, ವಿಶ್ವನಾಥ್ ಕೆ.ಆರ್., ಹೊನ್ನಪ್ಪ, ಮಿಥುನ್‌ಕುಮಾರ್, ಸಾಗರ್ ಜೋಶಿ, ಮಂಜುನಾಥ್ ಬಿ.ಎಂ., ಮುರಳೀಧರ್, ಸಂತೋಷ್‌ಕುಮಾರ್ ಎಂ.ಎ., ವಲ್ಲಭ ಬಿ.ಎಸ್., ಶಶಿಧರ್, ಧೀರಜ್ ಸೇರಿದಂತೆ ವಿವಿಧ ಬ್ಯಾಂಕ್ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















