ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದ ಹೃದಯಭಾಗದಲ್ಲಿ ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ನಿರ್ಮಾಣಗೊಂಡಿರುವ ಎಸ್.ಕೆ.ಎಂ. ಪ್ಲಾಜಾ #SKM Plaza (ಸುಲ್ತಾನ್ ಗೋಲ್ಡ್ ಬಿಲ್ಡಿಂಗ್) ಆಸ್ತಿಯನ್ನು ಮಾಜಿ ಮೇಯರ್ ಎಸ್.ಕೆ. ಮರಿಯಪ್ಪ ಮತ್ತು ಅವರ ಮಕ್ಕಳಾದ ಎಸ್.ಎಂ. ಶರತ್ ಮತ್ತು ಎಸ್.ಎಂ. ಅಭಿಲಾಷ್ ಅಕ್ರಮವಾಗಿ ಖಾತೆ ಮಾಡಿಕೊಂಡಿದ್ದರ ಬಗ್ಗೆ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು. ವಿಚಾರಣೆಯ ನಂತರ ಕರ್ನಾಟಕ ಹೈಕೋರ್ಟ್ ಇದು ಪಾಲಿಕೆಯ ಆಸ್ತಿಯಾಗಿದ್ದು, ತತ್‌ಕ್ಷಣ ಮಹಾನಗರ ಪಾಲಿಕೆಯ ಆಯುಕ್ತರು ಯಾವುದೇ ವಿಳಂಬಮಾಡದೆ ಈಗಿರುವ ಖಾತೆಯನ್ನು ರದ್ದುಪಡಿಸಿ ತನ್ನ ಸುಪರ್ದಿಗೆ ಪಡೆದುಕೊಳ್ಳಬೇಕು ಎಂದು ತೀರ್ಪು ನೀಡಿದೆ ಎಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ವಸಂತ್‌ಕುಮಾರ್ ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2005ರಲ್ಲೇ ನಾವು ಈ ಅಕ್ರಮ ಖಾತೆಯ ಬಗ್ಗೆ ಆರೋಪಿಸಿ ಅಂದಿನ ಜಿಲ್ಲಾಧಿಕಾರಿಗಳು ಮತ್ತು ಪೌರಾಡಳಿತ ನಿರ್ದೇಶಕರಿಗೆ ದೂರು ನೀಡಿದ್ದರು. ಪೌರಾಡಳಿತ ಇಲಾಖೆ 2017ರಲ್ಲಿ ತಮ್ಮ ಆದೇಶದ ಮೂಲಕ ಎಸ್.ಕೆ. ಮರಿಯಪ್ಪ ಮತ್ತು ಅವರ ಮಕ್ಕಳಾದ ಎಸ್.ಎಂ. ಶರತ್ ಮತ್ತು ಎಸ್.ಎಂ. ಅಭಿಲಾಷ್ ಅವರ ಖಾತಾ ರದ್ದುಗೊಳಿಸಿದ್ದರೂ ಬಳಿಕ ಈ ಆದೇಶದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಶರತ್ ಮತ್ತು ಅಭಿಲಾಷ್ ರಿಟ್‌ಅರ್ಜಿ ಸಲ್ಲಿಸಿದ್ದರು. ನಾಗರೀಕ ಹಿತರಕ್ಷಣಾವೇದಿಕೆ ಈ ದಾವೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಹೈಕೋರ್ಟಿಗೆ ಸಲ್ಲಿಸಿತ್ತು.
ಹಿರಿಯ ವಕೀಲರಾದ ಎಸ್.ವಿ. ಪ್ರಕಾಶ್ ಅವರು ನಮ್ಮ ಪರವಾಗಿ ಹಾಗೂ ಮಹಾನಗರ ಪಾಲಿಕೆಯ ಪರವಾಗಿ ವಕೀಲ ಗಂಗಾಧರಪ್ಪ ವಾದಿಸಿದ್ದರು. ದೀರ್ಘ ವಿಚಾರಣೆಯ ನಂತರ ಹೈಕೋರ್ಟ್ ರಿಟ್‌ಅರ್ಜಿ 4993/2017ನ್ನು ಹೈಕೋರ್ಟ್ ವಜಾಗೊಳಿಸಿ ಕಾನೂನು ದುರುಪಯೋಗ ಹಾಗೂ ಭ್ರಷ್ಟ ಮಾರ್ಗದ ಮೂಲಕ ಈ ಆಸ್ತಿಯ ಖಾತೆ ಮಾಡಿಕೊಳ್ಳಲಾಗಿದೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದು, ತತ್‌ಕ್ಷಣ ಈ ಆಸ್ತಿ ದಾಖಲೆಗಳನ್ನು ಪಾಲಿಕೆಯ ಹೆಸರಿಗೆ ಬದಲಾಯಿಸಿ ಆಸ್ತಿಯನ್ನು ತಕ್ಷಣ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ತೀರ್ಪು ನೀಡಿದೆ. ಆದ್ದರಿಂದ ಪಾಲಿಕೆಯ ಆಯುಕ್ತರು ವಿಳಂಬ ಮಾಡದೆ ಈ ಆಸ್ತಿಯನ್ನು ತನ್ನ ವಶಕ್ಕೆ ಪಡೆಯಬೇಕು. ಸಾರ್ವಜನಿಕ ಆಸ್ತಿ ಕಬಳಿಕೆ ಮಾಡಿ ಕೋಟ್ಯಾಂತರ ಬಾಡಿಗೆ ಗಳಿಸಿದ ಆಸ್ತಿಯ ಖಾತೆದಾರರು ಹಾಗೂ ಖಾತೆ ಮಾಡಿದ ಪಾಲಿಕೆ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಸೂಕ್ತ ನ್ಯಾಯಾಲಯದಲ್ಲಿ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಯ ಒಕ್ಕೂಟದ ಪರವಾಗಿ ಒತ್ತಾಯಿಸಿದ್ದಾರೆ. ಸೂಡಾ ಶೆಡ್‌ಕೂಡ ಪಾಲಿಕೆಯ ಆಸ್ತಿಯಾಗಿದ್ದು, ಅದನ್ನೂ ಕೂಡ ತೆರವುಗೊಳಿಸಬೇಕು. ಅಲ್ಲದೆ ಕಸ್ತೂರಬಾ ಮತ್ತು ಕಮಲಾ ನೆಹರೂ ಕಾಲೇಜಿನ ಮಧ್ಯೆ ಇರುವ ರಾಜಾ ಕಾಲುವೆಯ ಒತ್ತುವರಿಯನ್ನೂ ತೆರೆವುಗೊಳಿಸಬೇಕೆಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಎ.ಆರ್. ಗೋಪಾಲ್, ಸಂಘಟನಾ ಕಾರ್ಯದರ್ಶಿ ಡಾ.ಎ.ಸತೀಶ್‌ಕುಮಾರ್‌ಶೆಟ್ಟಿ, ಕಾರ್ಯದರ್ಶಿ ಎಸ್.ಬಿ. ಅಶೋಕ್‌ಕುಮಾರ್, ವಿನೋದ್‌ಪೈ, ಪರಿಸರ ರಮೇಶ್, ಬಾಬು ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















