ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬದುಕಿನಲ್ಲಿ ಎದುರಾಗುವ ಸೋಲು ಗೆಲುವಿನ ವಾಸ್ತವತೆಯನ್ನು ನಿರ್ವಹಿಸುವ ಕೌಶಲ್ಯತೆಯನ್ನು ಕ್ರೀಡೆ ನೀಡಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಶುಕ್ರವಾರ ಎನ್ಇಎಸ್ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕುವೆಂಪು ವಿಶ್ವವಿದ್ಯಾಲಯ #Kuvempu University ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ #Ball Badminton Tournament ಉದ್ಘಾಟಿಸಿ ಮಾತನಾಡಿದರು.
ಬ್ಯಾಡ್ಮಿಂಟನ್ ಜನಪ್ರಿಯವಾದ ಬಳಿಕ ಬಾಲ್ ಬ್ಯಾಡ್ಮಿಂಟನ್ ಕ್ರೀಡೆ ಸ್ವಲ್ಪ ಮಟ್ಟಿಗೆ ಹಿಂದೆ ಸರಿದಿದ್ದರೂ, ಇಂದಿಗೂ ಕಾಲೇಜು ವಿದ್ಯಾರ್ಥಿಗಳ ನಡುವೆ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ವಿಶೇಷವಾಗಿ 1970ರ ದಶಕದಲ್ಲಿ ಈ ಕ್ರೀಡೆ ಬಹು ಜನಪ್ರಿಯವಾಗಿದ್ದು, ಒಂದೇ ತಂಡದಲ್ಲಿ ಐದು ಮಂದಿ ಆಟಗಾರರು ಭಾಗವಹಿಸುತ್ತಿದ್ದರು.
ಮಹಿಳೆಯರು ಸೀರೆ ಧರಿಸಿ ಹಾಗೂ ಅನೇಕ ಪುರುಷರು ಪಂಚೆ ಧರಿಸಿಯೇ ಈ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರು. ಕಾರಣ, ಈ ಆಟದಲ್ಲಿ ಹೆಚ್ಚು ಓಡಾಟ ಅಗತ್ಯವಿರದೆ, ಕೈಮಣಿಯ ನಿಯಂತ್ರಣ ಮತ್ತು ಕೌಶಲ್ಯವೇ ಮುಖ್ಯವಾಗಿರುತ್ತದೆ. ಇಂತಹ ಅಪ್ಪಟ ಭಾರತೀಯ ಮೂಲ ಕ್ರೀಡೆಯನ್ನು ಇಂದಿನ ತಲೆಮಾರಿಗೆ ಪರಿಚಯಿಸಿ ಪ್ರೋತ್ಸಾಹಿಸುತ್ತಿರುವ ವಿಶ್ವವಿದ್ಯಾನಿಲಯದ ಕ್ರಮ ಶ್ಲಾಘನೀಯವಾಗಿದೆ. ಕ್ರೀಡೆಯಲ್ಲಿ ಗೆಲುವು ಸೋಲು ಮುಖ್ಯವಲ್ಲ, ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದು ಮುಖ್ಯ. ಶಿಸ್ತು, ಸೌಹಾರ್ದ ಮತ್ತು ಕ್ರೀಡಾ ಮನೋಭಾವದೊಂದಿಗೆ ಸಕ್ರಿಯವಾಗಿ ಭಾಗವಹಿ ಎಂದು ಕರೆ ನೀಡಿದರು.
ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಅನಿಲ್ ಸಾಗರ್ ಮಾತನಾಡಿ, ಕ್ರೀಡಾಕೂಟ ಬಂದಾಗ ಮಾತ್ರ ಕ್ರೀಡಾ ತರಬೇತಿಯಲ್ಲಿ ಭಾಗವಹಿಸುವ ಸಕ್ರಿಯತೆ ತೋರದೆ, ಅಭ್ಯಾಸ ನಿರಂತರವಾಗಿರಲಿ ಎಂದು ಹೇಳಿದರು.
ಕುವೆಂಪು ವಿವಿ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ.ಎನ್.ಡಿ.ವಿರೂಪಾಕ್ಷ ಮಾತನಾಡಿದರು. ಪ್ರಾಂಶುಪಾಲರಾದ ಪಿ.ಆರ್.ಮಮತಾ ಅಧ್ಯಕ್ಷತೆ ವಹಿಸಿದ್ದರು. ಎ.ಟಿ.ಎನ್.ಸಿ.ಸಿ ವಿಶೇಷ ಕರ್ತವ್ಯಾಧಿಕಾರಿ ಡಾ.ಆರ್.ಎಂ.ಜಗದೀಶ್, ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ವಿ.ನಾರಾಯಣ್, ಎ.ಟಿ.ಎನ್.ಸಿ.ಸಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಂತೋನಿ ಫ್ರಾನ್ಸಿಸ್ ಉಪಸ್ಥಿತರಿದ್ದರು. ವಿಶ್ವವಿದ್ಯಾಲಯ ವ್ಯಾಪ್ತಿಯ ಪುರುಷ ಮತ್ತು ಮಹಿಳೆಯರ 25 ತಂಡಗಳು ಭಾಗವಹಿಸಿದ್ದವು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















