ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ವಸುಧಾ ವೈಶಾಲಿ ಜನ್ಮದಿನೋತ್ಸವದ ಸಲುವಾಗಿ ಕಲಾ ಸನ್ಮಾನ ಸಮಾರಂಭದ ಗೌರವಕ್ಕೆ ಭಾಜನರಾದ ಶ್ರೀಮತಿ ಪೂಜಾ ರಘುನಂದನ್ ಕುಂದಾ ನಗರಿ ಎಂದೇ ಪ್ರಖ್ಯಾತವಾದ ಬೆಳಗಾವಿಯಲ್ಲಿ #Belgaum ಜನಿಸಿದರು. ಬಾಲ್ಯದಿಂದಲೇ ಕ್ರೀಡಾ ಚಟುವಟಿಕೆಯಲ್ಲಿ ಪ್ರಸಿದ್ಧಿಯಾಗಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಪಡೆದು ತಮ್ಮೂರಿಗೆ ಹೆಮ್ಮೆ ತಂದ ಪ್ರತಿಭೆ. ಇವರು ವಿವಾಹವಾಗಿ ಬಂದದ್ದು ಹಾಸನಕ್ಕೆ. #Hassan ಅಲ್ಲಿ ತಮ್ಮ ಚಟುವಟಿಕೆಗಳನ್ನು ವಿಸ್ತಾರಗೊಳಿಸಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾದರು. ರಂಗಭೂಮಿ, ಸಮಾಜ ಸೇವೆ, ಪತ್ರಿಕಾ ರಂಗ, ಮಾಡಲಿಂಗ್, ಸಾಹಿತ್ಯ, ಸಂಗೀತ, ಸಂಘಟನೆ, ಶಿಕ್ಷಣ, ಆರೋಗ್ಯ ಹೀಗೆ ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ತೊಡಗಿಸಿಕೊಂಡು ಬಹುಮುಖ ಪ್ರತಿಭೆ ಎಂದೆನಿಸಿಕೊಂಡವರಾಗಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಈಚೆ ಪೂಜಾ ರಘುನಂದನ್ #PoojaRaghunandan ಅವರು ರಂಗಭೂಮಿ ಕಲಾವಿದೆಯಾಗಿ ತಂತ್ರಜ್ಞಾನ ಕ್ಷೇತ್ರಕ್ಕೆ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ರಾಜ್ಯದ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿರುವ ಹೆಗ್ಗಳಿಕೆ ಇವರದು. “ರಂಗ ಹೃದಯ” ಎಂಬ ತಂಡದೊಂದಿಗೆ ಐತಿಹಾಸಿಕ, ಸಾಮಾಜಿಕ ನಾಟಕಗಳಲ್ಲಿ ನಾಯಕಿಯಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ನಂತರ ಇವರನ್ನು ಸೆಳೆದದ್ದು ಮಕ್ಕಳ ರಂಗಭೂಮಿಯ ಕ್ಷೇತ್ರ. ಹಾಸನದಲ್ಲಿ ಇವರು ಮೊಟ್ಟಮೊದಲ ಬಾರಿಗೆ ಮಕ್ಕಳರಂಗ ಶಿಬಿರವಾದ “ಕುಣಿಯೋಣು ಬಾರ” #KuniyonuBara ವನ್ನು ಆರಂಭಿಸಿ ಅದರ ನಿರ್ದೇಶಕರಾಗಿ ಅತ್ಯಂತ ಯಶಸ್ವಿಯಾಗಿ ಅದನ್ನು ಮುನ್ನಡೆಸುತ್ತಾ ಬಂದಿದ್ದಾರೆ.
ಕಲಾಕ್ಷೇತ್ರದಲ್ಲಿ ಇವರ ಕೊಡುಗೆ ಅಪಾರ. ಸ್ಮಶಾನ ಕಾಯುವ ಕೆಲಸ ಮಾಡುವ ಮಹಿಳೆಯ ಜೀವನ ಕಥೆ ಆಧರಿಸಿದ ‘ಕೊನೆಯ ನಿಲ್ದಾಣ’ ಚಿತ್ರದ ನಾಯಕಿಯಾಗಿ ಅಭಿನಯಿಸಿ ಉತ್ತಮ ಪ್ರದರ್ಶನ ನೀಡಿರುವುದೇ ಅಲ್ಲದೆ, ಸುಮಾರು ಹತ್ತಕ್ಕೂ ಅಧಿಕ ಕಲಾತ್ಮಕ ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿದ ಹೆಗ್ಗಳಿಕೆ ಇವರದು. ಕನ್ನಡದ ಖ್ಯಾತ ನಟ ಕೆ ಸುಚೇಂದ್ರ ಪ್ರಸಾದ್ ಅವರು ನಾಯಕನಾದ ಸಿನೆಮಾ ‘ಒಂದಾನೊಂದು ಕಾಲದಾಗ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ಉತ್ತಮ ಅಭಿನಯವನ್ನು ನೀಡಿರುತ್ತಾರೆ. ಅದು ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿಯೂ ಪ್ರದರ್ಶಿತವಾಗಿದೆ.
ಪಿಆರ್ ಸ್ಪೆಷಲ್ ಯೂಟ್ಯೂಬ್ ಚಾನೆಲ್ ಮುಖಾಂತರ ಹಾಸನದ ಸ್ಥಳೀಯ ಅನೇಕ ಹೊಸ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟ ಶ್ರೀಮಂತ ವ್ಯಕ್ತಿತ್ವ ಇವರದು. ಅಲ್ಲದೆ ಇವರು ‘ಪರಿದೃಶ್ಯ’ ಅಂತಾರಾಷ್ಟ್ರೀಯ ಚಿತ್ರೋತ್ಸವದ ತೀರ್ಪುಗಾರರಲ್ಲೊಬ್ಬರಾಗಿದ್ದರು. ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆಯಲ್ಲಿನ ಸೆನ್ಸಾರ್ ಬೋರ್ಡ್ ನ ಪ್ಯಾನಲ್ ಅಡ್ವೈಸರ್ ಸದಸ್ಯರಾಗಿ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದ ದಿಟ್ಟೆ ಇವರು. ದೂರದರ್ಶನ ಚಂದನದ ವಿಜ್ಞಾನ ವಿಸ್ಮಯ ಎಂಬ ಸರಣಿ ಕಾರ್ಯಕ್ರಮದ ಕಂಠದಾನ ಕಲಾವಿದೆಯೂ ಹೌದು. ಸಮಾಜಮುಖಿಯಾದ ಇವರು ರೋಟರಿ ಕ್ಲಬ್ ಅಧ್ಯಕ್ಷರಾಗಿ ಹತ್ತು ಹಲವು ಗಮನಾರ್ಹ ಕಾರ್ಯ ಕೈಗೊಂಡು ಪ್ರಸಿದ್ಧರಾಗಿ, ಅನೇಕ ಸೇವಾ ಸಂಘಟನೆಗಳಲ್ಲಿಯೂ ಕೂಡ ಸಕ್ರಿಯ ಕಾರ್ಯಕರ್ತೆಯೂ ಆಗಿದ್ದಾರೆ.
ಕಲಾಸೇವೆಗಾಗಿ ಹಾಸನ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಮುಖ ಎನಿಸುವ ಪ್ರಶಸ್ತಿಗಳು, ಸನ್ಮಾನಗಳು ಇವರನ್ನು ಅರಸಿ ಬಂದಿವೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಅವರೊಂದಿಗೆ ಸಂವಾದ ಮಾಡುವ ಅವಕಾಶ ದೊರೆತಿದ್ದು ಇವರ ಹೆಮ್ಮೆಯ ಸಂಗತಿಗಳಲ್ಲೊಂದು. ಪ್ರಸ್ತುತ ಶ್ರೀವಿದ್ಯಾ ಪ್ರತಿಷ್ಠಾನದ ಅಧ್ಯಕ್ಷೆ, ರಂಗ ಹೃದಯ ತಂಡದ ಕಾರ್ಯದರ್ಶಿ, ಸ್ಥಳೀಯ ದೈನಿಕ ಪತ್ರಿಕೆಯಾದ ಹೊಯ್ಸಳ ಪಥದ ಸಂಪಾದಕಿ, ಇನ್ನರ್ ವೀಲ್ ಸಂಸ್ಥೆಯ ಗೌರವ ಸದಸ್ಯರಾದ ಇವರು ಪ್ರಸ್ತುತ ಜಿಲ್ಲಾ ಆರೋಗ್ಯ ಸಮಿತಿಯ ಜಿಲ್ಲಾ ಸದಸ್ಯರಾಗಿ ಭ್ರೂಣ ಲಿಂಗ ಪತ್ತೆ ತಡೆಯುವಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಸಮಾಜ ಸೇವೆ ಸಾಂಸ್ಕೃತಿಕ ಪ್ರಪಂಚ ಹಾಗೂ ಕುಟುಂಬವನ್ನೂ ಅತ್ಯುತ್ತಮವಾಗಿ ನಿಭಾಯಿಸುತ್ತಲೇ ನಾಡಿನಾದ್ಯಂತ ಹೆಸರು ಮಾಡಿರುವುದು ಇವರ ವೈಶಿಷ್ಟ್ಯವೇ ಸರಿ.
ತಾಯಿಯಾಗುವುದೆಂದರೆ…..
ತಾಯಿಯಾಗುವ ಪರಿಕಲ್ಪನೆಗೆ ಒಂದು ನಿರ್ದಿಷ್ಟ ವ್ಯಾಖ್ಯಾನ ಇದೆಯೇ ಇದಕ್ಕೆ ಉತ್ತರವೇ ಈ #OneManPlay ಏಕ ವ್ಯಕ್ತಿ ರಂಗ ಪ್ರಯೋಗ. ತಮ್ಮ ಜೀವನದಲ್ಲಿನ ನೈಜ ಘಟನೆಗಳನ್ನು ಆಧರಿಸಿ ಬರೆದ ಲೇಖನ ಅಮ್ಮ ಎಂದರೆ ಅದನ್ನು ನಾಡಿನ ಖ್ಯಾತ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದಲ್ಲಿ ತಾಯಿಯಾಗುವುದೆಂದರೆ.. ಎಂಬ ವಿಶಿಷ್ಟ ಏಕವ್ಯಕ್ತಿ ರಂಗ ಪ್ರಯೋಗವನ್ನು ಮಾಡಿ ಖ್ಯಾತನಾಮರಾಗಿದ್ದಾರೆ. ಈಗಾಗಲೇ ಇದು ರಾಜ್ಯಾದ್ಯಂತ 25ಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡಿದೆ.
ಕಾನೂನಾತ್ಮಕವಾಗಿ ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆ ಕುರಿತ ಈ ಪ್ರಯೋಗ ಅನೇಕರಿಗೆ ಸ್ಪೂರ್ತಿಯಾಗಿ ಮಕ್ಕಳಿಲ್ಲದ ದಂಪತಿಗಳು ಮಕ್ಕಳನ್ನು ದತ್ತು ಪಡೆದಿದ್ದಾರೆ ಎಂಬುದು ಈ ಏಕವ್ಯಕ್ತಿಯ ಫಲಶ್ರುತಿಗಳಲ್ಲೊಂದಾಗಿದೆ. ಈ ರಂಗ ಪ್ರಯೋಗ ರಾಜ್ಯದ ಹಿರಿಯ ರಂಗ ಕರ್ಮಿಗಳು, ಕಲಾವಿದರು, ಅನೇಕ ಕಲಾಭಿಮಾನಿಗಳಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ. ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ ಹರಿಯ ಕರುಣದಲ್ಲಾದ ಭಾಗ್ಯವ ಹರಿಸಮರ್ಪಣೆ ಮಾಡಿ ಬದುಕಿರೋ… ಎಂಬ ದಾಸ ಶ್ರೇಷ್ಠ ಪುರಂದರದಾಸರ ಕೀರ್ತನೆಯ ಸಾಲುಗಳಂತೆ ಸಮಾಜದಿಂದ ಬಂದ ಹಣವನ್ನು ಸಮಾಜದ ಸದ್ವಿನಿಯೋಗಕ್ಕೆ ನೀಡುವ ಸಂಕಲ್ಪ ಮಾಡಿದ ಪೂಜಾರವರು ಕ್ಯಾನ್ಸರ್ ರೋಗಿಗಳಿಗೆ ಸಹಾಯಧನ, ಶಾಲೆಯ ನವೀಕರಣಕ್ಕೆ ಧನ ಸಹಾಯ ಸೇರಿದಂತೆ ಹತ್ತು ಹಲವು ಜನಪರ ಕಾರ್ಯಕ್ಕೆ ನೀಡುತ್ತಿರುವುದು ಅವರ ಸಾಮಾಜಿಕ ಕಳ ಕಳಿಯನ್ನು ತೋರಿಸುತ್ತದೆ.
ಹಿಂದೊಮ್ಮೆ ಶಿವಮೊಗ್ಗದಲ್ಲಿ ನಡೆದ ಈ ರಂಗ ಪ್ರಯೋಗ ಮತ್ತೆ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ವಸುಧಾ ವೈಶಾಲಿ ಜನ್ಮದಿನೋತ್ಸವ ಸಮಿತಿಯಿಂದ ಆಯೋಜನೆ ಗೊಂಡಿದ್ದು ಬರುವ ಭಾನುವಾರ ಸಂಜೆ 5ಕ್ಕೆ ಕರ್ನಾಟಕ ಸಂಘದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ವಿಜೇತರಾದ ಶ್ರೀಮತಿ ಪೂಜಾ ರಘುನಂದನ್ ಅವರಿಗೆ ಗೌರವ ಸನ್ಮಾನ ಹಾಗೂ ನಂತರ ಏಕವ್ಯಕ್ತಿ ರಂಗ ಪ್ರಯೋಗ ತಾಯಿಯಾಗುವುದೆಂದರೆ… ಪ್ರದರ್ಶನಗೊಳ್ಳಲಿದೆ.
ಸುಮಾರು ನಾಲ್ಕು ದಶಕಗಳಿಂದಲೂ ತಮ್ಮ ಮಕ್ಕಳ ಜನ್ಮದಿನವನ್ನು ಕಲಾ ಸನ್ಮಾನದೊಂದಿಗೆ ಕಲೋತ್ಸವವಾಗಿ ಆಚರಿಸುತ್ತಾ ಬಂದಿರುವ ಡಾ. ವಿಘ್ನೇಶ್ ಎನ್. ಭಟ್ ಹಾಗೂ ಡಾ. ಸುಮಿತ್ರಾ.ವಿ ಭಟ್ ಅವರೂ ಸಹ ಆದರ್ಶಪ್ರಾಯರೇ. ಅವರ ಕುಟುಂಬವು ಸಹ ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಹಿಂತಿರುಗಿಸುವಂತದ್ದೇ ಆಗಿದೆ. ತಮ್ಮ ಮಕ್ಕಳ ಹುಟ್ಟು ಹಬ್ಬದ ನಿಮಿತ್ತ ರಥಸಪ್ತಮಿಯ ಪರ್ವ ಕಾಲದಲ್ಲಿ ಸಾಹಿತ್ಯ ಸಂಗೀತ ನೃತ್ಯ ಯಕ್ಷಗಾನ ರಂಗಗಳ ಹಿರಿಯ ಹಾಗೂ ಹಲವು ಯುವ ಪ್ರತಿಭೆಗಳನ್ನು ಆಮಂತ್ರಿಸಿ ಅವರ ವಿದ್ಯೆಗೆ ತಲೆಬಾಗಿ ಅವರನ್ನು ಸನ್ಮಾನ ನಿಧಿ ಸಹಿತ ಗೌರವಿಸಿ ಸತ್ಕರಿಸುವುದು ಹಾಗೂ ಬಂದಿರುವ ಪುಟಾಣಿಗಳಿಗೆ ಉಡುಗೊರೆ ನೀಡಿ ಮಿತ್ರ ಭೋಜನದೊಂದಿಗೆ ಸಂಭ್ರಮಿಸುವುದು.
ಮತ್ತೊಂದೆಡೆ ತಮ್ಮ ಮೊಮ್ಮಕ್ಕಳ ಜನ್ಮದಿನದ ಸಲುವಾಗಿ ಮಕ್ಕಳಿಗಾಗಿಯೇ ವಿಶೇಷ ಕಾರ್ಯಕ್ರಮ ಏರ್ಪಡಿಸಿ, ಸಾಮಾಜಿಕ ಅಭಿವೃದ್ಧಿಯ ದೆಸೆಯಲ್ಲಿ ಯುವ ತಂತ್ರಜ್ಞಾನಿಗಳು ಸಾಧಿಸಿದ ಹೊಸ ಆವಿಷ್ಕಾರಗಳಿಗಾಗಿ ಸ್ವರ್ಣ ಮತ್ತು ರಜತ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದಾರೆ.
ಸನಾತನ ಹಿಂದೂ ಸಮಾಜದ ಪರಿಕಲ್ಪನೆಯೇ ಹಾಗೇ. ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ನಿಟ್ಟಿನಲ್ಲಿ ತಂದೆ ತಾಯಿಯಾಗಿ, ಹಾಗೂ ಅಜ್ಜ-ಅಜ್ಜಿಯರಾಗಿ ಗುರುತರ ಕಾರ್ಯವನ್ನು ನಿರಂತರವಾಗಿ ಮಾಡುತ್ತಾ ಬಂದಿರುವುದು ನಿಜಕ್ಕೂ ಶ್ಲಾಘನೀಯ. ಈ ದಂಪತಿಗಳು ‘ವಸುದೈವ ಕುಟುಂಬಕಂ’ ಎಂಬ ಪರಿಕಲ್ಪನೆಯಲ್ಲಿ ತಮ್ಮ ಮನೆಗಷ್ಟೇ ಈ ಆಚರಣೆಯನ್ನು ಸೀಮಿತಗೊಳಿಸದೇ ಸಮಾಜಕ್ಕೆ ಸಂಸ್ಕಾರ ಸಂಸ್ಕೃತಿಯ ಸವಿ ಉಣ ಬಡಿಸುತ್ತಿದ್ದಾರೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗಿಯಾಗೋಣ. ಎಲ್ಲ ಕಾರ್ಯಕ್ರಮಗಳನ್ನು ಕಣ್ತುಂಬಿಸಿಕೊಳ್ಳೋಣ ಬನ್ನಿ ಭಾನುವಾರ ಸಂಜೆ ಸರಿಯಾಗಿ 5 ಗಂಟೆಗೇ ಬನ್ನಿ ಕರ್ನಾಟಕ ಸಂಘಕ್ಕೆ…..
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















