ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಇಲಾಖೆಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸರಿಗೆ ಪಿಸಿ ಹಾಗೂ ಹೆಚ್‍ಸಿರವರುಗಳಿಗೆ ನೂತನವಾದ ಪಿ-ಕ್ಯಾಪನ್ನು #P-Cap ಇಂದು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಕ್ಯಾಪ್ ಆಕರ್ಷಕವಾಗಿದ್ದು, ಪೊಲೀಸರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದೆ. ಹೊಸ ಭರವಸೆ ಮೂಡಿಸಿದೆ. ಪೊಲೀಸರಿಗೆ ಹೆಚ್ಚಿನ ಸ್ಫೂರ್ತಿ ಹಾಗೂ ಕಾರ್ಯತತ್ಪರತೆಯಿಂದ ಕೆಲಸ ಮಾಡುವಂತೆ ಪ್ರೇರಣೆ ದೊರೆತಿದೆ ಎಂದು ಅವರು ಹೇಳಿದರು.
ನಮ್ಮ ಸಿಬ್ಬಂದಿ ಯಾರಿಗೂ ಕಮ್ಮಿಯಿಲ್ಲ. ಕರ್ನಾಟಕ ಸರ್ಕಾರ ಈ ಪಿ-ಕ್ಯಾಪ್ ವಿತರಣೆಯ ಆದೇಶ ಹೊರಡಿಸಿ ಪೊಲೀಸರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಎಲ್ಲಾ ಸಿಬ್ಬಂದಿಗಳು ಇದನ್ನು ಕಡ್ಡಾಯವಾಗಿ ಧರಿಸಬೇಕು. ಮನೆಯಿಂದ ಕ್ಯಾಪ್‍ಧರಿಸಿ ಆಚೆ ಬರುವಾಗ ಮನೆಯವರು ಹಾಗೂ ಕುಟುಂಬಸ್ಥರು ಎಲ್ಲರೂ ಕೂಡ ನಿಮ್ಮ ಬಗ್ಗೆ ಹೆಮ್ಮೆಪಡುತ್ತಾರೆ. ಯಾರಿಗೆ ಕ್ಯಾಪ್ ಸಿಕ್ಕಿಲ್ಲವೋ ಅವರು ಕೂಡಲೇ ಪಡೆಯುವಂತೆ ಸೂಚಿಸಿದರು.
ಪೊಲೀಸರಿಗೆ ತಮ್ಮ ವಸ್ತ್ರಸಂಹಿತೆಯಿಂದ ಸಮಾಜದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ. ಅದಕ್ಕೆ ಕಿರೀಟವೆಂಬಂತೆ ಈಗ ನೂತನವಾಗಿ ರಾಜ್ಯ ಸರ್ಕಾರ ಪಿ-ಕ್ಯಾಪ್ ನೀಡಿದೆ. ಪೊಲೀಸರು ಇನ್ನೂ ಹೆಚ್ಚಿನ ಭರವಸೆಯೊಂದಿಗೆ ಕೆಲಸಮಾಡಿ ಎಂದು ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ಕಾರ್ಯಪ್ಪ, ರಮೇಶ್, ಡಿವೈಎಸ್ಪಿ ಅಂಜನಪ್ಪ ಹಾಗೂ ಸಂಜೀವ್‍ಕುಮಾರ್, ಜಿಲ್ಲೆಯ ಹಿರಿಯ ಮತ್ತು ಕಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















