ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿರಿಯ ವಿದ್ಯಾರ್ಥಿಗಳು ಮಾಡಿರುವ ಸಾಧನೆ ಕಿರಿಯ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು ಎಂದು ಪಿಇಎಸ್ ಟ್ರಸ್ಟ್ ಕುಲಸಚಿವ ಡಾ.ಆರ್. ನಾಗರಾಜ್ ಅವರು ಕರೆ ನೀಡಿದರು.
ಪಿಇಎಸ್‌ಐಎಎಮ್‌ಎಸ್ ಪದವಿ ಕಾಲೇಜಿನಲ್ಲಿ #PESIAMS Degree College ಆಯೋಜಿಸಲಾಗಿದ್ದ ಹಳೆಯ ವಿದ್ಯಾರ್ಥಿಗಳ ಸಭೆಯಾದ ಸಮ್ಮಿಲನ- 2026ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಪ್ರಸ್ತುತ ಕಂಪನಿಯ ಸಿಇಒ, ಮ್ಯಾನೇಜರ್, ಅಡ್ವೋಕೇಟ್ ಮೊದಲಾದ ಹುದ್ದೆಗಳನ್ನು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಹಳೆಯ ವಿದ್ಯಾರ್ಥಿಗಳಾದ ನೀವು ಸಮಾಜ ಮತ್ತು ಸಂಸ್ಥೆಗಳ ನಡುವಿನ ಕೊಂಡಿಗಳಾಗಿ ಬೆಸೆಯುವ ಮೂಲಕ ಕೊಡುಗೆಗಳನ್ನು ನೀಡಬೇಕು ಎಂದು ಕರೆ ನೀಡಿದರು.
ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಆ ಸಂಸ್ಥೆಯ ಅಮೂಲ್ಯ ಆಸ್ತಿ ಇದ್ದಂತೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ನೀವು ನಿಮ್ಮ ಅನುಭವಗಳನ್ನು ಹಂಚಿಕೊಂಡಾಗ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ತಮ್ಮಿಂದ ಅವರು ಸ್ಫೂರ್ತಿ ಪಡೆಯುತ್ತಾರೆ ಎಂದರು.
ಹಾಗೆಯೇ ನೀವುಗಳು ನಿಮ್ಮ ಔದ್ಯೋಗಿಕ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಹಂಚಿಕೊಂಡಾಗ ಅವುಗಳನ್ನು ಎದುರಿಸಲು ನಿಮ್ಮ ಕಿರಿಯರು ಭವಿಷ್ಯದಲ್ಲಿ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಲ್ಲಿ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಹಳೆಯ ವಿದ್ಯಾರ್ಥಿಗಳಾಗಿ ಈ ಸಭೆಯಲ್ಲಿ ಪಾಲ್ಗೊಳ್ಳುವುದು ತಮಗೆ ಗೌರವದ ವಿಚಾರ ಹಾಗೂ ತಮ್ಮೆಲ್ಲರನ್ನು ಪುನಃ ಕಾಲೇಜಿನಲ್ಲಿ ಭೇಟಿ ಮಾಡುತ್ತಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದ ಅವರು, ಸಂಸ್ಥೆಯ ಮುಂದಿನ ಯೋಜನೆಗಳ ಕುರಿತು ಮಾಹಿತಿಯನ್ನು ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ. ಸುದರ್ಶನ್ ಮಾತನಾಡಿ, ಕಾಲೇಜು ಬೆಳೆದು ಬಂದ ಮೈಲಿಗಲ್ಲುಗಳನ್ನು ವಿವರಿಸಿದರು.
ಕಾಲೇಜಿನ ವಿವಿಧ ರಂಗಗಳಲ್ಲಿನ ಸಾಧನೆಯನ್ನು ಬಣ್ಣಿಸುತ್ತಾ ಹಿರಿಯ ವಿದ್ಯಾರ್ಥಿಗಳಾದ ನಿಮ್ಮ ಅನುಭವವು ಹೊಸ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಿ ಎಂದು ಶುಭ ಕೋರಿದರು.
ಹಿರಿಯ ವಿದ್ಯಾರ್ಥಿಗಳು ತಮ್ಮ ಅನುಭವ ಮತ್ತು ಸಾಧನೆಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಸಹ ಕಾರ್ಯದರ್ಶಿಗಳಾದ ಡಿ. ಪ್ರವೀಣ್, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಚಾಲಕರಾದ ಡಾ.ಎಸ್.ಡಿ. ದಿಲೀಪ್‌ಕುಮಾರ್, ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎಂ.ಡಿ. ಮೋಹನ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಿ.ಎಸ್. ರೂಪ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಆರ್. ಮಂಜುನಾಥ್, ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಯಶಸ್ವಿತ ಚವ್ಹಾನ್ ಅವರುಗಳು ಉಪಸ್ಥಿತರಿದ್ದರು.
ಹಳೆಯ ವಿದ್ಯಾರ್ಥಿ ಸಂಘದ ಸಂಚಾಲಕರಾದ ಎಸ್. ಅಭಿಷೇಕ್, ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ವರ್ಗದವರು, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಉಲ್ಲಾಸ್ ಪ್ರಾರ್ಥಿಸಿ, ಮೇಘ ಸ್ವಾಗತಿಸಿದರು. ಯೋಗೇಂದ್ರಸಿಂಗ್ ಅವರು ವಂದಿಸಿ, ರಾಯೀಸಾ ಬಾನು ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















