ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಟಿವಿ ನೋಡುತ್ತಾ ಊಟ ಮಾಡಬೇಡ ಎಂದು ತಾಯಿ ಬೈದಿದ್ದಕ್ಕೆ ಮನನೊಂದು ಅಪ್ರಾಪ್ತ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಬಾಲಕಿ ಸ್ಥಳೀಯ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ಮಧ್ಯಾಹ್ನದ ವೇಳೆ ಸುಪ್ರಿತಾ ಮನೆಯಲ್ಲಿ ಊಟ ಮಾಡುತ್ತಾ ಟಿವಿ ವೀಕ್ಷಿಸುತ್ತಿದ್ದಳು. ಈ ಸಂದರ್ಭ ಆಕಸ್ಮಿಕವಾಗಿ ಕೈಯಲ್ಲಿದ್ದ ತಟ್ಟೆ ಬಿದ್ದು ಅನ್ನವೆಲ್ಲಾ ಚೆಲ್ಲಿತ್ತು. ಇದನ್ನು ಗಮನಿಸಿದ ತಾಯಿ, ಯಾವಾಗಲೂ ಟಿವಿ ನೋಡುವುದೇ ಆಯಿತು. ಓದಿನ ಕಡೆ ಗಮನವಿಲ್ಲ. ಮೊದಲು ಚೆಲ್ಲಿರುವ ಅನ್ನವನ್ನು ಸ್ವಚ್ಛ ಮಾಡು ಎಂದು ಮಗಳಿಗೆ ಬುದ್ಧಿ ಹೇಳಿ ಕೆಲಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.
ತಾಯಿಯ ಮಾತಿನಿಂದ ತೀವ್ರವಾಗಿ ಮನನೊಂದ ಬಾಲಕಿ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿ ತನ್ನ ವೇಲಿನಿಂದ ಫ್ಯಾನ್’ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ.
ತಾಯಿ ಕೆಲಸ ಮುಗಿಸಿ ಮನೆಗೆ ಬಂದಾಗ ಮಗಳ ಸಾವಿನ ಸುದ್ದಿ ತಿಳಿದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















