ಕಲ್ಪ ಮೀಡಿಯಾ ಹೌಸ್ | ವಿಜಯಪುರ |
ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಫೆ.16ರ ಸೋಮವಾರದಂದು ಸಂತ ಶ್ರೀ ಸೇವಾಲಾಲ್ ಮಹಾರಾಜರ 287ನೇ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ರೈಲ್ವೆ ಇಲಾಖೆಯ ಬಂಜಾರ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವು ಸಾಂಸ್ಕೃತಿಕ ರಂಗು ಮತ್ತು ಭಕ್ತಿಭಾವದಿಂದ ಕೂಡಿತ್ತು.
ಕೆಸರಟ್ಟಿ ಶ್ರೀ ಸೋಮಲಿಂಗ ಮಹಾರಾಜ್ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು.
ಬೆಳಿಗ್ಗೆ ರೈಲ್ವೆ ನಿಲ್ದಾಣದಿಂದ ಪ್ರಾರಂಭವಾದ ಭವ್ಯಮೆರವಣಿಗೆ ಪೊಲೀಸ್ ಸ್ಟೇಷನ್ ಹತ್ತಿರವಿರುವ ರೈಲ್ವೆ ಬ್ರಿಡ್ಜ್’ವರೆಗೆ ಸಾಗಿತು. ಈ ವೇಳೆ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದ ರೈಲ್ವೆ ಇಲಾಖೆಯ ಬಂಜಾರ ಸಮುದಾಯದ ಮಕ್ಕಳು ಮತ್ತು ಮಹಿಳೆಯರು, ನೃತ್ಯ ಮೇಳದೊಂದಿಗೆ ಸಾಗಿದ್ದು ಮೆರವಣಿಗೆಗೆ ವಿಶೇಷ ಕಳೆ ತಂದಿತು.
ಮೆರವಣಿಗೆಯ ಮುಕ್ತಾಯದ ನಂತರ, ಸ್ವಾಮೀಜಿಗಳ ನೇತೃತ್ವದಲ್ಲಿ ಸಾಂಪ್ರದಾಯಿಕ `ಭೋಗ್’ ವಿಧಿವಿಧಾನಗಳನ್ನು ಅತ್ಯಂತ ಭಕ್ತಿಭಾವದಿಂದ ಮತ್ತು ಯಶಸ್ವಿಯಾಗಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ಸೋಮಲಿಂಗ ಮಹಾರಾಜರು, ಸಂತ ಸೇವಾಲಾಲ್ ಅವರು ವಿಶ್ವಕ್ಕೆ ಸಾರಿದ ಉದಾತ್ತ ನುಡಿ ಹಾಗೂ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಹಾಕಿಕೊಟ್ಟ ಸನ್ಮಾರ್ಗದ ಹಾದಿಯಲ್ಲೇ ಎಲ್ಲರೂ ಸಾಗಬೇಕು ಎಂದು ಕರೆ ನೀಡಿದರು.
`ಕೈ ಕೆಸರಾದರೆ ಬಾಯಿ ಮೊಸರು’ ಎಂಬ ಗಾದೆಯಂತೆ ಪ್ರತಿಯೊಬ್ಬರೂ ಕಠಿಣ ಪರಿಶ್ರಮದ ಮೂಲಕ ಸ್ವಾವಲಂಬಿ ಬದುಕು ನಡೆಸುವ ಗುಣ ಬೆಳೆಸಿಕೊಳ್ಳಬೇಕು. ಜಾತಿ-ಮತಗಳ ಭೇದವಿಲ್ಲದೆ ಸೌಹಾರ್ದತೆ ಹಾಗೂ ಸಾಮರಸ್ಯದಿಂದ ಬಾಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ, ಎಂದು ತಿಳಿಸಿದರು.
ನಿವೃತ್ತ ನಿಲ್ದಾಣ ವ್ಯವಸ್ಥಾಪಕ ಪಿ.ಟಿ. ನಾಯಕ್ ಮಾತನಾಡಿ, ರೈಲ್ವೆ ಕುಟುಂಬದವರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಾ ನೆಮ್ಮದಿಯ ಜೀವನ ನಡೆಸಲಿ ಎಂದು ಹಾರೈಸಿದರು.
ಟ್ರೈನ್ ಮ್ಯಾನೇಜರ್ ಪರಶುರಾಮ್ ಚವ್ಹಾಣ ಅವರು ಸೇವಾಲಾಲ್ ಅವರ ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ವಿವರಿಸಿದರು. ಪ್ರಸ್ತುತ ನಿಲ್ದಾಣ ವ್ಯವಸ್ಥಾಪಕರಾದ ಎಂ.ವೈ. ಪಾಟೀಲ್ ಅವರು ಸಿಬ್ಬಂದಿಗಳಿಗೆ ಶುಭ ಕೋರಿದರು.
ರೈಲ್ವೆ ಬಂಜಾರ ಸಮಾಜದ ಕುಟುಂಬದ ಹೆಮ್ಮೆಯ ಪ್ರತಿಭೆಗಳನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ಅನೇಸ್ತೇಷಿಯಾದಲ್ಲಿ ಎಂ.ಡಿ. ಪದವಿ ಸಾಧಿಸಿದ ಡಾ. ಕೃತಿಕಾ ನಾಯಕ್, ಡಿಪ್ಲೊಮಾ ಬಿಎಲ್’ಡಿನಲ್ಲಿ ಟಾಪರ್ ಆಗಿ ಹೊರಹೊಮ್ಮಿದ ಸೃಷ್ಟಿ ಜಾಧವ್, ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಪ್ರಣೀತಾ ಚವ್ಹಾಣ ಹಾಗೂ ಅಂಡರ್-19 ರಾಜ್ಯ ಮಟ್ಟದ ಕ್ರಿಕೆಟ್’ನಲ್ಲಿ ಸಾಧನೆ ತೋರಿದ ಶ್ರೇಯಾ ಚವ್ಹಾಣ ಅವರನ್ನು ವೇದಿಕೆಯ ಮೇಲೆ ಗೌರವಿಸಲಾಯಿತು. ಈ ಸಾಧಕ ವಿದ್ಯಾರ್ಥಿಗಳೊಂದಿಗೆ ಅವರ ಪೋಷಕರನ್ನೂ ಸಹ ಸನ್ಮಾನಿಸುವ ಮೂಲಕ, ಇಂದಿನ ತಲೆಮಾರಿನ ಮಕ್ಕಳಿಗೆ ಉನ್ನತ ಸಾಧನೆ ಮಾಡಲು ವಿಶೇಷ ಪ್ರೇರಣೆ ನೀಡಲಾಯಿತು.
ಮಹಾಪ್ರಸಾದದ ನಂತರ ಮಕ್ಕಳಿಗಾಗಿ ಮತ್ತು ಕುಟುಂಬದವರಿಗಾಗಿ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕುರ್ಚಿಯಾಟ, ಬಲೂನ್ ಆಟ ಮತ್ತು ಜೋಡಿ ಆಟಗಳಲ್ಲಿ ಮಕ್ಕಳು ಹಾಗೂ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ಬಹುಮಾನಗಳನ್ನು ಗೆದ್ದುಕೊಂಡರು.
ರೈಲ್ವೆ ಬಳಗದ ಅಧ್ಯಕ್ಷ ರಾಜ್ ಕುಮಾರ್ ಜಾಧವ್, ಅತಿಥಿಗಳಾದ ವಿ.ಜಿ. ಚವ್ಹಾಣ, ಸಂತೋಷ್ ನಾಯಕ್, ಕೆ.ಎಲ್. ಚಂದ್ರಶೇಖರ್, ಕೆ.ಜಿ. ರಾಠೋಡ್, ಸಂತೋಷ್ ಚವ್ಹಾಣ ಹಾಗೂ ರೈಲ್ವೆ ಇಲಾಖೆಯ ಎಲ್ಲಾ ಸಹೋದ್ಯೋಗಿಗಳು ಕುಟುಂಬ ಸಮೇತ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















