ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧವಾದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ #Shri Marikamba Fair ಇಂದು ಆರಂಭವಾಯಿತು. ತವರು ಮನೆ ಎಂದೇ ಪ್ರಖ್ಯಾತಿ ಪಡೆದ ಗಾಂಧಿಬಜಾರಿನ ನಾಡಿಗರ ಮನೆಯವರು ದೇವಿಯನ್ನು ವಿಶೇಷವಾಗಿ ಪೂಜೆ ಮಾಡುವುದರೊಂದಿಗೆ ಚಾಲನೆ ನೀಡಲಾಯಿತು.
ಬೆಳಿಗ್ಗೆ 7 ಗಂಟೆಯಿಂದಲೇ ತವರು ಮನೆ ಗಾಂಧಿಬಜಾರಿನಲ್ಲಿ ಶ್ರೀ ಅಮ್ಮನವರಿಗೆ ಮಡಿಲಕ್ಕಿ ಅರ್ಪಣೆ ಮತ್ತು ಪೂಜೆ ಆರಂಭಗೊಂಡಿದ್ದು, ಬೆಳಗ್ಗೆ 5 ಗಂಟೆಗೆ ಸಮಿತಿ ವತಿಯಿಂದ ಮಂಗಳವಾದ್ಯದೊಂದಿಗೆ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಯಿತು. ಆ ಸಮಾಜದ ಮುತ್ತೈದೆಯರು ಮಂಗಳ ದ್ರವ್ಯಾದಿಗಳೊಂದಿಗೆ ಮೆರವಣಿಗೆಯಲ್ಲಿ ಬಾಸಿಂಗದೊಂದಿಗೆ ಗಾಂಧಿ ಬಜಾರ್’ನ ತವರುಮನೆಯಲ್ಲಿರುವ ಶ್ರೀ ಮಾರಿಕಾಂಬೆಗೆ ಉಡಿ ತುಂಬಿ ಪೂಜೆ ಸಲ್ಲಿಸುತ್ತಾರೆ. ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದವರು ವಿಸರ್ಜನಾ ಮೂರ್ತಿಗೆ ಮಾಂಗಲ್ಯ ಧಾರಣೆ ಮಾಡಿ ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸಿದರು.
ಬೆಳಗ್ಗೆಯೇ ಬಿಸಿಲು ಸ್ವಲ್ಪ ಕಡಿಮೆ ಇದ್ದುದು ಭಕ್ತರಿಗೆ ಅನೂಕೂಲವಾಯಿತು. ಜೊತೆಗೆ ಜರ್ಮನ್ ಟೆಂಟ್‍ಗಳನ್ನು ಹಾಕಲಾಗಿತ್ತು. ಭಕ್ತರಿಗೆ ಅಲ್ಲಲ್ಲಿ ಮಜ್ಜಿಗೆ, ಪಾನಕದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸುಮಾರು 5-6 ಗಂಟೆಗಳ ಕಾಲ ಸರದಿ ಸಾಲಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆದರು.
ಇಂದು ರಾತ್ರಿ 9 ಗಂಟೆಯವರೆಗೂ ಗಾಂಧಿಬಜಾರ್‌ನಲ್ಲಿ ದರ್ಶನ ವ್ಯವಸ್ಥೆ ಇರಲಿದ್ದು, ನಂತರ ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ ಮೆರವಣಿಗೆಯನ್ನು ಉಪ್ಪಾರ ಸಮಾಜದವರು ಮಾಡಲಿದ್ದಾರೆ. ಗಂಗಾಮತ ಸಮಾಜದವರು ಅಮ್ಮನವರಿಗೆ ಪೂಜೆ ಸಲ್ಲಿಸುವರು. ನಾಳೆ ಬೆಳಗ್ಗೆ ಸುಮಾರು 4 ಗಂಟೆಯ ವೇಳೆಗೆ ಹರಿಜನ ಸಮಾಜದವರು ಬೇವಿನುಡುಗೆಯೊಂದಿಗೆ ಆಗಮಿಸಿ ಮಾರಿಕಾಂಬೆಗೆ ಪೂಜೆ ಸಲ್ಲಿಸಿದ ನಂತರ ಅಮ್ಮನವರನ್ನು ಗದ್ದುಗೆಗೆ ಕೂರಿಸುವರು. ಅಲ್ಲಿ ನಾಳೆಯಿಂದ ಫೆ. 28ರವರೆಗೆ ಪ್ರತಿದಿನ ಹರಕೆ, ಪೂಜೆ ಪ್ರಸಾದ ಇರುತ್ತದೆ.
ಹಬ್ಬದ ಹಿನ್ನೆಲೆಯಲ್ಲಿ ಇಡೀ ನಗರ ಅಲಂಕಾರದಿಂದ ಕಂಗೊಳಿಸುತ್ತಿದೆ. ಮಾರಿಕಾಂಬ ದೇವಸ್ಥಾನದಲ್ಲೂ ಕೂಡ ಶ್ರೀಕಾಂತ್ ಅವರ ಕೊಡುಗೆಯಿಂದಾಗಿ ಹೂವು ಹಣ್ಣಿನ ಅಲಂಕಾರ ಮಾಡಲಾಗಿದ್ದು ಭಕ್ತರ ಕಣ್ಮನ ಸೆಳೆಯುತ್ತಿದೆ. ಈ ಬಾರಿ ಜಾತ್ರೆಯ ಸುತ್ತಮುತ್ತಲ ಪ್ರದೇಶದಲ್ಲಿ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿಲ್ಲ. ದೇವಾಲಯದ ಅನತಿ ದೂರದಲ್ಲಿ ಅಂಗಡಿ ಮುಂಗಟ್ಟುಗಳು ತಲೆ ಎತ್ತಿವೆ. ಈ ಅಂಗಡಿಗಳ ಮುಂದೆ ವ್ಯಾಪಾರ ಜೋರಾಗಿದ್ದುದು ಕಂಡು ಬಂದಿತು. ಹೂವು ಹಣ್ಣು ಕಾಯಿ ವ್ಯಾಪಾರ ಕೂಡ ಹೆಚ್ಚಾಗಿದೆ.
ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಜನದಟ್ಟಣೆ ತಡೆಯುವ ನಿಟ್ಟಿನಲ್ಲಿ ಸಂಚಾರ ಮಾರ್ಗವನ್ನು ಕೂಡ ಬದಲಾಯಿಸಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡ ಅಲ್ಲಲ್ಲಿ ಮಾಡಲಾಗಿದೆ. ಕಳ್ಳತನವಾಗುವ ನಿರೀಕ್ಷೆ ಇರುವುದರಿಂದ ಬಹುತೇಕ ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜೊತೆಗೆ 8 ಪೊಲೀಸ್ ಟವರ್ ಗಳನ್ನು ಕೂಡ ನಿರ್ಮಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
