ಕಲ್ಪ ಮೀಡಿಯಾ ಹೌಸ್ | ಸೊರಬ |
ಅಪೂರ್ವ ಶಾಸನವೊಂದನ್ನು ಚಂದ್ರಗುತ್ತಿಯಲ್ಲಿ ಪತ್ತೆ ಹಚ್ಚಲಾಗಿದೆ. ಇಲ್ಲಿನ ಯಶವಂತಪ್ಪ ಮಾಸ್ಟರ್ ಶಾಸನ ಪತ್ತೆ ಹಚ್ಚಿದ್ದು ಶಾಸನ ಲಿಪಿಯನ್ನು ಓದಲಾಗಿದೆ.
ಚಂದ್ರಗುತ್ತಿ ಭಾಗದಲ್ಲಿ ಇಲ್ಲಿಯವರೆಗೂ ಪೂರ್ಣಪ್ರಮಾಣದ ಯಾವುದೇ ಶಾಸನಗಳು ಲಭ್ಯವಾಗಿರಲಿಲ್ಲ. ಬೆಟ್ಟದ ಉತ್ತರ ಭಾಗದಲ್ಲಿ ಪತ್ತೆಯಾಗಿರುವ ಶಾಸನವನ್ನು ವೀರಗಲ್ಲು ಎಂದು ಗುರುತಿಸಲಾಗಿದ್ದು ಸಂಶೋಧಕರಾದ ರಮೇಶ್ ಹಿರೇಜಂಬೂರು, ಮಂಜಪ್ಪ ಚುರ್ಚುಗುಂಡಿ ಲಿಪಿ ಅಧ್ಯಯನ ನಡೆಸಿ ವಿಜಯನಗರ ಅರಸರ ಆರಂಭಕಾಲದ ವೀರಗಲ್ಲಿದು ಎಂದಿದ್ದಾರೆ.

ಚಂದ್ರಗುತ್ತಿ ಪೂರ್ವದಲ್ಲಿ ಪ್ರಮುಖ ತಾಂತ್ರಿಕ ಕೇಂದ್ರ, ಇಲ್ಲಿ ನಾಥ ಪಂಥದ ಮಠವೂ ಇದೆ. ಪ್ರಸ್ತುತ ಈ ಶಾಸನದಲ್ಲಿ ದೊರೆತಿರುವ ಪದುಮಲದೇವಿ, ಅಂಕೋಲೆ ಉಲ್ಲೇಖ ಧಾರ್ಮಿಕ ಮತ್ತು ರಾಜಕೀಯ ಹರವಿನ ಕುತೂಹಲಕಾರಿ ಅಂಶವಾಗಿದ್ದು ಇನ್ನಷ್ಟು ಹೆಚ್ಚಿನ ಶೋಧಕಾರ್ಯ ಇಲ್ಲಿ ನಡೆಯಬೇಕಿದೆ.
-ಶ್ರೀಪಾದ ಬಿಚ್ಚುಗತ್ತಿ, ಇತಿಹಾಸ ಸಂಶೋಧಕ
ಈ ವೀರಗಲ್ಲು 195 ಸೆಂ ಮೀ ಎತ್ತರವಿದ್ದು 68 ಸೆಂ ಮೀ ಅಗಲವಾಗಿದೆ. ಇದರಲ್ಲಿ ಐದು ಪಟ್ಟಿಕೆಗಳಲ್ಲಿ ಹೋರಾಟ ಮತ್ತು ಮಡಿದ ವೀರನನ್ನು ಸುರಾಂಗನೆಯರು ಸ್ವರ್ಗಕ್ಕೆ ಕರೆದೊಯ್ಯುವ ಮೆರವಣಿಗೆ ಚಿತ್ರಗಳನ್ನು ಕೆತ್ತಲಾಗಿದೆ. ಇದರಲ್ಲಿ ಹತ್ತು ಸಾಲಿನ ಬರಹವುಳ್ಳ ಶಾಸನ ಅಲ್ಲಲ್ಲಿ ತೃಟಿತಗೊಂಡಿದ್ದು ಸರಿಸುಮಾರು ಕ್ರಿ.ಶ. 1350ರ ಅವಧಿಯದ್ದಾಗಿದೆ.
ಶಾಸನ ಸಾರಾಂಶ: ವಿಜಯನಗರದ ಅರಸ ವೀರ ಹರಿಯಪ್ಪ ಒಡೆಯರ ಅವಧಿಯದಲ್ಲಿ ಗುತ್ತಿಯನ್ನು ಮಾರಪ್ಪನು ಆಡಳಿತ ನೋಡಿಕೊಳ್ಳುತ್ತಿದ್ದ. ಈ ಸಂದರ್ಭದಲ್ಲಿ ಆರಗದ ಅರಸರು ದಂಡೆತ್ತಿ ಬಂದಿದ್ದು ಆಗ ವೀರ ಮರಣ ಹೊಂದಿದ ಸಂಡದ ಹಾಲಪ್ಪ ಕುರಿತು ಇರಿಸಿದ ವೀರಗಲ್ಲು ಇದಾಗಿದೆ. ಶಾಸನದಲ್ಲಿ ಅಂಕೋಲೆಯ ಉಲ್ಲೇಖವು ಗುತ್ತಿನಾಡಿನ ರಾಜಕೀಯ ವ್ಯಾಪ್ತಿ ಮತ್ತು ಆಡಳಿತಾತ್ಮಕ ಸಂಬಂಧದ ವ್ಯಾಪ್ತಿಯನ್ನು ಸೂಚಿಸುತ್ತದೆ. ವಿಶೇಷವಾಗಿ ಇಲ್ಲಿ ಉಲ್ಲೇಖವಿರುವ ಪದುಮಲದೇವಿಯ ಗುತ್ತಿ ರಾಜ್ಯದ ಉಲ್ಲೇಖವು ವಿಶೇಷವಾಗಿದ್ದು ಇನ್ನಷ್ಟು ಕುತೂಹಲಕಾರಿ ಐತಿಹಾಸಿಕ ಅಂಶಗಳನ್ನು ಅಧ್ಯಯನದಿಂದ ಬೆಳಕಿಗೆ ತರಬಹುದಾಗಿದೆ.
ಶಾಸನಧ್ಯಯನದ ವೇಳೆ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ, ಯಶವಂತಪ್ಪ ಮಾಸ್ತರ್, ಗ್ರಾಮದ ಪತ್ರಕರ್ತ ಪುರುಷೋತ್ತಮ, ರವಿ ಇದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















