ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ವತಿಯಿಂದ ಜೆ.ಎನ್.ಎನ್.ಸಿ.ಇ ಕಾಲೇಜಿನ ಆವರಣದಲ್ಲಿ, ವಿವಿಧ ವಿದ್ಯಾಸಂಸ್ಥೆಗಳ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಶನಿವಾರ ಏರ್ಪಡಿಸಿದ್ದ ‘ಎನ್ಇಎಸ್ ಉದ್ಯೋಗ ಮೇಳ’ ಸಂಪನ್ನಗೊಂಡಿದ್ದು, 418 ವಿದ್ಯಾರ್ಥಿಗಳು ನೇಮಕಾತಿ ಪತ್ರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಟಾಟಾ ಎಲೆಕ್ಟ್ರಿಕಲ್, ವೆಕ್ಸಿಲಾನ್ ಟೆಕ್ನಾಲಜಿಸ್, ಗ್ರೀಟ್ ಟೆಕ್ನಾಲಜೀಸ್, ಹ್ಯುಂಡೈ, ಆ್ಯಕ್ಸಿಸ್ ಬ್ಯಾಂಕ್, ಶ್ರೀರಾಮ್ ಫೈನಾನ್ಸ್, ಲೆನ್ಸ್ ಕಾರ್ಟ್ ಸೇರಿದಂತೆ 31 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದ ಉದ್ಯೋಗ ಮೇಳದಲ್ಲಿ, ಎನ್ಇಎಸ್ ಸಂಸ್ಥೆಯ ವಿವಿಧ ಪದವಿ ಕಾಲೇಜುಗಳ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಸಿ ಪದವಿಗಳ, ಸುಮಾರು 900 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸುಕದಿ ಪಾಲ್ಗೊಂಡಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಎನ್ಇಎಸ್ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ, ಆತ್ಮವಿಶ್ವಾಸ ಎಂಬುದು ಬದುಕಿನ ಪ್ರತಿ ಹಂತದ ಅದ್ಭುತ ಶಕ್ತಿಯಾಗಿದ್ದು, ಸಂದರ್ಶನವನ್ನು ಜ್ಞಾನದ ಜೊತೆಗೆ ವಿಶ್ವಾಸದಿ ಎದುರಿಸಿ ಎಂದು ಹೇಳಿದರು.
ಎನ್ಇಎಸ್ ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್ ಮಾತನಾಡಿ, ಉದ್ಯೋಗ ಪಡೆಯುವ ತಯಾರಿಯ ಜೊತೆಗೆ ದೀರ್ಘಕಾಲಿಕ ವೃತ್ತಿ ಜೀವನ ನಿರ್ಮಾಣದತ್ತ ಕೇಂದ್ರಿಕರಿಸಿ. ಆವಿಷ್ಕಾರಿ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಎನ್‌ಎನ್‌ಸಿಇ ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ. ವಿಜಯಕುಮಾರ್, ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಿವಪ್ರಸಾದ್, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ವಿಶೇಷಾಧಿಕಾರಿ ಡಾ.ಆರ್.ಎಂ.ಜಗದೀಶ್, ಎಸ್.ಆರ್.ನಾಗಪ್ಪಶೆಟ್ಟಿ ಅನ್ವಯಿಕ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಲ್.ಅರವಿಂದ, ಕಮಲಾ ನೆಹರು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮಮತಾ, ಶರಾವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಆರಡಿ ಮಲ್ಲಯ್ಯ, ತರಬೇತಿ ಮತ್ತು ನಿಯೋಜನೆ ಕೇಂದ್ರ ನಿರ್ದೇಶಕರಾದ ತೇಜಸ್ವಿ ಕಟ್ಟಿಮನಿ, ಪ್ಲೇಸ್ಮೆಂಟ್ ಅಧಿಕಾರಿ ಬಿ.ಸುರೇಶ್, ಸಂಯೋಜಕ ಶರತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















