ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಪ್ರತಿ ದಿನ ಯೋಗ ಅಭ್ಯಾಸ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ ಹೇಳಿದರು.
ಶಿವಗಂಗಾ ಯೋಗಕೇಂದ್ರದ 38 ಯೋಗ ಶಾಖೆಗಳ ಶಿಕ್ಷಕರಿಗೆ ಆಯೋಜಿಸಿದ್ದ ಮಾಸಿಕ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಒತ್ತಡದ ಬದುಕಿನಿಂದ ಮುಕ್ತರಾಗಲು ಯೋಗಾಭ್ಯಾಸವು ಅತ್ಯಂತ ಮುಖ್ಯ. ಗುರುಗಳ ಮಾರ್ಗದರ್ಶನದಿಂದ ಯೋಗವನ್ನು ಕಲಿಯಬೇಕು ಎಂದರು.
30 ವರ್ಷದಿಂದ ಸಾವಿರಾರು ಜನರಿಗೆ ಉಚಿತವಾಗಿ ಯೋಗ ಅಭ್ಯಾಸ ಕಲಿಸುವ ಮೂಲಕ ಜನರ ಆರೋಗ್ಯ ಕಾಪಾಡುತ್ತಿರುವ ಶಿವಗಂಗಾ ಯೋಗಕೇಂದ್ರದ ಕಾರ್ಯ ಶ್ಲಾಘನೀಯ. ಬೃಹತ್ ಸಂಸ್ಥೆಯಾಗಿ ಬೆಳೆದಿದ್ದು, ಇದನ್ನು ಮುನ್ನಡೆಸಿಕೊಂಡು ಹೋಗಬೇಕಿರುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಡಾ. ಗಾಯತ್ರಿ ಸಜ್ಜನ್ ಮಾತನಾಡಿ, ದಿನನಿತ್ಯದ ಬದುಕಿನಲ್ಲಿ ನಾವು ಎದುರಿಸುತ್ತಿರುವ ಆತಂಕ, ಭಯ, ಒತ್ತಡ ಹಾಗೂ ಮಾನಸಿಕ ಸಮಸ್ಯೆಗಳಿಂದ ದೂರವಾಗಲು ಭಕ್ತಿಯೋಗ ತುಂಬಾ ಸಹಕಾರಿಯಾಗಿದೆ ಎಂದು ಹೇಳಿದರು.
ಎಂಎಲ್‌ಸಿ ಡಾ. ಧನಂಜಯ ಸರ್ಜಿ ಮಾತನಾಡಿ, ಒತ್ತಡದ ಬದುಕಿನಲ್ಲಿ ನಿದ್ರಾಹೀನತೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆಳವಾದ ಉಸಿರಾಟ, ಗಾಢ ನಿದ್ರೆ ಮನುಷ್ಯನಿಗೆ ತೀರಾ ಅಗತ್ಯ. ಯಾಂತ್ರಿಕ ಬದುಕಿನಲ್ಲಿ ಸಿಲುಕಿರುವ ಕುಟುಂಬಗಳು ಯೋಗಾಭ್ಯಾಸದಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರಯ್ಯ, ಸಂಸ್ಥೆಯ ಪೋಷಕರಾದ ಮೋಹನ್‌ಕುಮಾರ್ ಬಾಳೆಕಾಯಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಹೂವೇಗೌಡ, ಶಿವಗಂಗಾ ಯೋಗಕೇಂದ್ರದ ನಿಕಟಪೂರ್ವ ಕಾರ್ಯದರ್ಶಿ ಎಸ್.ಎಸ್.ಜ್ಯೋತಿಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















