ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುರಾರ್ಜಿ ಮತ್ತು ಸರ್ವೋದಯ ವಸತಿ ಶಾಲೆಗಳ ಮಾದರಿಯಲ್ಲಿ ಕಟ್ಟಡ ಮತ್ತು ಕಾಮಗಾರಿ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಪ್ರತ್ಯೇಕ ವಸತಿ ಶಾಲೆಗಳನ್ನು ರಾಜ್ಯದ ಪ್ರತಿ ಜಿಲ್ಲೆಗೊಂದು ಆರಂಭಿಸಬೇಕೆಂದು ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಒತ್ತಾಯಿಸಿದೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥಾಪಕ ರಾಜ್ಯಾಧ್ಯಕ್ಷ ಕುಪೇಂದ್ರ ಆಯನೂರು ಮಾತನಾಡಿ, ಕಟ್ಟಡ ಕಾರ್ಮಿಕರ ಸೆಸ್ಸನ್ನು ರಾಜ್ಯಸರ್ಕಾರ ವಸೂಲಿ ಮಾಡುತ್ತಿದೆ. ಆದರೆ ಕಟ್ಟಡ ಮತ್ತು ಕಾಮಗಾರಿ ನಿರ್ಮಾಣ ಕಾರ್ಮಿಕರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಸಾಮಾಜಿಕ ಭದ್ರತಾ ಮಂಡಳಿ ಆಶ್ರಯದಲ್ಲಿ ರಾಜ್ಯದ ಪ್ರತಿ ಜಿಲ್ಲೆಗೂ ಕಾರ್ಮಿಕರು ಮಕ್ಕಳಿಗಾಗಿಯೇ ಪ್ರತ್ಯೇಕ ವಸತಿ ಶಾಲೆಗಳನ್ನು ತೆರೆಯಬೇಕೆಂದು ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ, ಕಾರ್ಮಿಕ ಸಚಿವರಾದ ಸಂತೋಷ್‍ಲಾಡ್ ಅವರಿಗೆ ಆಗ್ರಹಿಸಿದೆ.
ವಿವಿಧ ಕಡೆಯಿಂದ ಕೆಲಸಕ್ಕಾಗಿ ಬರುವ ಕಾರ್ಮಿಕರು ಬೇರೆ ಬೇರೆ ಕಡೆ ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದು, ಈ ಸಂದರ್ಭದಲ್ಲಿ ಗುಣಮಟ್ಟದ ಶಿಕ್ಷಣವಿಲ್ಲ, ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಮಿಕರ ಮಕ್ಕಳಿಗಾಗಿಯೇ ವಿಶೇಷ ಶಾಲೆಗಳನ್ನು ತೆರೆಯಬೇಕು ಹಾಗೂ ವಿಶೇಷ ಚೇತನದ ಮಕ್ಕಳಿಗಾಗಿ ಪ್ರತ್ಯೇಕವಾಗಿ ಖಾಸಗಿ ಶಾಲೆಗಳಲ್ಲಿ ಹಾಗೂ ಖಾಸಗಿ ಕಂಪನಿಗಳಲ್ಲಿ ಶೇ.5ರ ಮೀಸಲಾತಿ ನೀಡಬೇಕು. ಉದ್ಯೋಗ ನೀಡಲು ವಿಶೇಷ ಕಾನೂನು ರಚಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಸಮಾನವೇತನ ಮತ್ತು ಪಿಎಫ್ ಹಾಗೂ ಇಎಸ್‍ಐ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಲು ಸಂಘವು ಆಗ್ರಹಿಸುತ್ತದೆ. ಮತ್ತು ಸಿನಿಮಾ ಹಾಗೂ ಸಾಂಸ್ಕøತಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೆ ಹಾಗೂ ಡೆಲಿವರಿ ಬಾಯ್‍ಗಳಿಗೆ, ಗಿಗ್ ಕಾರ್ಮಿಕರಿಗೆ, ಗೃಹ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ, ಮೋಟಾರು ಸಾರಿಗೆಗೆ ಸಂಬಂಧಿಸಿದ ಸಾರಿಗೆ ವಿಭಾಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಈಗ ಕಾರ್ಮಿಕ ಇಲಾಖೆ ನೀಡುತ್ತಿರುವ ಸೌಲಭ್ಯಗಳು ಪರಿಣಾಮಕಾರಿಯಾಗಿಲ್ಲ. ಇವುಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಕಾರ್ಮಿಕ ಸಚಿವರು ಗಮನಹರಿಸಬೇಕು.
ಸರ್ಕಾರ ಗುರುತಿಸಿದ ಅಂಬೇಡ್ಕರ್ ಸಹಾಯ ಹಸ್ತ ಸಾಮಾಜಿಕ ಭದ್ರತಾ ಮಂಡಳಿಯಲ್ಲಿ ಬರುವ 100ಕ್ಕೂ ಹೆಚ್ಚು ವಲಯಗಳಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೆ ಪ್ರತ್ಯೇಕ ಮಂಡಳಿಯನ್ನು ರಚಿಸಿ ಆಸ್ತಿ ತೆರಿಗೆ ಮೇಲೆ ಲೇಬರ್ ಸೆಸ್ಸನ್ನು ಹಾಕಿ ಸಂಪನ್ಮೂಲ ಕ್ರೂಢೀಕರಿಸುವ ಕಾನೂನನ್ನು ಜಾರಿಗೆಗೊಳಿಸಬೇಕೆಂದು ಸರ್ಕಾರಕ್ಕೆ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘ ಒತ್ತಾಯಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಪ್ರದೀಪ್ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಇಂಧು ಬಿ.ಗೌಡ, ಉಪಾಧ್ಯಕ್ಷೆ ಸುರೇಖಾ ಪಾಲಾಕ್ಷಪ್ಪ, ಪ್ರಮುಖರಾದ ಮಮತಾರೆಡ್ಡಿ, ಚೇತನ್ ಲಕ್ಕಪ್ಪ, ಶಶಿಕುಮಾರ್, ಜಿಲ್ಲಾಧ್ಯಕ್ಷ ರಮೇಶ್ ಮಡಿವಾಳ, ಮಹಾನಗರ ಅಧ್ಯಕ್ಷರಾದ ವೈ. ಚಂದ್ರಶೇಖರ್, ವಿವಿಧ ವಿಭಾಗದ ಪ್ರಮುಖರಾದ ಪ್ರದೀಪ್ ಕವಡ್, ಅರುಣ್‍ಕುಮಾರ್, ಅಶ್ವಿನಿಗೌಡ, ಧರ್ಮರಾಜ್, ಪ್ರಕಾಶ್ ಚಾಮುಂಡಿಪುರ, ದೀಪಾರಮೇಶ್, ಮಂಜಣ್ಣ ಬೇಡರಹೊಸಹಳ್ಳಿ, ರುಕ್ಮಿಣಿ, ಶಕುಂತಲಾ, ಸುಧಾ, ರಾಘವೇಂದ್ರ ಕಲ್ಕೊಪ್ಪ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















