ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಶುವೈದ್ಯೆ ಡಾ. ಸಮೀಕ್ಷಾರೆಡ್ಡಿಯವರ ಸಾವಿನ ಪ್ರಕರಣವನ್ನು #Dr. Sameeksha Reddy’s death case ತನಿಖೆ ಮಾಡಿ, ತಪ್ಪಿತಸ್ಥರಿಗೆ ಕಠಿಣಶಿಕ್ಷೆ ನೀಡಬೇಕು ಎಂದು ಕರ್ನಾಟಕ ಪಶುವೈದ್ಯಕೀಯ ಸಂಘ ಆಗ್ರಹಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಡಾ.ಕೆಂಡೇಶ್ ಅವರು, ಒಬ್ಬ ಸೇವಾನಿರತ ಯುವ ಪಶುವೈದ್ಯೆಯ ಅಕಾಲಿಕ ಮರಣ ನಮಗೆಲ್ಲಾ ಅತೀವ ನೋವುಂಟು ಮಾಡಿದೆ. ಅಲ್ಲದೆ ಇಂತಹದೊAದು ದುರ್ಘಟನೆ ನಡೆಯುವುದಕ್ಕೆ ವ್ಯವಸ್ಥೆಯಲ್ಲಿನ ಲೋಪಗಳೇ ಕಾರಣ ಎಂದು ಸ್ಪಷ್ಟವಾಗಿ ಗೋಚರವಾಗುತ್ತದೆ. ವನ್ಯಜೀವಿ ವಿಭಾಗದ ಇ.ಡಿ.ಯವರು ಇದರ ಹೊಣೆಯನ್ನು ಹೊತ್ತುಕೊಳ್ಳಬೇಕಾಗಿದೆ. ಮತ್ತು ಇವರದ್ದು ತಪ್ಪಿದ್ದರೆ ಅಮಾನತ್ತು ಮಾಡಿ ನಂತರ ತನಿಖೆ ಮಾಡಬೇಕು. ಒಟ್ಟಾರೆ ಸಂಪೂರ್ಣ ಘಟನೆಯನ್ನು ಮುಖ್ಯಮಂತ್ರಿಗಳು ವಿಶೇಷ ತನಿಖಾತಂಡ ರಚಿಸಿ, ಮೃತ ವೈದ್ಯೆಗೆ ನ್ಯಾಯ ಒದಗಿಸಬೇಕು ಮತ್ತು ಮುಂದೆ ಇಂತಹ ಘಟನೆಗಳು ಎಂದೂ ಜರುಗಬಾರದು ಎಂದರು.
ಪಶುವೈದ್ಯೆಯ ಸಾವಿನ ಹಿಂದೆ ಅನೇಕ ಸಂಶಯಗಳು ಕಾಣಿಸಿಕೊಳ್ಳುತ್ತಿವೆ. ಇಲ್ಲಿ ನಿಯಮಗಳನ್ನೇ ಉಲ್ಲಂಘಿಸಲಾಗಿದೆ. ತರಬೇತಿ ಅವಧಿಯಲಿದ್ದ ಮಹಿಳಾ ಪಶುವೈದ್ಯಯನ್ನು ರಾತ್ರಿ 11 ಗಂಟೆಗೆ ಯಾವುದೇ ಸುರಕ್ಷತಾ ವ್ಯವಸ್ಥೆಗಳಿಲ್ಲದೆ ವಾಹನ ಚಾಲಕನೊಂದಿಗೆ ನೀರಾನೆ ತಪಾಸಣೆಗೆ ಕಳುಹಿಸಿದ್ದು ಅಲ್ಲಿನ ಲೋಪವನ್ನೇ ಎದ್ದು ತೋರಿಸುತ್ತದೆ. ವನ್ಯಜೀವಿ ವಿಭಾಗದಲ್ಲಿ ಪ್ರಾಣಿಗಳ ಪಾಲನೆ-ಪೋಷಣೆ, ಉಪಚಾರ, ಚಿಕಿತ್ಸೆ, ಸಾಗಾಣೆ ಮುಂತಾದ ವಿಷಯಗಳಿಗೆ ಕಟು ನಿಯಮಗಳಿದ್ದರೂ ಕೂಡ ವನ್ಯಜೀವಿ ವಿಭಾಗ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ಅಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯರು ಈಗಾಗಲೇ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಹಾಗಾಗಿ ಒಬ್ಬನೇ ಒಬ್ಬ ನುರಿತ ಖಾಯಂ ಪಶುವೈದ್ಯರಿಲ್ಲದೆ ಮೃಗಾಲಯವನ್ನು ಕಾರ್ಯನಿರ್ವಾಹಕ ನಿರ್ದೇಶಕರು ಹೇಗೆ ನಡೆಸುತ್ತಿದ್ದಾರೆ ಎಂಬುದೇ ಆಶ್ಚರ್ಯವನ್ನುಂಟು ಮಾಡಿದೆ. ಅಲ್ಲದೆ, ಈ ಅಧಿಕಾರಿಯು ಸಮೀಕ್ಷಾರೆಡ್ಡಿ ನೀರಾನೆ ಚಿಕಿತ್ಸೆಗೆ ರಾತ್ರಿವೇಳೆ ಹೋಗಿದ್ದು ತಮಗೆ ಗೊತ್ತೇ ಇಲ್ಲ ಎಂಬ ಹೇಳಿಕೆ ನೀಡಿರುವುದು ಅಚ್ಚರಿ ತರುತ್ತದೆ. ಇದು ಹೇಗೆ ಸಾಧ್ಯ ? ಒಬ್ಬ ಅಧಿಕಾರಿಯ ಅನುಮತಿ ಇಲ್ಲದೆ ಚಾಲಕನೊಬ್ಬ ವೈದ್ಯರನ್ನು ಅದು ರಾತ್ರಿವೇಳೆ ಮತ್ತು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಪಶುವೈದ್ಯಯನ್ನು ಕರೆದುಕೊಂಡು ಹೋಗಿದ್ದಾದರೂ ಏಕೆ ? ವೈದ್ಯೆ ಆ ನೀರಾನೆಗೆ ಚಿಕಿತ್ಸೆ ನೀಡಿದ ಬಗ್ಗೆ ಯಾಗಲಿ, ಬೇರೆ ವಿಷಯವಾಗಲಿ ಸಿಸಿ ಟಿವಿಯಲ್ಲಿ ಸೆರೆಯಾಗಬೇಕಿತ್ತು ಆದರೆ ಈಗ ಸಿಸಿ ಟಿವಿಯ ಪುಟೇಜ್‌ಗಳೇ ಇಲ್ಲ ಎಂದು ಹೇಳುತ್ತಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದರು.
ಡಾ. ವಿನಯ್ ಮಾತನಾಡಿ, ಒಟ್ಟಾರೆ ವನ್ಯಜೀವಿ ವಿಭಾಗದಲ್ಲಿ ಕೆಲಸ ಮಾಡುವ ಪಶುವೈದ್ಯರಿಗೆ ಅನೇಕ ಸವಾಲುಗಳಿವೆ. ಸೂಕ್ತ ರಕ್ಷಣೆಯಂತೂ ಇಲ್ಲವೇ ಇಲ್ಲ. ಜೀತದಾಳುಗಳಂತೆ ದುಡಿಯಬೇಕಾಗಿದೆ. ಸದಾ ಭಯದ ವಾತಾವರಣವಿದೆ. ಒತ್ತಡದ ಸನ್ನಿವೇಶಗಳಿವೆ. ಕೇವಲ 650 ರೂ.ಗಳ ದಿನಗೂಲಿ ಆಧಾರದಲ್ಲಿ ತರಬೇತಿಗಾಗಿ ಪಶುವೈದ್ಯರನ್ನು ನೇಮಿಸಿಕೊಂಡು ಅವರಿಗೆ ಸೂಕ್ತ ರಕ್ಷಣೆ ನೀಡದಿದ್ದರೆ ಪ್ರಾಣಹಾನಿಯಾದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ. ಹಾಗಾಗಿ ಈ ಇಡೀ ಘಟನೆಯನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಕ್ರಮ ಜರುಗಿಸಬೇಕು ಮೃತ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ರಾಜಶೇಖರ್ ಡಿ.ಬಿ., ಖಜಾಂಚಿ ಪ್ರಸನ್ನ ಕೆ.ಎಂ., ಕಾರ್ಯದರ್ಶಿ ಡಾ. ಕಿರಣ್ ಎಂ., ಡಾ.ರಮೇಶ್, ಡಾ.ಸುರೇಶ್‌ಪಟೇಲ್, ಡಾ.ರೇಖಾ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















