ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ವಿಕಸಿತ ಭಾರತ 2047ರ ಪುಷ್ಪ ಕೃಷಿ ಮತ್ತು ಭೂ ದೃಶ್ಯ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಕೆಳದಿ ಶಿವಪ್ಪನಾಯಕ ಕೃಷಿ ಮತ್ತುತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಭಾರತೀಯ ಅಲಂಕಾರಿಕ ತೋಟಗಾರಿಕೆ ಸಂಘ, ಐಸಿಎಆರ್-ಐಎಆರ್‌ಐ ನವದೆಹಲಿ, ಐಸಿಎಆರ್-ಪುಷ್ಪ ಕೃಷಿ ಸಂಶೋಧನಾ ನಿರ್ದೇಶನಾಲಯ ಪುಣೆ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಐಸಿಎಆರ್-ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಈ ಸಂಸ್ಥೆಗಳ ಸಹಯೋಗದೊಂದಿಗೆ 2026 ಮಾರ್ಚ್ 23ರಿಂದ 25ರವರೆಗೆ ಶಿವಮೊಗ್ಗದ ನವಿಲೆ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.
ಈ ಸಮ್ಮೇಳನವು ಭಾರತದಲ್ಲಿನ ಪುಷ್ಪ ಕೃಷಿ ಮತ್ತು ಭೂದೃಶ್ಯ ವಲಯವನ್ನು ಬಲಪಡಿಸಲು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು, ನಾವೀನ್ಯತೆಗಳನ್ನು ಪರಸ್ಪರ ಹಂಚಿಕೊಳ್ಳಲು ಹಾಗೂ ಹೊಸ ತಂತ್ರಜ್ಞಾನಗಳನ್ನು ಅನ್ವೇಷಿಸಲು ಒಂದು ಪ್ರಮುಖ ವೇದಿಕೆಯಾಗಲಿದೆ. ಈ ವಿಶಿಷ್ಟ ವಲಯದಲ್ಲಿನ ಸಂಶೋಧನೆ, ತಂತ್ರಜ್ಞಾನಗಳ ಅಳವಡಿಕೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಮುನ್ನಡೆಸುವತ್ತಗಮನಾರ್ಹವಾಗಿ ಕೊಡುಗೆ ನೀಡುವಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಸಮ್ಮೇಳನದಲ್ಲಿ “ವಿಕಸಿತ ಭಾರತ2047ರ ಪುಷ್ಟ ಕೃಷಿ ಮತ್ತು ಭೂ ವಿನ್ಯಾಸ” ಕುರಿತ ಸ್ಮರಣ ಸಂಚಿಕೆಯನ್ನು ಹಾಗೂ “ಜಿಯೋಗ್ರಾಫಿಕಲ್‌ಇಂಡಿಕೇಶನ್ ಫ್ಲವರ‍್ಸ್ ಆಫ್‌ಇಂಡಿಯಾ” ಎಂಬ ಎರಡು ಕೃತಿಗಳನ್ನು ಬಿಡುಗಡೆಗೊಳಿಸಲಾಗುತ್ತದೆ.
ಇನ್ನು, ವಿಶೇಷವಾಗಿ 6 ಮಂದಿ ವಿಜ್ಞಾನಿಗಳಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಮೂರು ಮಂದಿ ಪುಷ್ಪ ಕೃಷಿ ವಿಜ್ಞಾನಿಗಳಿಗೆ ಲೋಟಸ್ ಪುರಸ್ಕಾರ ನೀಡಿಗೌರವಿಸಲಾಗುತ್ತಿದೆ. ಸಣ್ಣರೈತ ವರ್ಗದ ಮೂರು ಮಂದಿ ಅತ್ಯುತ್ತಮ ಗುಲಾಬಿ ಬೆಳೆಗಾರರನ್ನು ಗುರುತಿಸಿ, ರೋಸ್ ಪುರಸ್ಕಾರ ಹಾಗೂ ದೊಡ್ಡ ಪ್ರಮಾಣದ ರೈತ ವರ್ಗದ ಮೂರು ಮಂದಿ ಅತ್ಯುತ್ತಮ ಗುಲಾಬಿ ಬೆಳೆಗಾರರು ಮತ್ತುರಫ್ತುದಾರರಿಗೆ ರೋಸ್ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.
ಅಲ್ಲದೇ ಪ್ರಮುಖವಾಗಿ, ಭಾರತೀಯ ಅಲಂಕಾರಿಕ ತೋಟಗಾರಿಕೆ ಸಂಘದ ವತಿಯಿಂದ 5 ಮಂದಿ ಪುಷ್ಪ ಕೃಷಿ ವಿಜ್ಞಾನಿಗಳಿಗೆ ಫೆಲೋಷಿಪ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಇಬ್ಬರು ಪಿಎಚ್’ಡಿ ವಿದ್ಯಾರ್ಥಿಗಳಿಗೆ ಡಾಕ್ಟೋರಲ್ ಸಂಶೋಧನಾ ಪ್ರಬಂಧಕ್ಕೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಯನ್ನು ಹಾಗೂ 4 ಮಂದಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಸಂಶೋಧನಾ ಪ್ರಬಂಧಕ್ಕೆ ಅತ್ಯುತ್ತಮ ಪ್ರಬಂಧ ಪ್ರಶಸ್ತಿಯನ್ನು, ಇಬ್ಬರಿಗೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಈ ಸಮ್ಮೇಳನಕ್ಕೆ, ದೇಶದ ವಿವಿಧ ರಾಜ್ಯಗಳ 180ಕ್ಕೂ ಹೆಚ್ಚು ವಿದ್ಯಾರ್ಥಿಗಳು, ವಿಜ್ಞಾನಿಗಳು, ಕಾರ್ಪೂರೇಟರ್ ವಲಯದ ತಜ್ಞರು, ಪ್ರಗತಿಪರರೈತರು, ಉದ್ದಿಮೆದಾರರು, ಮಾರುಕಟ್ಟೆತಜ್ಞರು ಹಾಗೂ ಪುಷ್ಪ ಕೃಷಿ ರೈತರು, ಆಸಕ್ತರು ಭಾಗವಹಿಸಿ ಇದರ ಪ್ರಯೋಜನ ಪಡೆಯಲಿದ್ದಾರೆ.
ಹೂವು ಉತ್ಪಾದನೆಯಲ್ಲಿ ರಾಜ್ಯದ ಅಗ್ರಪಾಲು
ಕರ್ನಾಟಕವು ಭಾರತದ ವಾಣಿಜ್ಯ ಪುಷ್ಪ ಕೃಷಿಯ ರಾಜಧಾನಿ ಎಂದೇ ಹೆಸರಾಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಹೂವುಗಳನ್ನು ವೈಜ್ಞಾನಿಕವಾಗಿ ಬೆಳೆದು ರಫ್ತು ಮಾಡುವ ಬೃಹತ್ ಉದ್ಯಮವಾಗಿ ಇದು ರಾಜ್ಯದಲ್ಲಿ ಬೆಳೆದಿದೆ. ರಾಜ್ಯದ ಅನುಕೂಲಕರ ಹವಾಗುಣ, ಫಲವತ್ತಾದ ಮಣ್ಣು ಮತ್ತು ಭೌಗೋಳಿಕ ವೈವಿಧ್ಯತೆಯು ಸಾಂಪ್ರದಾಯಿಕ ಹಾಗೂ ಆಧುನಿಕ ಹೂವುಗಳೆರಡನ್ನೂ ವಾಣಿಜ್ಯಿಕವಾಗಿ ಬೆಳೆಯಲು ಪ್ರಶಸ್ತವಾದ ವಾತಾವರಣವಿದೆ. ಈ ಹಿನ್ನೆಲೆಯಲ್ಲಿ ದೇಶದ ಒಟ್ಟು ಹೂವಿನ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಸುಮಾರು 30% ಕ್ಕಿಂತ ಹೆಚ್ಚಿದೆ.
ಚೀನಾ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಪುಷ್ಪ ಕೃಷಿ ಉದ್ಯಮವಾಗಿ ಬೆಳೆದಿದಿದೆ. ಭಾರತದಲ್ಲಿ ಪುಷ್ಪ ಕೃಷಿಯ ವಿಸ್ತೀರ್ಣ ಸುಮಾರು 2.85 ಲಕ್ಷ ಹೆಕ್ಟೇರ್’ಗಳಾಗಿದ್ದು, ಸುಮಾರು 21.52 ಲಕ್ಷ ಮೆಟ್ರಿಕ್ ಟನ್ ಬಿಡಿ ಹೂವುಗಳು ಹಾಗೂ ಸುಮಾರು 645 ಮೆಟ್ರಿಕ್ ಟನ್‌ಗಳಷ್ಟು ಕಟ್ ಹೂವುಗಳನ್ನು ಉತ್ಪಾದಿಸಲಾಗುತ್ತಿದೆ. ಭಾರತವು ಪ್ರಸ್ತುತ ಪುಷ್ಪ ಕೃಷಿ ರಫ್ತಿನಲ್ಲಿ ಜಾಗತಿಕವಾಗಿ 51 ನೇ ಸ್ಥಾನದಲ್ಲಿದೆ. ಅಂದರೆ ಸುಮಾರು ರೂ.455 ಕೋಟಿಯಷ್ಟು ಆದಾಯ ಪುಷ್ಪ ಕೃಷಿಯಿಂದ ದೊರೆಯುತ್ತಿದೆ.
ಈ ವಾಣಿಜ್ಯ ಪುಷ್ಪ ಕೃಷಿ ರಾಜ್ಯದ ಆರ್ಥಿಕತೆ, ಕೃಷಿ ವಲಯದ ಪ್ರಗತಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಹೂವುಗಳು ಅಲ್ಪಾವಧಿ ಬೆಳೆಗಳಾಗಿದ್ದು, ಇವು ರೈತರಿಗೆ ದೈನಂದಿನ ಅಥವಾ ವಾರಕ್ಕೊಮ್ಮೆ ನಿರಂತರ ಆದಾಯವನ್ನು ತಂದು ಕೊಡುತ್ತವೆ. ಇದು ಸಣ್ಣ ರೈತರ ಆರ್ಥಿಕ ಭದ್ರತೆಗೆ ಬಹಳ ಸಹಕಾರಿಯಾಗಿದೆ.
ರೈತರು ಕೇವಲ ಒಂದೇ ರೀತಿಯ ವಾಣಿಜ್ಯಅಥವಾ ಆಹಾರ ಬೆಳೆಗಳನ್ನು ಅವಲಂಬಿಸದೆ, ಪುಷ್ಪ ಕೃಷಿಯನ್ನು ಅಳವಡಿಸಿಕೊಳ್ಳುವ ಮೂಲಕ ಬೆಳೆ ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವ ಮೂಲಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ಹವಾಮಾನ ವೈಪರೀತ್ಯಅಥವಾ ಮಾರುಕಟ್ಟೆ ಬೆಲೆ ಕುಸಿತದ ಸಂದರ್ಭದಲ್ಲಿ, ಬಹುಬೆಳೆ ಪದ್ಧತಿಯಲ್ಲಿನ ಪುಷ್ಪ ಕೃಷಿಯು ರೈತರಿಗೆ ಆರ್ಥಿಕ ನಷ್ಟದ ಅಪಾಯವನ್ನು ತಗ್ಗಿಸುವಲ್ಲಿ ನೆರವಾಗುತ್ತದೆ.
ಬೆಂಗಳೂರಿನಲ್ಲಿರುವ ಅಂತಾರಾಷ್ಟ್ರೀಯ ಹೂವು ಹರಾಜು ಮಂಡಳಿ’ ‘International Flower Auction Bangalore(IFAB)’ ಏಷ್ಯಾದಲ್ಲೇ ಮೊಟ್ಟಮೊದಲ ‘ಡಚ್ ಮಾದರಿ’ಯ ಹೂವಿನ ಹರಾಜು ಕೇಂದ್ರವಾಗಿದೆ. ಇದು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ, ರೈತರಿಗೆ ತಾವು ಬೆಳೆದ ಹೂವುಗಳಿಗೆ ನೇರವಾಗಿ ಅತ್ಯುತ್ತಮ ಹಾಗೂ ಸ್ಪರ್ಧಾತ್ಮಕ ಬೆಲೆ ದೊರೆಯುತ್ತಿದೆ. ಬೆಂಗಳೂರಿನ ಕೆ.ಆರ್. ಮಾರುಕಟ್ಟೆ, ಮೈಸೂರಿನ ದೇವರಾಜ ಮಾರುಕಟ್ಟೆ ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಹೂವಿನ ದೊಡ್ಡ ಸಗಟು ಮಾರುಕಟ್ಟೆಗಳಿವೆ. ಇಲ್ಲಿ ಪ್ರತಿದಿನ ಟನ್‌ಗಟ್ಟಲೆ ಹೂವುಗಳ ವಹಿವಾಟು ನಡೆಯುತ್ತಿದೆ.
ಕರ್ನಾಟಕವು ವಾಣಿಜ್ಯ ಪುಷ್ಪಗಳನ್ನು ರಫ್ತು ಮಾಡುವಲ್ಲಿ ಅಗ್ರಸ್ಥಾನದಲ್ಲಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಶೀತಲೀಕರಣ ಘಟಕಗಳ ಮೂಲಕ ನೆದರ್ಲ್ಯಾಂಡ್, ಜಪಾನ್, ಆಸ್ಟ್ರೇಲಿಯಾ, ಯುಎಇ, ಮತ್ತು ಯುರೋಪ್ ರಾಷ್ಟ್ರಗಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಹೂವುಗಳು ರಫ್ತಾಗುತ್ತವೆ. ಪ್ರೇಮಿಗಳ ದಿನಾಚರಣೆ, ತಾಯಂದಿರ ದಿನ ಹಾಗೂ ಕ್ರಿಸ್‌ಮಸ್‌ನಂತಹ ಸಂದರ್ಭಗಳಲ್ಲಿ ಇಲ್ಲಿನ ಗುಲಾಬಿಗಳಿಗೆ ಜಾಗತಿಕ ಮಟ್ಟದಲ್ಲಿ ಭಾರೀ ಬೇಡಿಕೆ ಇರುತ್ತದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಪುಷ್ಪಕೃಷಿಯನ್ನು ಹೆಚ್ಚಾಗಿ ಮಾಡಲಾಗುತ್ತಿದೆ. ಗುಲಾಬಿ, ಮಲ್ಲಿಗೆ, ಆಸ್ಟರ್, ಕನಕಾಂಬರ ಮತ್ತು ಸುಗಂಧರಾಜದಂತಹ ಹೂವಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅಲ್ಲದೆ ಅಂಥೂರಿಯಂ ಮತ್ತು ಜರ್ಬೆರಾ ಕೂಡ ಬೆಳೆಯುತ್ತಿದ್ದಾರೆ. ಇವುಗಳನ್ನು ಹೆಚ್ಚಾಗಿ ಹಸಿರು ಮನೆಗಳಲ್ಲಿ, ಪಾಲಿ ಹೌಸ್‌ಗಳಲ್ಲಿ ಬೆಳೆಯಲಾಗುತ್ತಿದೆ.
ಜೊತೆಗೆ ರಾಜ್ಯತೋಟಗಾರಿಕೆ ಇಲಾಖೆ ಶಿವಮೊಗ್ಗದಲ್ಲಿ ಪುಷ್ಪ ಕೃಷಿಗಾಗಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಿದೆ. ಈ ಮೂಲಕ ಪುಷ್ಪ ಕೃಷಿ ಬೆಳೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಹಾಗೂ ರೈತರಿಗೆ ತಾಂತ್ರಿಕ ಮಾಹಿತಿಯನ್ನು ಒದಗಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















