ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಾಲಿ ರೋಸ್ಟರ್ ಬಿಂದುಗಳಲ್ಲಿರುವ ದೋಷಗಳನ್ನು ಸರಿಪಡಿಸಿದ ನಂತರವೇ ಪರಿಶಿಷ್ಟ ಜಾತಿಗಳ ಒಳಮೀಸಲಾತಿ #internal reservation ಜಾರಿಗೊಳಿಸಿ ಈಗ ನಿರ್ಧರಿಸಿರುವ 56,432 ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಾಲಯಗಳ ತಡೆಯಾಜ್ಞೆಯಿಂದಾಗಿ ರಾಜ್ಯ ಸರ್ಕಾರ ಮೀಸಲಾತಿ ಪ್ರಮಾಣವನ್ನು ಶೇ.56ರಿಂದ ಶೇ.50ಕ್ಕೆ ಇಳಿಸಬೇಕಾದ ಪರಿಸ್ಥಿತಿಗೆ ಬಂದಿದೆ. ಪರಿಶಿಷ್ಟರ ಮೀಸಲಾತಿ ಪ್ರಮಾಣವನ್ನು ಶೇ.24ರಿಂದ ಶೇ.18ಕ್ಕೆ ಇಳಿಕೆ ಮಾಡಿರುವುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಟ್ಟಾರೆ ಶೇ.6ರಷ್ಟು ಮೀಸಲಾತಿ ನಷ್ಟವಾಗಿದೆ. ರಾಜ್ಯ ಸರ್ಕಾರ ಈಗ ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.17ರಿಂದ ಶೇ.15ಕ್ಕೆ ಇಳಿಕೆ ಮಾಡಿದೆ. ರೋಸ್ಟರ್ ಬಿಂದುಗಳಲ್ಲಿರುವ ದೋಷಗಳನ್ನು ಸರಿಪಡಿಸಿ ಒಳಮೀಸಲಾತಿ ಕಾನೂನಿನ ಪ್ರಕಾರ ಸದರಿ ಶೇ.15ರಷ್ಟು ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣವನ್ನು ಅನುಷ್ಟಾನಗೊಳಿಸಬೇಕು ಎಂದು ಪುನರಾಗ್ರಹಿಸಿದರು.
ರೋಸ್ಟರ್ ಬಿಂದುಗಳಲ್ಲಿರುವ ದೋಷಗಳನ್ನು ಸರಿಪಡಿಸಿ 101 ಪರಿಶಿಷ್ಟ ಜಾತಿಗಳಿಗೂ ಅವರವರ ಜನಸಂಖ್ಯಾವಾರು ಪಾಲು ನ್ಯಾಯಯುತವಾಗಿ ಲಭಿಸುವಂತೆ ಸರ್ಕಾರ ಆದೇಶಿಸಬೇಕು. ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಬಿಜೆಪಿ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ನರೇಂದ್ರಮೋದಿಯವರ ಬಳಿ ತೆರಳಿ ಸದರಿ ಮೀಸಲಾತಿಯನ್ನು ಸಂವಿಧಾನದ 9ನೇ ಶೆಡ್ಯೂಲ್‍ಗೆ ಸೇರ್ಪಡೆ ಮಾಡುವಂತೆ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಅವರು ಅದನ್ನು ಮಾಡದೆ ಪರಿಶಿಷ್ಟರಿಗೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿದರು.
ನೆರೆಯ ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಜಾರಿಗೆ ತಂದ ಒಳಮೀಸಲಾತಿಯನ್ನು ನಮ್ಮ ರಾಜ್ಯದಲ್ಲಿ ಜಾರಿಗೊಳಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಮಾ.27ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಬಳಿ ಸರ್ವಪಕ್ಷ ನಿಯೋಗವನ್ನು ತೆಗೆದುಕೊಂಡು ಹೋಗಿ ಒಳಮೀಸಲಾತಿ ಬಗ್ಗೆ ಸಂವಿಧಾನದ 9ನೇ ಷೆಡ್ಯೂಲ್‍ನಲ್ಲಿ ಸೇರಿಸುವಂತೆ ಒತ್ತಾಯಿಸಬೇಕು ಇಲ್ಲವಾದಲ್ಲಿ ದಲಿತ ಸಂಘರ್ಷ ಸಮಿತಿಯು ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಂ.ಏಳುಕೋಟಿ, ಶಿವಬಸಪ್ಪ, ಬಿ.ಎ.ಕಾಟ್ಕೆ, ಪ್ರೊ.ಚಂದ್ರಪ್ಪಜೋಗಿ, ರಮೇಶ್ ಚಿಕ್ಕಮರಡಿ, ಹನುಮಂತಪ್ಪ ಯಡವಾಲ, ಜಗದೀಶ್ ಚುರ್ಚಿಗುಂಡಿ, ಬಸವರಾಜ್ ಹಸವಿ, ಕೃಷ್ಣಬೊಮ್ಮನಕಟ್ಟೆ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















