ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಇಂದು ಜಗತ್ತು ಬಹು ಸವಾಲುಗಳನ್ನು ಎದುರಿಸುವ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ತಂತ್ರಜ್ಞಾನ ಮತ್ತು ವಿವೇಚನೆಗಳು ಮಾತ್ರ ಜಗತ್ತನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯಲು ಸಾಧ್ಯ. ಶಿಕ್ಷಣ ವಿಜ್ಞಾನ ತಂತ್ರಜ್ಞಾನಾಧಾರಿತ ಶೈಕ್ಷಣಿಕ ಸಮ್ಮೇಳನಗಳು ಮಾತ್ರ ಶಿಕ್ಷಣವನ್ನು ಅಭಿವೃದ್ಧಿ ಪಥದತ್ತ ಸಾಗಲು ಸಹಾಯಕವಾಗಿವೆ ಎಂದು ಶಿಕಾರಿಪುರ ಕ್ಷೇತ್ರದ ಶಾಸಕರು, ಭಾಜಪ ರಾಜ್ಯಾಧ್ಯಕ್ಷರು ಹಾಗೂ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಖಜಾಂಚಿಗಳು ಆದ ಬಿ. ವೈ. ವಿಜಯೇಂದ್ರ B Y Vijayendra ಹೇಳಿದರು.
ಶಿಕಾರಿಪುರ ಪಟ್ಟಣದ ಕುಮದ್ದತಿ ಪ್ರಥಮ ದರ್ಜೆ ಕಾಲೇಜಿನಲ್ಲಿ Kumadvathi First Grade College ಆಯೋಜಿಸಲಾಗಿದ್ದ ಬಹು ಶಿಸ್ತಿನ ಮತ್ತು ಸಮಕಾಲೀನ ವಿಧಾನಗಳಲ್ಲಿನ ನಾವೀನ್ಯತೆ ಹಾಗೂ ಸುಸ್ಥಿರತೆಯನ್ನು ಕಂಡುಕೊಳ್ಳುವಲ್ಲಿನ ಸವಾಲುಗಳ ಕುರಿತ ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಬೆಳವಣಿಗೆಗೆ ಹೊಸ ಭರವಸೆ ಹಾಗೂ ಸ್ವರೂಪವನ್ನು ನೀಡುವಲ್ಲಿ ಶೈಕ್ಷಣಿಕ ಸಮ್ಮೇಳನಗಳು ಅಗತ್ಯವಾಗಿದ್ದು, ಇವುಗಳು ಹೊಸ ಹೊಸ ಸಂಶೋಧನೆ ಆವಿಷ್ಕಾರಗಳ ಮಾಹಿತಿ ವಿನಿಮಯ ವೇದಿಕೆಗಳಾಗಿವೆ. ಇಂದು ಭಾರತದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜೀ ಅವರು ದೇಶದ ಸಂಶೋಧನೆಗೆ ಹೆಚ್ಚು ಹೆಚ್ಚು ಅವಕಾಶಗಳನ್ನು ಹಾಗೂ ಅನುದಾನಗಳನ್ನು ನೀಡುತ್ತಿದ್ದಾರೆ. ಈ ವರ್ಷ ಒಂದು ಲಕ್ಷ ಕೋಟಿ ಸಹಾಯಧನವನ್ನು ಸಂಶೋಧನಾ ಕ್ಷೇತ್ರಕ್ಕೆ ನೀಡಲಾಗಿದೆ. 2047ರಲ್ಲಿ ಸಂಪೂರ್ಣ ಅಭಿವೃದ್ಧಿಶೀಲ ಭಾರತ ಆಗಬೇಕೆಂಬ ಕನಸು ಮೋದಿಜಿಯವರಾಗಿದ್ದು, ಅತಿ ಹೆಚ್ಚು ಯುವ ಜನಾಂಗವನ್ನ ಹೊಂದಿರುವ ಭಾರತದ ದೇಶದ ಯುವಕರು ಇದನ್ನು ಅರ್ಥ ಮಾಡಿಕೊಂಡು ತಮ್ಮ ತಂದೆ ತಾಯಿಗಳ ಕನಸುಗಳೊಂದಿಗೆ ಸನ್ಮಾರ್ಗದಡೆಗೆ ಸಾಗಬೇಕಿದೆ ಎಂದು ಕರೆ ನೀಡಿದರು.
ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಡಾ. ಬಿಜೆ ಗಿರೀಶ್ ಅವರು ಸಂಶೋಧನೆಗಳು ಜ್ಞಾನದ ಅನ್ವೇಷಣೆ, ಸಮಸ್ಯೆಗಳಿಗೆ ಪರಿಹಾರ ಮತ್ತು ಹೊಸ ಆವಿಷ್ಕಾರಗಳಿಗೆ ಅಡಿಪಾಯವಾಗಿದೆ. ಸಂಶೋಧನೆಯ ಕ್ಷೇತ್ರದಲ್ಲಿ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ವಿಶ್ಲೇಷಿಸಿ, ಅಸ್ತಿತ್ವದಲ್ಲಿರುವ ಸಿದ್ಧಾಂತಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರತಿನಿಧಿಗಳು ಆದ ಡಾ. ಶಿವಕುಮಾರ್ ಜಿಎಸ್ ಮಾತನಾಡಿ ಸಂಶೋಧನೆಗಳು ಹೊಸ ಜ್ಞಾನದ ಅನ್ವೇಷಣೆಯ ಉದ್ದೇಶವನ್ನು ಹೊಂದಿದೆ. ಶಿಕ್ಷಣ ವಿಜ್ಞಾನ ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಬದಲಾವಣೆಯಲ್ಲಿ ಸಂಶೋಧನೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ದಿನಗಳಲ್ಲಿ ಇಂತಹ ಸಮ್ಮೇಳನಗಳು ತುಂಬ ಅಗತ್ಯವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಶಿವಕುಮಾರ ಎಂ ಬಿ, ಉಪಸ್ಥಿತರಿದ್ದು, ಈ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸಗಳನ್ನು ನೀಡಿಸಲಾಯಿತು ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಹಾಗೂ ಅಂತರಾಜ್ಯದ ಹಲವು ಅಧ್ಯಾಪಕರು, ಸಂಶೋನಾರ್ಥಿಗಳು, ವಿದ್ಯಾರ್ಥಿಗಳು ತಮ್ಮ ವಿದ್ವತ್ಪೂರ್ಣ ಲೇಖನಗಳನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ರವೀಂದ್ರ ಕೆಸಿ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಪದವಿ ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪನ್ಯಾಸಕಿ ಅಶ್ವಿನಿ ವಂದಿಸಿ, ದಾನೇಶ್ವರಿ ನಿರೂಪಿಸಿದರು. ಸಮ್ಮೇಳನದಲ್ಲಿ ಸಂಸ್ಥೆಯ ಅಧ್ಯಾಪಕ ವರ್ಗದವರು, ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















