ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾಲೂಕಿನ ಲಕ್ಕಿನಕೊಪ್ಪದಲ್ಲಿ ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಕುತ್ತಿಗೆಗೆ ಕುಣಿಕೆ ಬಿಗಿದುಕೊಂಡು ಒಂಬತ್ತು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ.
ಶಿವಮೊಗ್ಗದ ವಿದ್ಯಾನಗರದ ನಿವಾಸಿಯಾಗಿರುವ 9 ವರ್ಷದ ಪ್ರಣಮ್ಯ ಮೃತ ದುರ್ದೈವಿ. ಈ ಘಟನೆಯು ಮೂರು ದಿನಗಳ ಹಿಂದೆ ನಡೆದಿದ್ದು, ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ.
ಬೇಸಿಗೆಯ ರಜೆ ಕಳೆಯುವ ಉದ್ದೇಶದಿಂದ ಪ್ರಣಮ್ಯ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದಳು. ಈ ವೇಳೆ ಮನೆಯ ಒಳಗಡೆ ಕೋಣೆಯ ಬಾಗಿಲನ್ನು ಹಾಕಿಕೊಂಡು, ಪಂಚೆಯನ್ನು ಬಳಸಿ ಜೋಕಾಲಿಯನ್ನು ಕಟ್ಟಿಕೊಂಡು ಆಟವಾಡುತ್ತಿದ್ದಳು. ಹೀಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಂಚೆಯು ಕುತ್ತಿಗೆಗೆ ಬಿಗಿದುಕೊಂಡು ಈ ಅವಘಡ ಸಂಭವಿಸಿದೆ.
ಚಿಕ್ಕಮ್ಮನ ಮನೆಯಲ್ಲಿ ರಜೆಯ ದಿನಗಳನ್ನು ಕಳೆಯಬೇಕಿದ್ದ ಬಾಲಕಿಯು ಆಟವಾಡುತ್ತಿದ್ದಾಗಲೇ ಸಾವನ್ನಪ್ಪಿರುವುದು ಕುಟುಂಬದಲ್ಲಿ ಶೋಕವನ್ನುಂಟುಮಾಡಿದೆ. ಇನ್ನೂ ಘಟನೆ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















