ಕಲ್ಪ ಮೀಡಿಯಾ ಹೌಸ್ | ಸೊರಬ |
ಮದುವೆ ದಿಬ್ಬಣಕ್ಕೆ ಹೊರಟಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಕೊರಕೋಡು ಕ್ರಾಸ್ ಸಮೀಪದ ಇರ್ಪಿನ ಕೆರೆ ಏರಿ ಮೇಲೆ ನಡೆದಿದೆ.
ಸಿದ್ದಾಪುರದಿಂದ ಹಾನಗಲ್‌ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಆನವಟ್ಟಿ – ಸೊರಬ ಮಾರ್ಗವಾಗಿ ಸಂಚರಿಸುವ ವೇಳೆ ಕುಪ್ಪಗಡ್ಡೆ ಗ್ರಾಮದ ಇರ್ಪಿನ ಕೆರೆ ಏರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆ ಏರಿ ತೋಟದ ಗಟಾರಕ್ಕೆ ಮಗುಚಿ ಬಿದ್ದಿದೆ.
ಅಪಘಾತದ ವೇಳೆ ಪ್ರಯಾಣಿಕರು ಆತಂಕಗೊಂಡು ಕೂಗಾಡಿದ್ದಾರೆ. ಸ್ಥಳೀಯರು ತಕ್ಷಣ ಧಾವಿಸಿ ರಕ್ಷಣಾ ಕಾರ್ಯಕ್ಕೆ ಮುಂದಾದರು. ಕೆರೆ ಪಕ್ಕದಲ್ಲಿದ್ದ ತಡೆ ಕಲ್ಲುಗಳು ಬಸ್‌ನ ವೇಗವನ್ನು ನಿಯಂತ್ರಿಸಿದ್ದರಿಂದ ದೊಡ್ಡ ದುರಂತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸುಮಾರು 50 ಜನ ಪ್ರಯಾಣಿಸುತ್ತಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ನಡೆದ ಇರ್ಪಿನ ಕೆರೆ ಏರಿಯ ತಿರುವು ಈಗಾಗಲೇ ಅಪಾಯಕಾರಿ ತಿರುವಾಗಿದೆ. ಈ ಭಾಗದಲ್ಲಿ ಅನೇಕ ಅಪಘಾತಗಳು ಸಂಭವಿಸಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ.
ಇಳಿಜಾರು ರಸ್ತೆ ಆಗಿರುವುದರಿಂದ ವಾಹನಗಳ ನಿಯಂತ್ರಣ ಕಷ್ಟವಾಗುತ್ತಿದ್ದು, ವೇಗವಾಗಿ ಬರುವ ವಾಹನಗಳು ತಿರುವಿನಲ್ಲಿ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ.
ಆದರೂ ಕೂಡ ಅಪಾಯಕಾರಿ ತಿರುವು ಎಂಬ ಸೂಚನಾ ಫಲಕ, ವೇಗ ನಿಯಂತ್ರಣ ವ್ಯವಸ್ಥೆ, ರಕ್ಷಣಾತ್ಮಕ ತಡೆಗೋಡೆ ಸೇರಿದಂತೆ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ಇರುವ ಪಿಡಬ್ಲ್ಯುಡಿ ಇಲಾಖೆ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಇಲಾಖೆ ನಿರ್ಲಕ್ಷ್ಯವೇ ಮರುಮರು ಸಂಭವಿಸುತ್ತಿರುವ ಅಪಘಾತಗಳಿಗೆ ನೇರ ಕಾರಣ ಎಂಬ ಆರೋಪವೂ ಕೇಳಿಬಂದಿದೆ.
ಈ ಕುರಿತು ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಮಧುರಾಮ್ ಕಲ್ಪ ನ್ಯೂಸ್ ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















