ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರ Mangalaya Chain ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ ಇಬ್ಬರು ಕಳ್ಳರನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದು, ಹೊಡೆದು, ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಹಳೆ ಹೊಳೆಹಟ್ಟಿ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಅಶ್ಚಿನಿ ಎನ್ನುವವರು ಮದುವೆಗೆ ತೆರಳಲು ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು.
ಮಹಿಳೆ ನಡೆದುಕೊಂಡು ಹೋಗುವ ವೇಳೆ ಬೈಕ್’ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಶ್ವಿನಿ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದಾರೆ.
ಸರ ಕಿತ್ತುಕೊಂಡು ಕಳ್ಳರು ಪರಾರಿಯಾಗಲು ಯತ್ನಿಸುತ್ತಿದ್ದಂತೆ ಅಶ್ವಿನಿ ಅವರು ರಕ್ಷಣೆಗೆ ಕೂಗಿಕೊಂಡಿದ್ದಾರೆ. ತಕ್ಷಣವೇ ಗ್ರಾಮಸ್ಥರು ಕಳ್ಳರ ಬೈಕನ್ನು ಹಿಂಬಾಲಿಸಿದ್ದು, ಈ ವೇಳೆ ಕಳ್ಳರ ಬೈಕ್ ಸ್ಕಿಡ್ ಆಗಿ ಬಿದ್ದಿದೆ.
ತಕ್ಷಣವೇ ತಪ್ಪಿಸಿಕೊಳ್ಳುವ ಭರದಲ್ಲಿ ಆರೋಪಿಗಳು ಜಮೀನಿನೊಳಗೆ ಓಡಿ ಹೋಗಿದ್ದಾರೆ. ಅಲ್ಲಿಗೇ ಬಿಡದ ಸಾರ್ವಜನಿಕರು ಬೆನ್ನಟ್ಟಿ ಓಡಿ ಹಿಡಿದು ಥಳಿಸಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಮಾಂಗಲ್ಯ ಸರ ಹಾಗೂ ಬೈಕನ್ನು ವಶಕ್ಕೆ ಪಡೆದಿದ್ದಾರೆ.
ಮಾಂಗಲ್ಯ ಸರ ಕಿತ್ತುಕೊಳ್ಳುವ ಆತುರದಲ್ಲಿ ಮಹಿಳೆಯ ಕುತ್ತಿಗೆಗೆ ಗಾಯವಾಗಿದೆ.
ಸುಮಾರು 48 ಗ್ರಾಂ ತೂಕದ ಮಾಂಗಲ್ಯ ಸರದ ಅಂದಾಜು ಮೌಲ್ಯ ಮೂರೂವರೆ ಲಕ್ಷ ಎಂದು ಹೇಳಲಾಗಿದೆ.
ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















