ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕಲಿಕೆ, ನವೀನತೆ ಮತ್ತು ಸೃಜನಶೀಲತೆಯೇ ಯಶಸ್ವಿ ಇಂಜಿನಿಯರ್‌ನ ನಿಜವಾದ ಗುರುತು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಹೇಳಿದರು.
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನ JNNCE ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಮಿಸ್ಟಿರಿಯೊ 6.0’ ರಾಜ್ಯಮಟ್ಟದ ತಾಂತ್ರಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲೆಕ್ಟ್ರಾನಿಕ್ಸ್ ಎಂದರೆ ಕೇವಲ ಸರ್ಕ್ಯೂಟ್‌ಗಳು, ಮೈಕ್ರೊಪ್ರೊಸೆಸರ್‌ಗಳು ಅಥವಾ ಯಂತ್ರಗಳ ಅಧ್ಯಯನವಲ್ಲ. ಅದು ಕಾಣದ ಬುದ್ಧಿವಂತಿಕೆಯನ್ನು ಅರಿಯುವ ಪ್ರಯಾಣ. ಒಂದು ಸಣ್ಣ ಮೈಕ್ರೋಪ್ರೊಸೆಸರ್ ಕ್ಷಣಾರ್ಧದಲ್ಲಿ ಕೋಟ್ಯಾಂತರ ಕಾರ್ಯಗಳನ್ನು ನಿರ್ವಹಿಸುತ್ತದೆ. ನಮ್ಮ ಕಣ್ಣಿಗೆ ಕಾಣದ ಆ ಎಲೆಕ್ಟ್ರಾನಿಕ್ ಚಕ್ರವೇ ಇಂದಿನ ಜಗತ್ತನ್ನು ಚಲಾಯಿಸುತ್ತಿದೆ. ವಿದ್ಯಾರ್ಥಿಗಳು ಒಂದು ತಾಂತ್ರಿಕ ಸಮಸ್ಯೆಯನ್ನು ಪರಿಹರಿಸುವಾಗ, ಕೇವಲ ಯಂತ್ರದೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂಬ ಸೀಮಿತಕ್ಕಿಂತ, ಅದರ ಹಿಂದೆ ಅಡಗಿರುವ ವಿಜ್ಞಾನ, ತಾಂತ್ರಿಕತೆಯನ್ನು ಅರ್ಥೈಸಿಕೊಳ್ಳುವ ಕುತೂಹಲ ಬೆಳೆಸಿಕೊಳ್ಳಿ. ಡಾರ್ಕ್ ಕೋಡಿಂಗ್ ನಂತಹ ಸವಾಲುಗಳು, ಮನಸ್ಸಿನ ಸ್ಪಷ್ಟತೆ, ತಾರ್ಕಿಕ ಚಿಂತನೆ ಮತ್ತು ಕೋಡಿಂಗ್ ಭಾಷೆಯ ಮೇಲಿನ ಹಿಡಿತದ ಮೇಲೆ ಅವಲಂಬಿತವಾಗಿರುತ್ತದೆ. ಒಂದು ಸೆಮಿಕೋಲನ್ ತಪ್ಪಿದರೂ ಸಂಪೂರ್ಣ ವ್ಯವಸ್ಥೆಯೆ ಸ್ಥಗಿತಗೊಳ್ಳಬಹುದು. ಅಷ್ಟು ಸೂಕ್ಷ್ಮವಾದ ಕ್ಷೇತ್ರ ಇದು. ಅದರೆ ಅದೇ ನಿಜವಾದ ತಾಂತ್ರಿಕ ಸಾಮರ್ಥ್ಯದ ಪರೀಕ್ಷೆ. ನಾಲ್ಕನೇ ಅಥವಾ ಐದನೇ ಸೆಮಿಸ್ಟರ್‌ಗೆ ಬಂದಾಗ ವಿದ್ಯಾರ್ಥಿಗಳಲ್ಲಿ ಇಂತಹ ಪರಿಣಿತಿ ಬೆಳೆಯಬೇಕು ಎಂದು ಹೇಳಿದರು.
ಎಲ್ಫಾನ್ಜ್ ಟೆಕ್ನಾಲಜಿ ಆಡಳಿತ ಮುಖ್ಯಸ್ಥರಾದ ಸುನಿಲ್ ಕುಮಾರ್.ಕೆ.ಎಸ್ ಮಾತನಾಡಿ, ಇಂದಿನ ಉದ್ಯೋಗ ನೀಡುವ ಸಂಸ್ಥೆಗಳು ಕೇವಲ ಅಂಕಪಟ್ಟಿಯನ್ನು ನೋಡುವುದಿಲ್ಲ. ನಮ್ಮೊಳಗಿರುವ ಹೊಸ ಪರಿಹಾರಗಳನ್ನು ಆವಿಷ್ಕರಿಸುವ ಮನಸ್ಸು, ನವೀನ ಆಲೋಚನೆಗಳನ್ನು ರೂಪಿಸುವ ಪ್ರತಿಭೆ ಮತ್ತು ತಂತ್ರಜ್ಞಾನವನ್ನು ಸಮಾಜದ ಒಳಿತಿಗಾಗಿ ಹೇಗೆ ಬಳಸುತ್ತೇವೆ ಎಂಬ ದೃಷ್ಟಿಕೋನವನ್ನು ಗಮನಿಸಲಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಕೌಶಲ್ಯ ಮತ್ತು ನವೀನತೆಯತ್ತ ಚಿತ್ತ ಹರಿಸುತ್ತಿದೆ. ಕಾಲೇಜು ಎಂದರೆ ಕೇವಲ ತರಗತಿ ಕೊಠಡಿಗಳಲ್ಲ, ಭವಿಷ್ಯದ ಆವಿಷ್ಕಾರಗಳನ್ನು ಹುಟ್ಟುಹಾಕುವ ಆವಿಷ್ಕಾರಿ ಕೇಂದ್ರಗಳಾಗಬೇಕು ಎಂಬ ಅಪೇಕ್ಷೆ ಹೆಚ್ಚುತ್ತಿದೆ. ಅದಕ್ಕೆ ಪೂರಕವೆಂಬಂತೆ ವಿದ್ಯಾರ್ಥಿಗಳು ಅಣಿಗೊಳ್ಳಬೇಕಿದೆ ಎಂದು ಹೇಳಿದರು.
ಆ್ಯಪ್ ಸ್ಪರ್ಶಕ್ಕೆ ಪ್ರಜ್ವಲಿಸಿದ ಉದ್ಘಾಟನಾ ದೀಪ
ಎಲೆಕ್ಟ್ರಾನಿಕ್ಸ್ ಸರ್ಕ್ಯೂಟ್ ಆಧಾರಿತವಾಗಿ ವಿನ್ಯಾಸಗೊಳಿಸಿದ್ದ ದೀಪಸ್ತಂಭವನ್ನು ಅತಿಥಿಗಳು ಮೊಬೈಲ್ ಆ್ಯಪ್ ಮೂಲಕ ಬಟನ್ ಒತ್ತಿ, ದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ಪೂರ ಮತ್ತು ಬತ್ತಿಯ ಸಂಯೋಜನೆಯಲ್ಲಿ ತಂತ್ರಜ್ಞಾನದ ಮೂಲಕ ಪ್ರಜ್ವಲಿಸಿದ ದೀಪವು ನೆರೆದಿದ್ದವರನ್ನು ಆಕರ್ಷಿಸಿತು. ಆರ್ಡಿನೊ ಹಾಗೂ ರಿಲೆ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾದ ಈ ನವೀನ ದೀಪಸ್ತಂಭವನ್ನು ವಿದ್ಯಾರ್ಥಿಗಳು ಬ್ಲೂಟುತ್ ಸಂವಹನ ವ್ಯವಸ್ಥೆಯೊಂದಿಗೆ ಸಂಯೋಜಿಸಿದ್ದರು.
ಸಂಶೋಧನ ಡೀನ್ ಡಾ.ಎಸ್.ವಿ.ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕರಾದ ಡಾ.ಪ್ರೇಮಾ.ಕೆ.ಎನ್, ರೂಪಾ.ಬಿ.ಎಸ್, ಸ್ಮೀತಾ.ಎಸ್.ಎಂ, ವಿದ್ಯಾರ್ಥಿ ಸಂಯೋಜಕರಾದ ಅನಿರುದ್, ಪ್ರಾರ್ಥನ, ಸ್ಪೂರ್ತಿ, ವಿಕಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ರಾಜ್ಯದ 16 ಇಂಜಿನಿಯರಿಂಗ್ ಕಾಲೇಜಿನ 150 ಕ್ಕೂ ಹೆಚ್ಚು ವಿದ್ಯಾರ್ಥಿ ತಂಡಗಳು ಭಾಗವಹಿಸಿದ್ದರು. ಹಾಬಿ ಪ್ರಾಜೆಕ್ಟ್, ರಿಕ್ರೂಟ್ ಎಕ್ಸ್, ಬಗ್ ಬೌಂಟಿ, ಇಂಡಸ್ಟ್ರಿ 4.0, ಪೇಪರ್ ಪ್ರೆಸೆಂಟೇಶನ್, ಹ್ಯಾಕ್-ಎಕ್ಸ್, ಎಂಜಿನಿಯರಿಂಗ್ ಎ ವೇ ಔಟ್ ನಂತಹ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















