ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಿದ್ದರಾಮಯ್ಯ Siddaramaiah ಬಿಟ್ಟು ಯಾರೇ ಸಿಎಂ ಆದರೂ ಅದು ತಾತ್ಕಾಲಿಕ. ಅವಧಿ ಪೂರ್ವ ಚುನಾವಣೆ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ B Y Vijayendra ಭವಿಷ್ಯ ನುಡಿದರು.
ಅವರು ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ ಮುಖ್ಯಮಂತ್ರಿಗಳನ್ನು ಬದಲಿಸಲು ಮುಂದಾಗಿದೆ. ಕೊನೆಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರಾಜ್ಯ ಸರ್ಕಾರದ ವೈಫಲ್ಯ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳನ್ನು ಬದಲಾಯಿಸಲು ಮುಂದಾಗಿದೆ. ಇದು ಇಡೀ ದೇಶದಲ್ಲಿ ಕಾಂಗ್ರೆಸ್ ಅವನತಿಗೆ ಮುನ್ಸೂಚನೆಯಾಗಿದೆ. ನಿನ್ನೆ ದೆಹಲಿಯಲ್ಲಿ 5 ಗಂಟೆಗಳ ಕಾಲ ಮ್ಯಾರಾಥಾನ್ ಸಭೆ ನಡೆದಿದೆ. ಸಭೆಯ ಕೊನೆಗೆ ಮುಖ್ಯಮಂತ್ರಿ ರಾಜಿನಾಮೆಗೆ ನಿರ್ಧಾರವಾಗಿದೆ. ಭ್ರಷ್ಟಾಚಾರದ ವೈಫಲ್ಯ ಹೊಂದಿದ ಆರೋಪವಿರುವ ಸಿದ್ದರಾಮಯ್ಯನವರ ರಾಜೀನಾಮೆಗೆ ಹೈಕಮಾಂಡ್ ಅನುಮೋದಿಸಿದೆ ಎಂದು ಹೇಳಿದ್ದಾರೆ ಟೀಕಿಸಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ 12 ವರ್ಷ ಪೂರೈಸಿದ ಶುಭ ಘಳಿಗೆಯಲ್ಲಿ ಅವರಿಗೆ ಅಭಿನಂದಿಸುತ್ತೇನೆ. ಯುಪಿಎ ಅವಧಿಯಲ್ಲಿ ಅತ್ಯಂತ ಕೆಟ್ಟ ಬ್ರಷ್ಟಾಚಾರದ ಆಡಳಿತವಿತ್ತು. ಜನತೆ ದೇಶದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದರು. ಆ ಸಂದರ್ಭದಲ್ಲಿ ದೇಶದ ಚುಕ್ಕಾಣಿ ಹಿಡಿದು ಅಭಿವೃದ್ಧಿ ಪಥದತ್ತ ದೇಶವನ್ನು ಕೊಂಡೊಯ್ದು ಜನತೆಯ ವಿಶ್ವಾಸ ಗಳಿಸಿದ್ದಾರೆ. ಚುನಾಯಿತ ಪ್ರತಿನಿಧಿಯಾಗಿ ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ದೇಶದ ಆಡಳಿತ ನೀಡಿದ ಕೀರ್ತಿ ಮೋದಿಯವರದ್ದಾಗಲಿದೆ. ಅವರ ಅವಧಿಯಲ್ಲಿ ಒಂದೇ ಒಂದು ಬ್ರöಷ್ಟಾಚಾರದ ಆರೋಪ ಬಂದಿಲ್ಲ. ಕೋವಿಡ್ ಸಂದರ್ಭದಲ್ಲಿ ಇಷ್ಟು ದೊಡ್ಡ ದೇಶವನ್ನು ಯಶಸ್ವಿಯಾಗಿ ನಿರ್ವಹಿಸಿದ ಉದಾಹರಣೆ ನಮ್ಮ ಕಣ್ಣ ಮುಂದಿದೆ. ವಿಶ್ವದಲ್ಲೇ ಭಾರತ ನಾಲ್ಕನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗುವತ್ತ ಸದೃಢ, ಸುಭದ್ರ ಆಡಳಿತ ನೀಡಿ ಸರ್ವಕಾಲಿಕ ದಾಖಲೆ ಮುರಿದಿದ್ದಾರೆ. ಅವರ ವಿಕಸಿತ ಭಾರತದ ಸಂಕಲ್ಪ ನೆರವೇರಿಸುವಲ್ಲಿ ದೇಶದ ಜನತೆಯ ಆಶೀರ್ವಾದ, ಹಾರೈಕೆ ಅವರಿಗೆ ದೊರೆಯಲಿ.
-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಸಿದ್ದರಾಮಯ್ಯನವರು ರಾಜೀನಾಮೆ ನೀಡಿ ಯಾರೇ ಮುಖ್ಯಮಂತ್ರಿಯಾದರೂ ಅದರ ಆಯ್ಕೆ ಅಷ್ಟು ಸಲೀಸಾಗಿ ಆಗುವುದಿಲ್ಲ. ರಾಜ್ಯ ಸರ್ಕಾರದಲ್ಲಿ ಗೊಂದಲ ಶುರುವಾಗಲಿದೆ. ಯಾರು ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದು ಮುಖ್ಯವಲ್ಲ ಎಂದ ಅವರು ಕೊನೆಗೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರಾಜ್ಯ ಸರ್ಕಾರದ ವೈಫಲ್ಯ ಒಪ್ಪಿಕೊಂಡಿದೆ. ದೇಶದಲ್ಲಿ ಕಾಂಗ್ರೆಸ್ ಅವನತಿ ಶುರುವಾಗಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಳಿಕ ಕರ್ನಾಟಕದಲ್ಲೂ ಕೂಡ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ ಎಂದು ತಿಳಿಸಿದರು.
ನನಗೆ ಸಿದ್ದರಾಮ್ಯನವರ ಬಗ್ಗೆ ಯಾವುದೇ ದ್ವೇಷವಿಲ್ಲ. ಆದರೆ ದಕ್ಷಿಣ ಭಾರತದಲ್ಲೇ ಇತರ ರಾಜ್ಯಗಳಿಗೆ ಹೋಲಿಸಿದರೆ ಹತ್ತು ಲಕ್ಷ ಕೋಟಿ ರೂ.ಸಾಲ ಮಾಡುವುದರ ಮೂಲಕ ಸಿದ್ದರಾಮಯ್ಯ ದಾಖಲೆ ಮುರಿದಿದ್ದಾರೆ. ಉಪ ಚುನಾವಣೆಯ ಗೆಲುವು ಅವರ ಸಾಧನೆಗೆ ಮಾನದಂಡವಲ್ಲ. ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ಆಡಳಿತ ಯಂತ್ರ ಕುಸಿದಿದೆ. ಇದು ಭ್ರಷ್ಟಾಚಾರದ ಸರ್ಕಾರವೆಂದು ಕಾಂಗ್ರೆಸ್ ಹೈಕಮಾಂಡೇ ಒಪ್ಪಿಕೊಂಡ ಹಾಗಾಗಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಬದಲು ಯಾರು ಸಿಎಂ ಆಗುತ್ತಾರೆ ಎನ್ನುವುದು ಮುಖ್ಯವಲ್ಲ. ಸಿದ್ದರಾಮಯ್ಯ ಅತಿಹೆಚ್ಚು ಅನುಭವವಿರುವ ಮುಖ್ಯಮಂತ್ರಿ.
ಆದರೂ ಸಿದ್ದರಾಮಯ್ಯ ಅವಧಿಯಲ್ಲಿ ಹತ್ತು ಲಕ್ಷ ಕೋಟಿ ರೂ. ಸಾಲವಾಗಿದೆ. ಆಂತರಿಕ ಕಚ್ಚಾಟದಿಂದ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ವಾಲ್ಮೀಕಿ, ಮೂಡಾ ಹೀಗೆ ಹಲವು ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡ ಏಕೈಕ ರಾಜ್ಯ ಕರ್ನಾಟಕವಾಗಿದೆ. ಒಟ್ಟಾರೆ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದ ರಾಜ್ಯ ಸರ್ಕಾರವನ್ನು ಬದಲಾಯಿಸಲು ಕಾಂಗ್ರೆಸ್ ಹೈಕಮಾಂಡ್ ಹೊರಟಿದೆ ಎಂದು ಆರೋಪಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















