ಕಲ್ಪ ಮೀಡಿಯಾ ಹೌಸ್ | ಸೊರಬ |
ಪರಿಸರದೊಂದಿಗೆ ಹೊಂದಿಕೊಂಡು ಬದುಕುವ ರೂಢಿಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಪ್ರಕೃತಿ ನಮ್ಮೊಂದಿಗೆ ಇಲ್ಲ, ನಾವು ಪ್ರಕೃತಿಯೊಂದಿಗೆ ಇದ್ದೇವೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಪರ್ಯಾವರಣ ಸಂರಕ್ಷಣ ಗತಿವಿಧಿ ಕಾರ್ಯಕರ್ತ ಶ್ರೀಪಾದ ಬಿಚ್ಚುಗತ್ತಿ ಹೇಳಿದರು.
ವಿಶ್ವ ಪರಿಸರ ದಿನದ #WorldEnvironmentDay ಅಂಗವಾಗಿ ಪಟ್ಟಣದ ಅಮರಜ್ಯೋತಿ ಪದವಿಪೂರ್ವ ಕಾಲೇಜಿನಲ್ಲಿ ನೂತನ ಸಸ್ಯೋದ್ಯಾನ (ಬೊಟಾನಿಕಲ್ ಗಾರ್ಡನ್) ಉದ್ಘಾಟಿಸಿ ಅವರು ಮಾತನಾಡಿದರು.
Also Read>> ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿಗೆ ಅಗತ್ಯ ಬಂಡವಾಳ: ಕೇಂದ್ರ ಸಚಿವ ಕುಮಾರಸ್ವಾಮಿ ಭರವಸೆ
ಪ್ರಕೃತಿ ಮಾನವನ ಬದುಕಿಗೆ ಪೂರಕವಾಗಿ ಅನೇಕ ಸಸ್ಯ, ಪ್ರಾಣಿ ಹಾಗೂ ಜೀವಸಂಕುಲಗಳನ್ನು ಸೃಷ್ಟಿಸಿದ್ದು, ಅವೆಲ್ಲವೂ ಕೇವಲ ಭೋಗಕ್ಕಾಗಿ ಅಲ್ಲ. ಮಾನವನ ಸ್ವಾರ್ಥ, ದುರಾಸೆ ಹಾಗೂ ಅಪಕ್ವ ಜ್ಞಾನದಿಂದ ಪರಿಸರ ನಲುಗುತ್ತಿದ್ದು, ಪರಿಸರದತ್ತ ನಿರ್ಲಕ್ಷ್ಯ ಮುಂದುವರಿದರೆ ಮಾನವಕುಲದ ವಿನಾಶ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಪರಿಸರ ಸಂರಕ್ಷಣೆ ಎಂದರೆ ಕೇವಲ ಗಿಡ ನೆಡುವುದಲ್ಲ, ಈಗಿರುವ ಪರಿಸರವನ್ನು ಉಳಿಸಿ ಬೆಳೆಸುವುದೂ ಅಷ್ಟೇ ಮುಖ್ಯವಾಗಿದೆ. ದಿನನಿತ್ಯ ಬಳಕೆಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸೂಕ್ತವಾಗಿ ವಿಲೇವಾರಿ ಮಾಡುವ ಮೂಲಕ ಪ್ರತಿಯೊಬ್ಬರೂ ಪರಿಸರ ರಕ್ಷಣೆಗೆ ಕೈಜೋಡಿಸಬಹುದು ಎಂದು ತಿಳಿಸಿದರು.
ಕಾಲೇಜಿನಲ್ಲಿ ಔಷಧೀಯ ಸಸ್ಯಗಳನ್ನು ಒಳಗೊಂಡ ಸಸ್ಯೋದ್ಯಾನ ನಿರ್ಮಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ವಿದ್ಯಾರ್ಥಿಗಳು ಸಸ್ಯಗಳ ಸಂರಕ್ಷಣೆಯ ಜೊತೆಗೆ ಅವುಗಳ ಮಹತ್ವ ಮತ್ತು ಔಷಧೀಯ ಗುಣಗಳ ಬಗ್ಗೆ ತಿಳಿದುಕೊಳ್ಳಬೇಕು. ಪರಿಸರ ಸಂರಕ್ಷಣೆಯ ಜ್ಞಾನವನ್ನು ವೃದ್ಧಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಲೋಳೆಸರ, ಅಮೃತಬಳ್ಳಿ, ಮಂಗರಬಳ್ಳಿ ಹಾಗೂ ದೊಡ್ಡಪತ್ರೆ ಸೇರಿದಂತೆ ವಿವಿಧ ಔಷಧೀಯ ಸಸ್ಯಗಳನ್ನು ನೆಡಲಾಯಿತು. ಸಸ್ಯಗಳ ಔಷಧೀಯ ಗುಣಗಳು ಮತ್ತು ಉಪಯೋಗಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ಸಿಲ್ವಿಯಾ ‘ಬೊಟಾನಿಕಲ್ ಗಾರ್ಡನ್’ ನಾಮಫಲಕವನ್ನು ಅನಾವರಣಗೊಳಿಸಿ, ಸಸ್ಯಗಳನ್ನು ಬೆಳೆಸಿ ಉಳಿಸುವ ಜವಾಬ್ದಾರಿ ಹಾಗೂ ಪರಿಸರ ಕಾಳಜಿಯ ಮಹತ್ವವನ್ನು ವಿವರಿಸಿದರು.
ರಸಾಯನಶಾಸ್ತ್ರ ಉಪನ್ಯಾಸಕ ಸಚಿನ್ ಪಿಪಿಟಿ ಮೂಲಕ ಮಲೆನಾಡು ಪ್ರದೇಶದ ಜೀವವೈವಿಧ್ಯ ಹಾಗೂ ಸಸ್ಯಸಂಕುಲವನ್ನು ಸಂರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದರು.
ಉಪಪ್ರಾಂಶುಪಾಲರಾದ ಸಿಸ್ಟರ್ ಹರ್ಷಿತ, ಪಿಆರ್‌ಒ ಮಂಜಪ್ಪ, ಉಪನ್ಯಾಸಕರಾದ ಪ್ರಜ್ವಲ್ ಚಂದ್ರಗುತ್ತಿ, ಸುಬ್ರಾಯ್ ಹಳ್ಳರ್, ನೇಸರ, ಜುಬೇದ, ಅಶ್ವಿನಿ ಸೇರಿದಂತೆ ಅಧ್ಯಾಪಕರು ಉಪಸ್ಥಿತರಿದ್ದರು.
ಸಂಜನಾ ಸ್ವಾಗತಿಸಿ, ರಿಸೇಲ್ ಹಾಗೂ ಲಿನ್ನಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಜನಿಲಿ ವಂದಿಸಿದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















