ಕಲ್ಪ ಮೀಡಿಯಾ ಹೌಸ್ | ಸಾಗರ |
ಬಂಗಾರದ ನಾಣ್ಯಗಳನ್ನು Gold Coin ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ, ಮೈಸೂರು ಮೂಲದ ವ್ಯಕ್ತಿಯೊಬ್ಬರಿಂದ ₹10 ಲಕ್ಷ ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ದೋಚಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರಿನ ಕೆ.ಆರ್.ಪುರ ನಿವಾಸಿ ಜಗದೀಶ್ ಜೆ. (41) ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ಈ ಸಂಬಂಧ ಅವರ ದೂರಿನ ಮೇರೆಗೆ ಆನಂದಪುರ ಪೊಲೀಸರು ಮಂಜು ಸೇರಿದಂತೆ ಇನ್ನೂ ಐವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳು ತಮ್ಮ ಬಳಿ 1 ಕೆಜಿ ಬಂಗಾರದ ನಾಣ್ಯಗಳಿದ್ದು, ₹10 ಲಕ್ಷಕ್ಕೆ ಅರ್ಧ ಕೆಜಿ ಬಂಗಾರ ನೀಡುವುದಾಗಿ ಜಗದೀಶ್ ಅವರನ್ನು ನಂಬಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಗದೀಶ್ ಜೋಗಿನಗದ್ದೆ ಗ್ರಾಮಕ್ಕೆ ಬಂದು, ಪರಿಚಿತರಾಗಿದ್ದ ಇಬ್ಬರಿಗೆ ₹10 ಲಕ್ಷ ನಗದು ನೀಡಿದ್ದಾರೆ.
Also read: ಶಿವಮೊಗ್ಗಕ್ಕೆ ಇಂಡಿಗೋ ಬೆನ್ನಲ್ಲೇ ಸ್ಪೈಸ್ ಜೆಟ್ ವಿಮಾನ ಸೇವೆಯೂ ಸ್ಥಗಿತ | ಕಾರಣವೇನು?
ಈ ವೇಳೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಆರೋಪಿಗಳು ಸ್ಥಳದಲ್ಲಿದ್ದವರನ್ನು ಬೆದರಿಸಿ, ನಗದು ಹಾಗೂ ಜಗದೀಶ್ ಅವರ ಎರಡು ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಬಳಿಕ ಅಲ್ಲಿದ್ದ ಇನ್ನಿಬ್ಬರು ಸಹ ಸ್ಥಳದಿಂದ ನಾಪತ್ತೆಯಾಗಿದ್ದಾರೆ.
ಘಟನೆಯ ಸಂಬಂಧ ಒಟ್ಟು ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















