ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂಡಿಗೋ ವಿಮಾನ Indigo Flight ಸೇವೆ ಸ್ಥಗಿತಗೊಂಡ ಬೆನ್ನಲ್ಲೇ, ಶಿವಮೊಗ್ಗಕ್ಕೆ ಬರುತ್ತಿದ್ದ ಸ್ಪೈಸ್ ಜೆಟ್ SpiceJet ವಿಮಾನಯಾನ ಸೇವೆಯೂ ರದ್ದಾಗಿದೆ. ಇದರೊಂದಿಗೆ ಸಂಸ್ಥೆ ತನ್ನ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯನ್ನೂ ಸ್ಥಗಿತಗೊಳಿಸಿದೆ.
ಸ್ಪೈಸ್ ಜೆಟ್ ಸಂಸ್ಥೆ ಚೆನ್ನೈ–ಶಿವಮೊಗ್ಗ–ಚೆನ್ನೈ ಹಾಗೂ ಹೈದರಾಬಾದ್–ಶಿವಮೊಗ್ಗ–ಹೈದರಾಬಾದ್ ಮಾರ್ಗಗಳಲ್ಲಿ ವಿಮಾನ ಸೇವೆ ಒದಗಿಸುತ್ತಿತ್ತು. ಜೂನ್ 1ರಿಂದ ಚೆನ್ನೈ ಮಾರ್ಗದ ಹಾಗೂ ಜೂನ್ 2ರಿಂದ ಹೈದರಾಬಾದ್ ಮಾರ್ಗದ ಸೇವೆಗಳು ಸ್ಥಗಿತಗೊಂಡಿದ್ದು, ಕಳೆದ ಐದು ದಿನಗಳಿಂದ ವಿಮಾನ ಹಾರಾಟ ಸಂಪೂರ್ಣ ನಿಂತಿದೆ. ಇದರಿಂದ ಪ್ರಯಾಣಿಕರಲ್ಲಿ ಗೊಂದಲ ಉಂಟಾಗಿದೆ.
ಸೇವೆ ರದ್ದಾದ ಹಿನ್ನೆಲೆಯಲ್ಲಿ ಆನ್‌ಲೈನ್ ಮತ್ತು ಏಜೆನ್ಸಿಗಳ ಮೂಲಕ ನಡೆಯುತ್ತಿದ್ದ ಟಿಕೆಟ್ ಬುಕ್ಕಿಂಗ್ ಕೂಡ ನಿಲ್ಲಿಸಲಾಗಿದೆ. ಹೀಗಾಗಿ ಪ್ರಯಾಣಿಕರಿಗೆ ಮುಂಗಡವಾಗಿ ಸೀಟು ಕಾಯ್ದಿರಿಸಲು ಅವಕಾಶ ಇಲ್ಲದಂತಾಗಿದೆ.
ಶಿವಮೊಗ್ಗ ವಿಮಾನ ನಿಲ್ದಾಣದಿಂದ 2024ರ ಅಕ್ಟೋಬರ್ 10ರಂದು ಆರಂಭವಾದ ಸ್ಪೈಸ್ ಜೆಟ್ ಹೈದರಾಬಾದ್ ಮಾರ್ಗಕ್ಕೆ ಉತ್ತಮ ಬೇಡಿಕೆ ಇದ್ದರೂ, ಸಂಸ್ಥೆ ಏಕಾಏಕಿ ಸೇವೆ ನಿಲ್ಲಿಸಿದ್ದು, ಕಾರಣ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಬಗ್ಗೆ ವಿಮಾನ ನಿಲ್ದಾಣದ ಸಿಬ್ಬಂದಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಇದಕ್ಕೂ ಮೊದಲು ಇಂಡಿಗೋ ಸಂಸ್ಥೆ ಬೆಂಗಳೂರು–ಶಿವಮೊಗ್ಗ ಮಾರ್ಗದ ಸೇವೆಯನ್ನು ಮೇ 1, 2026ರಿಂದ ಸ್ಥಗಿತಗೊಳಿಸಿತ್ತು. ಈ ನಡುವೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಲಾಗಿದ್ದರೂ, ಇದೀಗ ಸ್ಪೈಸ್ ಜೆಟ್ ಸೇವೆಯೂ ರದ್ದಾಗಿರುವುದು ಹಿನ್ನಡೆಯಾಗಿದೆ.
ಪ್ರಸ್ತುತ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸ್ಟಾರ್ ಏರ್‌ಲೈನ್ಸ್ ಮಾತ್ರ ಸೇವೆ ನೀಡುತ್ತಿದೆ. ಈ ಸಂಸ್ಥೆ ಹೈದರಾಬಾದ್, ತಿರುಪತಿ ಮತ್ತು ಗೋವಾ ಮಾರ್ಗಗಳಲ್ಲಿ ದಿನನಿತ್ಯ ಹಾರಾಟ ನಡೆಸುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















