ಕಲ್ಪ ಮೀಡಿಯಾ ಹೌಸ್ | ಮಲಪ್ಪುರಂ |
ನಡುರಸ್ತೆಯ ಮಧ್ಯೆ ಒಂಟಿಯಾಗಿ ಕುಳಿತಿದ್ದ ಪುಟಾಣಿ ಮಗುವನ್ನು Little baby crawled into the middle of traffic ಖಾಸಗಿ ಬಸ್ ಸಿಬ್ಬಂದಿ ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಮಲಪ್ಪುರಂ ಜಿಲ್ಲೆಯ ಕೊಂಡೊಟ್ಟಿ ಸಮೀಪದ ಪುಲಿಕ್ಕಲ್ಲ ಕಿನಾರಪಡಿ ಬಳಿಯ ಒಲವತ್ತೂರು–ಫಾರೂಕ್ ಪಿಡಬ್ಲ್ಯೂಡಿ ರಸ್ತೆಯಲ್ಲಿ ಬೆಳಗ್ಗೆ ಸುಮಾರು 8.30ರ ವೇಳೆಗೆ ಈ ಘಟನೆ ಸಂಭವಿಸಿದೆ. ಒಲವತ್ತೂರಿನಿಂದ ಫಾರೂಕ್ ಕಡೆಗೆ ಸಂಚರಿಸುತ್ತಿದ್ದ ‘ಸಫಾ ಮರ್ವಾ’ ಖಾಸಗಿ ಬಸ್ ತಿರುವೊಂದನ್ನು ದಾಟುತ್ತಿದ್ದ ವೇಳೆ, ರಸ್ತೆಯ ಮಧ್ಯೆ ಪುಟ್ಟ ಮಗು ಒಂಟಿಯಾಗಿ ಕುಳಿತಿರುವುದು ಚಾಲಕ ರಾಮಚಂದ್ರನ್ ಅವರ ಗಮನಕ್ಕೆ ಬಂದಿದೆ.
ತಕ್ಷಣವೇ ಅಪಾಯವನ್ನು ಅರಿತ ಚಾಲಕ ರಾಮಚಂದ್ರನ್ ಸಮಯಪ್ರಜ್ಞೆ ಮೆರೆದು ಭೀಕರ ಬ್ರೇಕ್ ಹಾಕಿ ಬಸ್‌ನ್ನು ಮಗುವಿನ ಸಮೀಪದಲ್ಲೇ ಸುರಕ್ಷಿತವಾಗಿ ನಿಲ್ಲಿಸಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
Also read: ಪೆಟ್ರೋಲ್ ಬಂಕ್‌ಗಳಿಂದ ಸಗಟು ಇಂಧನ ಖರೀದಿಗೆ ತಾತ್ಕಾಲಿಕ ನಿರ್ಬಂಧ
ಬಸ್ ನಿಂತ ಕೂಡಲೇ ನಿರ್ವಾಹಕ (ಕಂಡಕ್ಟರ್) ನವಾಸ್ ಅಲಿ ಸೀಟಿನಿಂದ ಜಿಗಿದು ರಸ್ತೆಗೆ ಧಾವಿಸಿ ಮಗುವನ್ನು ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಬಳಿಕ ಮಗುವನ್ನು ಅದರ ಕುಟುಂಬಸ್ಥರ ವಶಕ್ಕೆ ಒಪ್ಪಿಸಿದರು.
ಚಾಲಕ ಮತ್ತು ನಿರ್ವಾಹಕರ ಸಮಯೋಚಿತ ಕ್ರಮದಿಂದ ಪುಟಾಣಿ ಮಗುವಿನ ಪ್ರಾಣ ಉಳಿದಿದ್ದು, ಅವರ ಮಾನವೀಯತೆ ಮತ್ತು ಕರ್ತವ್ಯನಿಷ್ಠೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಸ್ ಸಿಬ್ಬಂದಿಯ ಕಾರ್ಯಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















