ಕಲ್ಪ ಮೀಡಿಯಾ ಹೌಸ್ | ಸೊರಬ |
ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಗೆ ಹೆದರದೆ ಕಠಿಣ ಪರಿಶ್ರಮದಿಂದ ಶಿಕ್ಷಣ ಮುಂದುವರಿಸಿದರೆ ಭವಿಷ್ಯದಲ್ಲಿ ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ ರೂಪಗೊಳ್ಳಲು ಸಾಧ್ಯ ಎಂದು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪ್ರಭು ಸಾಹುಕಾರ್ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಸಲಹೆ ನೀಡಿದರು.
ಪಟ್ಟಣದ ಹೊಸಪೇಟೆ ಬಡಾವಣೆಯ ವೇಣುಗೋಪಾಲ್ ಅವರ ಮನೆ ಆವರಣದಲ್ಲಿ 20 ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Also Read>> ಬೆಂಗಳೂರು: ವೃದ್ಧಾಶ್ರಮಕ್ಕೆ ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯಿಂದ ನೆರವು
ನಿವೃತ್ತ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರುಂಧತಿ ಕಾಳೆ ಮಾತನಾಡಿ, ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು ಹಾಗೂ ಅವರ ದೈನಂದಿನ ಚಟುವಟಿಕೆಗಳ ಮೇಲೆ ಪಾಲಕರು ಗಮನಹರಿಸುವುದು ಅಗತ್ಯ. ಜೊತೆಗೆ ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದ ದೂರವಿಡುವ ಮೂಲಕ ಆರೋಗ್ಯಕರ ಹಾಗೂ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಬಿಎಸ್ಎನ್ಎಲ್ ನಿವೃತ್ತ ವ್ಯವಸ್ಥಾಪಕ ವೇಣುಗೋಪಾಲ್ ಮಾತನಾಡಿ, ಶಿಕ್ಷಣ ಸಾಮಗ್ರಿಗಳನ್ನು ದೇವರ ಕೊಡುಗೆಯಂತೆ ಕಾಣಬೇಕು. ಅವುಗಳ ಮೇಲೆ ಶ್ರದ್ಧೆ ಮತ್ತು ಭಕ್ತಿ ಇಟ್ಟರೆ ಭವಿಷ್ಯದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ಜ್ಞಾನಪ್ರಭ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಜ್ವಲ್ ಚಂದ್ರಗುತ್ತಿ ಮಾತನಾಡಿ, ತಾಲೂಕಿನ ವಿವಿಧ ಗ್ರಾಮಗಳಿಂದ ಆಯ್ಕೆಗೊಂಡ ಬಡ ವಿದ್ಯಾರ್ಥಿಗಳಿಗೆ ರಾಗಿಣಿ ಮತ್ತು ವೇಣುಗೋಪಾಲ್ ದಂಪತಿಗಳು ಶೈಕ್ಷಣಿಕ ಸಾಮಗ್ರಿಗಳನ್ನು ನೀಡಿರುವುದನ್ನು ಕೃತಜ್ಞತೆಯಿಂದ ಸ್ಮರಿಸಿ ಸ್ವಾಗತಿಸಿದರು.
ಕುಮಾರಿ ಇಂಪನ ಭಗವದ್ಗೀತೆ ಶ್ಲೋಕ ಪಠಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಂ.ಕೆ. ಮಂಜಪ್ಪ ಕಾರ್ಯಕ್ರಮ ನಿರೂಪಣೆ ಮಾಡಿದರು. ಗಣಪತಿ ಹೊಸಕೊಪ್ಪ ವಂದಿಸಿದರು.
Also Read>> India Launches Worldwide Campaign for International Day of Yoga 2026
ಈ ಸಂದರ್ಭದಲ್ಲಿ ರಾಗಿಣಿ ವೇಣುಗೋಪಾಲ್, ಚೇತನಾ, ಬಸವರಾಜ್ ನಡಹಳ್ಳಿ, ಕುಮಾರಿ ಹೇಮಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಗೆಂಡ್ಲ ಹೊಸೂರು, ಯಲಸಿ, ಸೊರಬ, ಹೆಚ್ಚೆ, ವೊಕ್ಕಲಗೊಪ್ಪ, ಹೊಸಕೊಪ್ಪ, ಗುಂಜನೂರು, ಅಂಬ್ಲಿಕೊಪ್ಪ ಗ್ರಾಮಗಳ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















