ಕಲ್ಪ ಮೀಡಿಯಾ ಹೌಸ್ | ಬ್ರಾಟಿಸ್ಲಾವಾ (ಸ್ಲೋವಾಕಿಯಾ) |
ಯುರೋಪ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡನೇ ಹಂತದ ವಿದೇಶ ಪ್ರವಾಸದ ಅಂಗವಾಗಿ ಸ್ಲೋವಾಕಿಯಾಗೆ ಆಗಮಿಸಿದ್ದು, ಈ ಭೇಟಿ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ.
1993ರಲ್ಲಿ ಸ್ಲೋವಾಕಿಯಾ ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡ ಬಳಿಕ ಭಾರತದ ಪ್ರಧಾನಿಯೊಬ್ಬರು ಆ ದೇಶಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಗೆ ಎಂಬುದು ವಿಶೇಷವಾಗಿದೆ.
ಎರಡು ದಿನಗಳ ಈ ಮಹತ್ವದ ಭೇಟಿಯ ವೇಳೆ ಪ್ರಧಾನಿ ಮೋದಿ, ಸ್ಲೋವಾಕಿಯಾದ ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನಿ ಹಾಗೂ ಪ್ರಧಾನಿ ರಾಬರ್ಟ್ ಫಿಕೋ ಅವರೊಂದಿಗೆ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ, ಆರ್ಥಿಕ ಹಾಗೂ ತಂತ್ರಜ್ಞಾನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆಗಳು ನಡೆಯಲಿವೆ.
ಸ್ಲೋವಾಕಿಯಾಗೆ ಆಗಮಿಸಿದ ಬಳಿಕ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಈ ಭೇಟಿ ಭಾರತ–ಸ್ಲೋವಾಕಿಯಾ ಸ್ನೇಹವನ್ನು ಗಟ್ಟಿಗೊಳಿಸುವುದರ ಜೊತೆಗೆ ಹೊಸ ಸಹಕಾರದ ಅವಕಾಶಗಳನ್ನು ಅನ್ವೇಷಿಸಲು ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫ್ರಾನ್ಸ್ ಪ್ರವಾಸ ಮುಗಿಸಿ ಸ್ಲೋವಾಕಿಯಾಗೆ ಬಂದಿಳಿದ ಪ್ರಧಾನಿಯವರನ್ನು ಅಲ್ಲಿನ ವಿದೇಶಾಂಗ ಸಚಿವ ಜುರಾಜ್ ಬ್ಲಾನಾರ್ ಆತ್ಮೀಯವಾಗಿ ಸ್ವಾಗತಿಸಿದರು. ಸ್ಲೋವಾಕಿಯಾದ ಸಂಪ್ರದಾಯದಂತೆ ‘ಬ್ರೆಡ್ ಮತ್ತು ಉಪ್ಪು’ ನೀಡಿ ಗೌರವ ಸೂಚಿಸಲಾಯಿತು.
ಇತ್ತೀಚಿನ ವರ್ಷಗಳಲ್ಲಿ ಭಾರತ ಮತ್ತು ಸ್ಲೋವಾಕಿಯಾ ನಡುವಿನ ಸಂಬಂಧಗಳು ಗಮನಾರ್ಹವಾಗಿ ವೃದ್ಧಿಯಾಗಿದೆ. 2025ರಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ಲೋವಾಕಿಯಾಗೆ ಭೇಟಿ ನೀಡಿದ್ದರೆ, 2026ರಲ್ಲಿ ಅಧ್ಯಕ್ಷ ಪೆಲ್ಲೆಗ್ರಿನಿ ಭಾರತದಲ್ಲಿ ನಡೆದ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಈ ಭೇಟಿ ಉಭಯ ರಾಷ್ಟ್ರಗಳ ಸಂಬಂಧಗಳಿಗೆ ಹೊಸ ದಿಕ್ಕು ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















